SUDDIKSHANA KANNADA NEWS/ DAVANAGERE/ DATE:11-09-2023
ದಾವಣಗೆರೆ (Davanagere): ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋಲಲು ಮತದಾರರು ಕಾರಣರಲ್ಲ. ಪಕ್ಷದೊಳಗಿನ ಕೆಲ ನಾಯಕರ ತಂಡದಿಂದ ಕೇವಲ 864 ಮತಗಳಿಂದ ಸೋಲಬೇಕಾಯಿತು. ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡ ಮತ್ತು ಪುತ್ರರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರ ಬಗ್ಗೆ ನನ್ನ ಬಳಿ ದಾಖಲಾತಿ ಇತ್ತು. ಪಕ್ಷದ ಹೈಕಮಾಂಡ್ ಗೆ ಇದನ್ನು ತಲುಪಿಸಿದ್ದೆ. ಕೇಂದ್ರ ಹಾಗೂ ರಾಜ್ಯ ವರಿಷ್ಠರು ಪರಿಶೀಲನೆ ಮಾಡಿ ಉಚ್ಚಾಟಿಸುವಂತೆ ಸೂಚಿಸಿದ್ದಾರೆ. ಇದಕ್ಕೂ ಸಂಸದ ಡಾ. ಜಿ. ಎಂ. ಸಿದ್ದೇಶ್ವರ್ ಗೂ ಸಂಬಂಧ ಇಲ್ಲ. ಅವರ ಬಗ್ಗೆ ಅಪಪ್ರಚಾರ ಮಾಡಿದರೆ ಸಹಿಸಲ್ಲ ಎಂದು ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲ, ಫೋಟೋಗಳನ್ನು ಮಾಧ್ಯಮದವರ ಮುಂದೆ ತೋರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿ ನಡೆಸಿದ ಪತ್ರಿಕಾಗೋಷ್ಠಿ, ಪ್ರಚಾರದ ವೇಳೆ ಗುರುಸಿದ್ದನಗೌಡ ಹಾಗೂ ಅವರ ಪುತ್ರರು ಪಾಲ್ಗೊಂಡಿದ್ದರ ಫೋಟೋಗಳಿವೆ. ಇನ್ನು ದಾಖಲಾತಿ ನೀಡುತ್ತಾ ಹೋದರೆ ಸಾಕಷ್ಟಿದೆ. ಕೇವಲ 450 ಮತಗಳನ್ನು ಪಡೆದಿದ್ದರೆ ಗೆಲ್ಲುತ್ತಿದೆ. ಜನರು ನನ್ನನ್ನು ಸೋಲಿಸಲಿಲ್ಲ. ನಮ್ಮವರೇ ಸೋಲಿಸಿದರು. ಈ ಕುರಿತಂತೆ ಪಕ್ಷದ ವರಿಷ್ಠರಿಗೆ ನಾನೇ ಪತ್ರ ಬರೆದಿದ್ದೆ. ಅವರು ಪರಮಾರ್ಶಿಸಿ ಜಿಲ್ಲಾ ಘಟಕಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ನಾವು ಗುರುಸಿದ್ದನಗೌಡರ ಜೊತೆ ಕೆಲಸ ಮಾಡಿದವರು. ಅವ್ರು ಆ ರೀತಿ ಮಾಡಿದ್ದಕ್ಕೆ ಪಕ್ಷ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:
