SUDDIKSHANA KANNADA NEWS/ DAVANAGERE/ DATE:05-02-2025
ದಾವಣಗೆರೆ: ಆಕಸ್ಮಿಕ ಬೆಂಕಿ ತಗುಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ನಗರದ ಶಾಮನೂರು ರಸ್ತೆಯ ಕಾಸೆಲ್ ಆರ್ಕೆಡ್ ಬಹುಮಹಡಿ ಕಟ್ಟಡದಲ್ಲಿ ನಡೆದಿದೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಂಗಳವಾರ ರಾತ್ರಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರು, ಪೊಲೀಸರು ಸುಮಾರು 2 ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿ, ಬೆಂಕಿ ನಂದಿಸುವಲ್ಲಿ ಯಶಸ್ವಿ.ಯಾದರು.
ಮಂಗಳವಾರ ರಾತ್ರಿ 8.30ಕ್ಕೆ ಕಾಸೆಲ್ ಆರ್ಕೆಡ್ ನ ಅನಿಮೇಶನ್ ಅಂಡ್ ಸ್ನೋಕರ್ ಜೋನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರ್ಧ ಗಂಟೆಯೊಳಗೆ ದಟ್ಟ ಹೊಗೆ ಆವರಿಸಿದ್ದು, ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.
ಭಾರೀ ಗಾತ್ರದ ಗಾಜು ಒಡೆದು ಜೋನ್ ಬಾಗಿಲು ಮುರಿದು ಒಳಗಡೆ ಪ್ರವೇಶಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಅಗ್ನಿ ಶಾಮಕ ದಳದ ವಾಹನದಲ್ಲಿನ ನೀರು ಖಾಲಿಯಾಗಿ ಸ್ವಲ್ಪ ಹೊತ್ತು ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಮಹಾನಗರ ಪಾಲಿಕೆಯ ಟ್ಯಾಂಕರ್ ಸ್ಥಳಕ್ಕೆ ಬಂದು ಅಗ್ನಿನಂದಕ ವಾಹನಕ್ಕೆ ನೀರು ತುಂಬಿಸಿ ಕಾರ್ಯಾಚರಣೆ ಮುಂದುವರಿಸಲಾಯಿತು. ಕಂಪ್ಯೂಟರ್ ಸೇರಿದಂತೆ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಈ ಬಗ್ಗೆ ಮಾಹಿತಿ ನೀಡಿದ ಅಗ್ನಿಶಾಮಕ ದಳ ಅಧಿಕಾರಿ ಎಂ. ಎನ್. ನಾಗೇಶ್ ಅವರು, ಕಟ್ಟಡಕ್ಕೆ ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಹೋದೆವು. ಕಟ್ಟಡದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಆಗಿರುವ ಸಾಧ್ಯತೆ ಇದೆ. ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.