ದಾವಣಗೆರೆ: ತರಳಬಾಳು ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಹೇಳಿದ ಮೇಲೆ ನಾನು ಮೌನವಾಗಿದ್ದೇನೆಂದು ಜನರು ಹೇಳುತ್ತಿದ್ದಾರೆ. ಹರಿಹರ ಮತ್ತು ಹರಪನಹಳ್ಳಿ ತಾಲೂಕಿನಲ್ಲಿ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಒಡೆತನದ ಕಾರ್ಖಾನೆ ಬಳಿಯ ಹಳ್ಳ ಮುಚ್ಚಿದ್ದ ಕುರಿತ ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ. ಈ ಹೋರಾಟದಲ್ಲಿ ಯಶಸ್ವಿಯಾಗಿದ್ದೇನೆ. ಹಳ್ಳವನ್ನು ಮುಚ್ಚಲಾಗಿದೆಯೆಂದು ರಾಜ್ಯ ಸರ್ಕಾರವೇ ಅಧಿಕೃತವಾಗಿ ಹೇಳಿದೆ ಎಂದು ಹರಿಹರ ಶಾಸಕ ಬಿ. ಪಿ. ಹರೀಶ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹೋರಾಟ ಪ್ರಾರಂಭ ಮಾಡಿದ ಮೇಲೆ ಹಳ್ಳವನ್ನು ಮತ್ತೊಮ್ಮೆ ತೆಗೆಯುವ ಪ್ರಯತ್ನ ನಡೆಯಿತಾದರೂ ಆಗಲಿಲ್ಲ. ಹಳ್ಳ ಮುಚ್ಚಿರುವುದು ಕಾಪಾಡಬೇಕಾಗಿರುವುದು ಜಿಲ್ಲಾಧಿಕಾರಿಗಳ ಕೆಲಸ. ಸದನದಲ್ಲಿ ಶಾಸಕರೊಬ್ಬರು ಹಳ್ಳ ಮುಚ್ಚಿ ಕಾನೂನು ವಿರೋಧವಾಗಿ ನಡೆದುಕೊಂಡಿದ್ದಾರೆಂದು ಅನೇಕ ಬಾರಿ ಹೋರಾಟ ಮಾಡಿದ್ದರಿಂದ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡವು ನಾನು ಮಾಡಿದ್ದ ಆರೋಪದಲ್ಲಿ ಸತ್ಯವಿದೆ ಎಂಬ ವರದಿ ನೀಡಿದ್ದರೂ
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಪರಿಶೀಲನೆ ಮಾಡಲು ಇನ್ನೂ ಹೋಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಬಹಳಷ್ಟು ಪ್ರಚಾರ ಪ್ರಿಯರು. ಕಳಕಳಿ ಇದೆ. ಮಕ್ಕಳು ಬೈಕ್ ನಲ್ಲಿ ಹೋದರೆ ಹಿಡಿದು ನಿಲ್ಲಿಸುವುದು, ಆರೋಗ್ಯದ ಬಗ್ಗೆ ಕಾಳಜಿ ಇರುವುದು ಒಳ್ಳೆಯದು. ಪ್ರಕೃತಿ ವಿರುದ್ಧವಾಗಿ ಮಾಡುತ್ತಿದ್ದರೂ ಡಿಸಿ ಸ್ಥಳಕ್ಕೆ ಹೋಗಿ
ಪರಿಶೀಲಿಸಿ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಸರ್ಕಾರವು ತನಿಖಾ ವರದಿ ಕೊಟ್ಟರೂ ಗಮನ ಹರಿಸಲು ತಯಾರಿಲ್ಲವೆಂದಾದರೂ ಯಾರ ಸೇವೆ ಮಾಡಲು ಜಿಲ್ಲೆಗೆ ಬಂದಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಕಾಡಜ್ಜಿ ಕೃಷಿ ಇಲಾಖೆಯ ಜಮೀನಿನಲ್ಲಿ ಮಲ್ಲಿಕಾರ್ಜುನ್ ಅವರು ತಮ್ಮ ಭೂಮಿ ಸಮತಟ್ಟು ಮಾಡಿಕೊಳ್ಳಲು ಸರ್ಕಾರಿ ಜಾಗದ ಮಣ್ಣು ತೆಗೆದುಕೊಂಡು ಹೋಗಿದ್ದಾರೆ ಎಂಬ ದೂರು ನೀಡಿದ್ದರೂ ಸರ್ಕಾರ ಆಸ್ತಿಯಲ್ಲಿ ಕಳ್ಳತನ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಡಿಸಿ ಇದುವರೆಗೆ ನನಗಾದರೂ ಆಗಲಿ, ಜನರಿಗಾಗಲೀ ತಿಳಿಸುವ ಕೆಲಸ ಆಗಿಲ್ಲ. ನನ್ನ ವಿರುದ್ಧ ಸುಳ್ಳು ಅಟ್ರಾಸಿಟಿ ಕೇಸ್ ಹಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಣ್ಣು ಕದ್ದ ಕಳ್ಳನ ಬಗ್ಗೆ ಪೊಲೀಸರು ಕೇಸ್ ಹಾಕಿಲ್ಲ, ಚಕಾರವನ್ನೇ ಎತ್ತುತ್ತಿಲ್ಲ. ನನಗೆ ಜಾತಿ ನಿಂದನೆ ಕೇಸ್ ಹಾಕುವ ಮೂಲಕ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ನ್ಯಾಯ ಕೇಳುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳಿನಿಂದಲೂ ಮೌನವಾಗಿದ್ದೆ. ಅಸಹ್ಯವಾಗುತ್ತಿದೆ. ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಆದರೂ ಯಾವುದೇ ಹೋರಾಟ ಕೈಗೆತ್ತಿಕೊಂಡಾಗ ತಾರ್ಕಿಕ ಅಂತ್ಯ ಕಾಣಿಸಲೇಬೇಕೆಂಬ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದರು.





Leave a comment