Davanagere: ಬಿಜೆಪಿಯಿಂದ ಗುರುಸಿದ್ದನಗೌಡ, ಪುತ್ರರ ಉಚ್ಚಾಟನೆ ಸಮರ್ಥಿಸಿದ ವೀರೇಶ್ ಹನಗವಾಡಿ
ವಿನಾಃಕಾರಣ ಸಿದ್ದೇಶ್ವರ ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆ. ಈ ಕುರಿತಂತೆ ಅವರು ಏನನ್ನೂ ಹೇಳಿಲ್ಲ. ಗಮನಕ್ಕೆ ತಂದಿದ್ದೇವೆ ಅಷ್ಟೇ. ಉಚ್ಚಾಟನೆಗೂ ಸಿದ್ದೇಶ್ವರ ಅವರಿಗೂ ಯಾವುದೇ ಸಂಬಂಧ ಇಲ್ಲ. ನನಗೆ ಆದ ನೋವು, ಮೋಸದ
ಕುರಿತಂತೆ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ಪಕ್ಷದ ನಾಯಕರು ಸಸ್ಪೆಂಡ್ ಮಾಡಿದ್ದಾರೆ. ಸಂಸದರ ಹೊಣೆ ಮಾಡಬೇಡಿ. ಯಾವುದೇ ಸಂಬಂಧ ಇಲ್ಲ. ಈ ವಿಷಯದಲ್ಲಿ ಅವರು ತಲೆಹಾಕಿಲ್ಲ, ತಲೆ ಹಾಕುವುದೂ ಇಲ್ಲ ಎಂದಿದ್ದರು. ನಮಗೆ ಯಾರ ಮೇಲೂ ದ್ವೇಷ ಇಲ್ಲ. ಅವರ ಜೊತೆ ಬೆಳೆದವರು ನಾವು. ಸಕ್ರಿಯ ಕಾರ್ಯಕರ್ತನಾಗಿ ಈಗಲೂ ಕೆಲಸ ಮಾಡುತ್ತಿದ್ದೇನೆ. ಜನರು ಸೋಲಿಸಿಲ್ಲ. ಆರು ಸ್ಥಾನ ಗೆಲ್ಲೋದರಲ್ಲಿ ನಾವು ಒಂದು ಸ್ಥಾನಕ್ಕೆ ಇಳಿಯಲು ಕಾರಣ ನಮ್ಮವರೇ ಎಂದರು.
ವೈರಲ್ ಆಗ್ತಿವೆ ಫೋಟೋಗಳು:
ಜಗಳೂರಿನ ಮಾಜಿ ಶಾಸಕ ಗುರುಸಿದ್ದನಗೌಡ್ರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಬಿಟ್ಟು ಪಕ್ಷೇತರ ಹಾಗೂ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಎಚ್ಪಿ ರಾಜೇಶ್ ಪರ ಬಹಿರಂಗವಾಗಿ ತಮ್ಮ ಮಕ್ಕಳೊಂದಿಗೆ ಅಬ್ಬರದ ಪ್ರಚಾರ ಮಾಡಿದ್ದಾರೆ. ದಾವಣಗೆರೆ ಜಿಲ್ಲೆ ಹಾಗೂ ಇತರೆ ಕಡೆಗಳಲ್ಲಿ ಜಗಜ್ಜಾಹೀರಾಗಿದೆ.
ಈಗ ಅದನ್ನೆಲ್ಲ ಒಳಗೊಂಡು ದಾವಣಗೆರೆ ಬಿಜೆಪಿ ಜಿಲ್ಲಾ ಕಮಿಟಿ ಉಚ್ಚಾಟನೆ ಮಾಡಿದರೆ ನಾನು ಯಾವುದೇ ಪಕ್ಷ ವಿರೋಧ ಚಟುವಟಿಕೆ ಮಾಡಿಲ್ಲ ನಮ್ಮ ಮಕ್ಕಳಿಗೆ ಹೇಗೆ ಚುನಾವಣೆ ಮಾಡಲು ಬಿಜೆಪಿಗೆ ಬೆಂಬಲಿಸಲು ಹೇಳಿದ್ದೇ ಅಂತ ಪತ್ರಿಕಾ ಮಾಧ್ಯಮದವರ ಹತ್ತಿರ ಹೇಳಿದ್ದಾರೆ. ಹಾಗಾದರೆ ಜಗಳೂರಿನಲ್ಲಿ ಪಕ್ಷೇತರ ಅಭ್ಯರ್ಥಿಯ ಚುನಾವಣೆಯ ನಾಮಪತ್ರ ಸಲ್ಲಿಕೆಯಾದ ದಿನ ಇದೇ ಗುರುಸಿದ್ದನ ಗೌಡ್ರು ಜಗಳೂರು ಪಟ್ಟಣದ ಐಬಿ ಸರ್ಕಲ್ ನಲ್ಲಿ ಭಾಗವಹಿಸಿದ್ದು ಸುಳ್ಳಾ…. ಮಕ್ಕಳಾದ ಅರವಿಂದ್ ಮತ್ತು ಪ್ರವೀಣ್ ಇಬ್ಬರು ನಿರಂತರವಾಗಿ ಚುನಾವಣೆ ಪ್ರಾರಂಭದಿಂದಲೂ ಕೊನೆತನಕ ಬಿಜೆಪಿಯ ವಿರುದ್ಧ ಪಕ್ಷೇತರ ಅಭ್ಯರ್ಥಿಗೆ ಬಹಿರಂಗವಾಗಿ ಪ್ರಚಾರಕ್ಕೆ ಮಾಡಿದ್ದು ಸುಳ್ಳಾ….? ಎಂಬ ಪೋಸ್ಟರ್ ಗಳು ವೈರಲ್ ಆಗಿವೆ.
ಇದಕ್ಕೆ ಮಾನ್ಯ ಮಾಜಿ ಶಾಸಕರಾದ ಗುರುಸಿದ್ದನಗೌಡ್ರು ಅವರೇ ಉತ್ತರಿಸಬೇಕು ಎಂಬ ಪೋಸ್ಟ್ ಸಖತ್ ವೈರಲ್ ಆಗ್ತಿದೆ. ಇದಕ್ಕೆನೂ ಉತ್ತರಿಸುತ್ತೀರಾ ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ.
ಇನ್ನು ವೀರೇಶ್ ಹನಗವಾಡಿ ಅವರೂ ಸಹ ಪತ್ರಿಕಾಗೋಷ್ಠಿಯಲ್ಲಿ ಈ ಮಾತು ಪ್ರಸ್ತಾಪ ಮಾಡಿದ್ದಾರೆ. ಗುರುಸಿದ್ದನಗೌಡರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕುರಿತಂತೆ ಮಾಹಿತಿ ಕೇಳಿದ್ದೇವೆ. ವರಿಷ್ಠರ ಸೂಚನೆ ಮೇರೆಗೆ ನಾವು ಕ್ರಮ ತೆಗೆದುಕೊಂಡಿದ್ದೇವೆ. ನೀವು ಅವರ ಬಳಿ ಮಾತನಾಡಿ ಎಂದಿದ್ದೆವು. ಅವರೂ ಸರಿ ಎಂದಿದ್ದರು. ಆದ್ರೆ, ರೇಣುಕಾಚಾರ್ಯ ಅವರು ಗುರುಸಿದ್ದನಗೌಡರ ಮನೆಗೆ ಹೋಗಿ ಗೊಂದಲ ಮೂಡಿಸಿದ್ದಾರೆ. ನಾನೇನೂ ಇಲ್ಲೇ ಜಿಲ್ಲಾಧ್ಯಕ್ಷನಾಗಿರುವುದಿಲ್ಲ. ಅದು ನನಗೂ ಗೊತ್ತು. ವರಿಷ್ಠರು, ರಾಜ್ಯ ನಾಯಕರು ಹೇಳಿದ್ದನ್ನು ಪಾಲಿಸುತ್ತೇನೆ ಅಷ್ಟೇ ಎಂದು ತಿಳಿಸಿದ್ದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಗಳೂರು ಬಿಜೆಪಿ ತಾಲೂಕು ಘಟಕ ಅಧ್ಯಕ್ಷ ಮಹೇಶ್ ಪಲ್ಲಾಗಟ್ಟಿ, ಶಾಂತರಾಜ್ ಪಾಟೀಲ್, ಮಂಜಾನಾಯ್ಕ ಮತ್ತಿತರರು ಹಾಜರಿದ್ದರು.