ದಾವಣಗೆರೆ: “ಸಚಿವರು ಅಥವಾ ಶಾಸಕರು ಅಕ್ರಮ ನಡೆಸಿದರೆ ನೇರವಾಗಿ ನನಗೆ ಫೋನ್ ಮಾಡಿ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದ ಬೆನ್ನಲ್ಲೇ, ದಾವಣಗೆರೆ ಜಿಲ್ಲಾಡಳಿತದ ಕಾರ್ಯವೈಖರಿಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಅಕ್ರಮ ಮಣ್ಣು ಸಾಗಾಟ, ರೈತರ ಜಮೀನು ಕಬಳಿಕೆ ಸೇರಿದಂತೆ ಇತರೆ ಪ್ರಕರಣಗಳಲ್ಲಿನ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯ ಮತ್ತು ಜಿಲ್ಲಾ ನಾಯಕರ ಜೊತೆ ಚರ್ಚಿಸಿ ಹೋರಾಟ ಶುರು ಮಾಡುತ್ತೇನೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನ್ಯಾಯ ಕೇಳುವವರ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿ ಹೆದರಿಸುವ ಪ್ರಯತ್ನ ನಡೆಯುತ್ತಿದೆ. ಶಾಸಕನಾದ ನನ್ನ ಮೇಲೆಯೇ ಇಂಥ ಕೇಸ್ ದಾಖಲಿಸಿದರೆ ಜನಸಾಮಾನ್ಯರು ಪ್ರಶ್ನೆ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಹರಿಹರ ಹಾಗೂ ಹರಪನಹಳ್ಳಿ ಭಾಗದಲ್ಲಿ ಪ್ರಭಾವಿ ರಾಜಕಾರಣಿಗಳು ಎಸ್‌ಸಿ,ಎಸ್‌ಟಿ ಬಡ ರೈತರ ಜಮೀನು ಒತ್ತುವರಿ ಮಾಡಿ, ನೈಸರ್ಗಿಕ ಹಳ್ಳದ ದಿಕ್ಕನ್ನೇ ಬದಲಾಯಿಸುತ್ತಿದ್ದರೂ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿಲ್ಲ. ಅಷ್ಟೇ ಅಲ್ಲದೆ, ಕಾಡಜ್ಜಿ ಗ್ರಾಮದ ಕೃಷಿ ಬೀಜ ಉತ್ಪನ್ನ ಕೇಂದ್ರದ ಜಮೀನಿನಿಂದ ಸಾವಿರಾರು ಲೋಡ್ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದ ದಂಧೆಯನ್ನು ಖುದ್ದಾಗಿ ನಾನೇ ತಡೆದಿದ್ದರೂ, ಇಲಾಖೆಯು ಇಂದಿಗೂ ಯಾವುದೇ ಅಧಿಕೃತ ದೂರು ದಾಖಲಿಸದಿರುವುದು ಜಿಲ್ಲಾಡಳಿತದ ನಿಷ್ಕ್ರಿಯತೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು, ಪೊಲೀಸ್ ಇನ್ ಸ್ಪೆಕ್ಟರ್ ಜೊತೆಯಲ್ಲಿ ಹೋಗಿ ಅಕ್ರಮ ಮಣ್ಣು ಸಾಗಾಟ ಪತ್ತೆ ಹಚ್ಚಿದ್ದರೂ ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕುವ ಮೂಲಕ ನ್ಯಾಯ ಹತ್ತಿಕ್ಕುವ ಕೆಲಸ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮಾಡುತ್ತಿದ್ದಾರೆ. ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಸರ್ಕಾರದ ಆಸ್ತಿಗೆ ಧಕ್ಕೆ, ಕದ್ದಂತವರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮತ್ತು ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್ ಹಾಜರಿದ್ದರು.





Leave a comment