SUDDIKSHANA KANNADA NEWS/ DAVANAGERE/ DATE:22-02-2024
ದಾವಣಗೆರೆ: ನೆಹರು ಯುವ ಕೇಂದ್ರ ಹಾಗೂ ಕೇಂದ್ರದ ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನಡೆಸಲಾದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ವಿಕಸಿತ್ ಭಾರತ್ -2047 ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ದಾವಣಗೆರೆಯ ಶಿವನಗರದ ನಿಭಾ ನಾಜ್ ಅವರು ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ದಾವಣಗೆರೆಯ ಶಿವನಗರದ ನವೀದ್ ಬಾಷಾ ಮತ್ತು ಜಮೀರಾ ದಂಪತಿ ಪುತ್ರಿ. ಬೆಂಗಳೂರಿನ ವಸಂತ್ ನಗರದಲ್ಲಿ ಬುಧವಾರ ನೆಹರು ಯುವ ಕೇಂದ್ರದ ನಿರ್ದೇಶಕರ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಪಡೆದ ನಿಭಾ ನಾಜ್ ಅವರು 50 ಸಾವಿರ ರೂಪಾಯಿ ನಗದು ಬಹುಮಾನವನ್ನೂ ಪಡೆದಿದ್ದಾರೆ.
ಇಗ್ನೋದಲ್ಲಿ ಎಂ. ಎ. ವ್ಯಾಸಂಗ ಮಾಡುತ್ತಿರುವ ನಿಭಾ ನಾಜ್ ಅವರು ನಗರ ಮಟ್ಟ, ಜಿಲ್ಲಾ ಮಟ್ಟದಲ್ಲಿಯೂ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದಿದ್ದರು. ಈ ಸ್ಪರ್ಧೆಯಲ್ಲಿ ಜಿಲ್ಲೆಯ 48 ಮಂದಿ ಪಾಲ್ಗೊಂಡಿದ್ದರು. ಈಗ ರಾಜ್ಯಮಟ್ಟದ ಸ್ಪರ್ಧೆಯಲ್ಲಿ
ದ್ವಿತೀಯ ಸ್ಥಾನ ಪಡೆಯುವ ಮೂಲಕ ದಾವಣಗೆರೆಗೆ ಕೀರ್ತಿ ತಂದಿದ್ದಾರೆ.
ಕೇಂದ್ರ ಸರ್ಕಾರವು ವಿಕಸಿತ್ ಭಾರತ್ ಪರಿಕಲ್ಪನೆ ಕುರಿತಂತೆ ಯುವ ಸಮುದಾಯದವರಲ್ಲಿ ಜಾಗೃತಿ ಮೂಡಿಸುವುದು, ವಿಚಾರ ತಿಳಿಸುವುದು, ಮಾಹಿತಿ ನೀಡುವುದೂ ಸೇರಿದಂತೆ ಇತರೆ ವಿಷಯಗಳ ಕುರಿತಂತೆ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತಿದೆ. ಪಾರ್ಲಿಮೆಂಟ್ ನ ಸೆಂಟ್ರಲ್ ಹಾಲ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ನಿಭಾ ನಾಜ್ ಅವರ ಈ ಸಾಧನೆಗೆ ಕಾಂಗ್ರೆಸ್ ನ ಹಿರಿಯ ಮುಖಂಡ ಸೈಯದ್ ಸೈಫುಲ್ಲಾ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇಂಥ ಸ್ಪರ್ಧೆಯಲ್ಲಿ ದ್ವಿತೀಯ
ಸ್ಥಾನ ಪಡೆಯುವ ಮೂಲಕ ದಾವಣಗೆರೆ ಜಿಲ್ಲೆಯು ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತ ಸಾಧನೆ ಎಂದು ಬಣ್ಣಿಸಿದ್ದಾರೆ.