SUDDIKSHANA KANNADA NEWS/ DAVANAGERE/ DATE:04-02-2025
ದಾವಣಗೆರೆ: ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿ ಎಂದರೆ ಬಿಜೆಪಿ ಪಕ್ಷ ಹಾಳು ಮಾಡಲು ಷಡ್ಯಂತ್ರ ರೂಪಿಸಿದ್ದಾರೆ. ಅವರು ದೆಹಲಿಗೆ ಎಷ್ಟು ಬಾರಿ ದಂಡಯಾತ್ರೆ ಬೇಕಾದರೂ ಹೋಗಲಿ. ನಾವೇನೂ ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಸಭೆ ಸೇರುತ್ತೇವೆ, ಚರ್ಚೆ ಮಾಡುತ್ತೇವೆ. ನಾವೂ ದಿಲ್ಲಿಗೆ ಹೋಗಲು ಸಿದ್ಧ. ನಮಗೇನೂ ದಿಲ್ಲಿ ನಾಯಕರು ಗೊತ್ತಿಲ್ಲವಾ. ಎಷ್ಟು ಬೇಕಾದರೂ ಯಾತ್ರೆ ಮಾಡಲಿ. ಅವರ ದುಡ್ಡು, ಅವರ ಹೋರಾಟ. ಇದು ಯಾವುದೇ ಕಾರಣಕ್ಕೂ ಫಲಿಸಲ್ಲ. ಬಿ. ವೈ. ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ.
ಇದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಸೇರಿದಂತೆ ಭಿನ್ನಮತೀಯ ನಾಯಕರ ವಿರುದ್ಧ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಗುಡುಗಿದ ಪರಿ.
ಮಾಡಬಾರದ ಭ್ರಷ್ಟಾಚಾರ ಮಾಡಿದ್ದೀರಾ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಾ. ಹೋರಾಟ ಯಾರ ವಿರುದ್ಧ ಇರಬೇಕಿತ್ತು ಕಾಂಗ್ರೆಸ್ ವಿರುದ್ಧ ಇರಬೇಕಿಕ್ಕು, ಪಕ್ಷ ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ಯಡಿಯೂರಪ್ಪರ ಬಗ್ಗೆ ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ ಹುಚ್ಚುಚ್ಚಾಗಿ ಆಟವಾಡುತ್ತಿದ್ದಾರೆ. ಇದೇ ರೀತಿಯಾದರೆ ನಮಗೂ ದಿಲ್ಲಿಗೆ ಹೋಗುವುದು ಗೊತ್ತಿದೆ. ಯಡಿಯೂರಪ್ಪ, ವಿಜಯೇಂದ್ರ ನಮ್ಮ ನಾಯಕರು. ಅವರೇ ಯಾರೂ ಸಭೆ ನಡೆಸಬೇಡಿ, ಪಕ್ಷ ಸಂಘಟನೆಯತ್ತ ಗಮನ ಕೊಡಿ ಎಂದಿದ್ದಾರೆ. ಆದ್ರೆ, ಭಿನ್ನಮತೀಯರು ಮಾತ್ರ ಭಿನ್ನಮತ ಚಟುವಟಿಕೆಗಳಲ್ಲಿ ನಿರತರಾಗಿರುವುದು ಬೇಸರ ತಂದಿದೆ ಎಂದು ಹೇಳಿದರು.
ಭಿನ್ನಮತೀಯರು ಬಿಜೆಪಿ ಹಾಳು ಮಾಡಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಗೊತ್ತಿದ್ದರೆ ನಾಲ್ಕು ಗೋಡೆಗಳ ಮಧ್ಯೆ ಮಾತನಾಡಬೇಕಿತ್ತು. 23 ಜಿಲ್ಲಾಧ್ಯಕ್ಷರ ನೇಮಕದಲ್ಲಿ ವಿಜಯೇಂದ್ರ ಪಾತ್ರ ಇಲ್ಲ ಎಂದು ತಿಳಿಸಿದರು.
ಬಿ. ವೈ. ವಿಜಯೇಂದ್ರರೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಪಕ್ಷದೊಳಗೆ ಆಂತರಿಕ ಚುನಾವಣೆ ನಡೆದರೂ ವಿಜಯೇಂದ್ರ ಅವರೇ ಗೆಲ್ಲುವುದು. ಇದು ಶತಃಸಿದ್ಧ. ರಾಜ್ಯಾಧ್ಯಕ್ಷ ಸ್ಥಾನದ ಕನಸು ಕಾಣುತ್ತಿರುವವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಅವರು ಸಂಘಟನೆ ಹಾಳು ಮಾಡಲು ಬಂದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲ್ಲಲಿ. ಬಿಜೆಪಿ ವರಿಷ್ಠರು ಎಲ್ಲರ ಅಭಿಪ್ರಾಯ ಪಡೆದು ರಾಜ್ಯಾಧ್ಯಕ್ಷರ ಘೋಷಣೆ ಮಾಡುತ್ತಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿ, ಅವರಿಗೆ ಜನರೇ ಛೀಮಾರಿ ಹಾಕುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಸಂಸದ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ವಿ. ಸೋಮಣ್ಣರ ಹೆಸರು ಅನಗತ್ಯವಾಗಿ ಭಿನ್ನಮತೀಯರು ಎಳೆದು ತರುತ್ತಿದ್ದಾರೆ. ಅವರೇನೂ ರಾಜ್ಯಾಧ್ಯಕ್ಷರಾಗುತ್ತೇವೆಂದು ಹೇಳಿಲ್ಲ. ಭಿನ್ನಮತೀಯರು ಬಂಡಾಯ ಸೃಷ್ಟಿ ಮಾಡಿ ಅನಗತ್ಯ ಹೆಸರು ತಳುಕು ಹಾಕುವುದನ್ನು ನಿಲ್ಲಿಸಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.
ಮಾಜಿ ಶಾಸಕರು, ಮಾಜಿ ಸಚಿವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರು ಸೇರಿದಂತೆ ಸುಮಾರು 85 ಮಂದಿ ಸೇರಿದ್ದೇವೆ. ಈಗಾಗಲೇ ಬೆಂಗಳೂರಿನಲ್ಲಿ ಸಭೆ ಮಾಡಿದ್ದೇವೆ. ವಿಜಯೇಂದ್ರರಿಗೆ ಸಂಪೂರ್ಣ ಬೆಂಬಲ ನೀಡಿದ್ದೇವೆ. 23 ಜಿಲ್ಲೆಗಳ ಜಿಲ್ಲಾಧ್ಯಕ್ಷರು ವಿಜಯೇಂದ್ರ ಪರ ಇದ್ದಾರೆ ಎಂದು ತಿಳಿಸಿದರು.