Home ಕ್ರೈಂ ನ್ಯೂಸ್ ‘ಆಟಾ-ಸಾಟಾ’ ಮದುವೆ ಪದ್ಧತಿ ನೈತಿಕವಾಗಿ ದಿವಾಳಿ: ವಿನಿಮಯ ವಿವಾಹದ ವಿರುದ್ಧ ರಾಜಸ್ಥಾನ ಹೈಕೋರ್ಟ್ ಆಕ್ರೋಶ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ಆಟಾ-ಸಾಟಾ’ ಮದುವೆ ಪದ್ಧತಿ ನೈತಿಕವಾಗಿ ದಿವಾಳಿ: ವಿನಿಮಯ ವಿವಾಹದ ವಿರುದ್ಧ ರಾಜಸ್ಥಾನ ಹೈಕೋರ್ಟ್ ಆಕ್ರೋಶ

Share
ಮದುವೆ
Share

ಜೋಧ್‌ಪುರ: “ಸಂಪ್ರದಾಯದ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ‘ಆಟಾ-ಸಾಟಾ’ ಮದುವೆ ಪದ್ಧತಿಯು ಕಾನೂನುಬದ್ಧವಾಗಿ ಮತ್ತು ನೈತಿಕವಾಗಿ ದಿವಾಳಿಯಾಗಿದೆ. ಇದು ಮಾನವ ಜೀವಗಳೊಂದಿಗೆ ಆಟವಾಡುವ ಅತಿ ದೊಡ್ಡ ಅಮಾನವೀಯ ಪದ್ಧತಿ” ಎಂದು ರಾಜಸ್ಥಾನ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿದ ಹೈಕೋರ್ಟ್‌ನ ದ್ವಿಸದಸ್ಯ ಪೀಠ, ಬಿಕಾನೇರ್ ಮೂಲದ ಸಂತ್ರಸ್ತ ಮಹಿಳೆಗೆ ವಿಚ್ಛೇದನ ಮಂಜೂರು ಮಾಡಿದೆ. ಅಲ್ಲದೆ, ಕೌಟುಂಬಿಕ ವಿವಾದಗಳಲ್ಲಿ ಕ್ರೌರ್ಯವನ್ನು ಕ್ರಿಮಿನಲ್ ಪ್ರಕರಣಗಳಂತೆ ‘ಅನುಮಾನಾತೀತವಾಗಿ’ ಸಾಬೀತುಪಡಿಸುವ ಅಗತ್ಯವಿಲ್ಲ. ನಾಗರಿಕ ಕಾನೂನಿನ ‘ಸಾಧ್ಯತೆಗಳ ಪ್ರಾಬಲ್ಯ’ದ (Preponderance of Probabilities) ಆಧಾರದ ಮೇಲೆ ವಿಚ್ಛೇದನ ನೀಡಬಹುದು ಎಂದು ಮಹತ್ವದ ತೀರ್ಪು ನೀಡಿದೆ.

ಏನಿದು ಘಟನೆ?

ಸಂತ್ರಸ್ತ ಮಹಿಳೆಗೆ 2016 ರಲ್ಲಿ ‘ಆಟಾ-ಸಾಟಾ’ (ಒಂದು ಕುಟುಂಬದ ಹೆಣ್ಣನ್ನು ಮತ್ತೊಂದು ಕುಟುಂಬಕ್ಕೆ ಕೊಡುವುದು, ಪ್ರತಿಯಾಗಿ ಅವರ ಮನೆಯ ಹೆಣ್ಣನ್ನು ಈ ಕಡೆಯ ದೇವರಿಗೆ ತರುವುದು) ಪದ್ಧತಿಯಡಿ ವಿವಾಹವಾಗಿತ್ತು. ಅದೇ ದಿನ ಆಕೆಯ ಪತಿಯ ಅಪ್ರಾಪ್ತ ತಂಗಿಯನ್ನು ಸಂತ್ರಸ್ತೆಯ ಸಹೋದರನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಆ ಅಪ್ರಾಪ್ತ ಬಾಲಕಿ ವಯಸ್ಸಿಗೆ ಬಂದ ನಂತರ ಈ ಬಾಲ್ಯವಿವಾಹವನ್ನು ನಿರಾಕರಿಸಿದಳು. ಇದರ ಬೆನ್ನಲ್ಲೇ ಉಭಯ ಕುಟುಂಬಗಳ ನಡುವೆ ಭೀಕರ ಜಗಳ ಆರಂಭವಾಗಿತ್ತು.

ಇದರ ಸೇಡನ್ನು ಸಂತ್ರಸ್ತ ಮಹಿಳೆಯ ಮೇಲೆ ತೀರಿಸಿಕೊಳ್ಳಲು ಆರಂಭಿಸಿದ ಪತಿ ಮತ್ತು ಆತನ ಕುಟುಂಬಸ್ಥರು, ವರದಕ್ಷಿಣೆ ಕಿರುಕುಳ ನೀಡಿ 2020 ರಲ್ಲಿ ಆಕೆಯನ್ನು ಮಗುವಿನೊಂದಿಗೆ ಮನೆಯಿಂದ ಹೊರಹಾಕಿದ್ದರು.

ನ್ಯಾಯಾಲಯದ ಪ್ರಮುಖ ಅವಲೋಕನಗಳು:

ಯಾವ ಸಂಪ್ರದಾಯವೂ ಕಾನೂನಿಗಿಂತ ಮಿಗಿಲಲ್ಲ: ಬಾಲ್ಯದಲ್ಲಿ ಸಾಮಾಜಿಕ ಒತ್ತಡಕ್ಕೆ ಮಣಿದು ನೀಡುವ ಒಪ್ಪಿಗೆಯನ್ನು, ಅವರು ವಯಸ್ಕರಾದ ನಂತರ ‘ಸ್ವತಂತ್ರ ಒಪ್ಪಿಗೆ’ ಎಂದು ಪರಿಗಣಿಸಲು ಸಾಧ್ಯವಿಲ್ಲ.

ಮಹಿಳೆಯರು ಒತ್ತೆಯಾಳುಗಳಲ್ಲ: ಇಂತಹ ವಿನಿಮಯ ಮದುವೆಗಳು ಹೆಣ್ಣುಮಕ್ಕಳನ್ನು ‘ಮಾರುಕಟ್ಟೆಯ ಸರಕು’ಗಳನ್ನಾಗಿ ಮಾಡುತ್ತವೆ. ಒಂದು ಹೆಣ್ಣಿನ ಜೀವನ ಮತ್ತು ಸ್ವಾತಂತ್ರ್ಯವು ಮತ್ತೊಂದು ಹೆಣ್ಣಿನ ವಿಧೇಯತೆಯ ಮೇಲೆ ನಿರ್ಧಾರವಾಗುವಂತೆ ಮಾಡುವುದು ಕ್ರೌರ್ಯ ಎಂದು ಜಸ್ಟಿಸ್ ಅರುಣ್ ಮೊಂಗಾ ಮತ್ತು ಜಸ್ಟಿಸ್ ಸುನಿಲ್ ಬೆನಿವಾಲ್ ಅವರ ಪೀಠ ಹೇಳಿದೆ.

ಕೊನೆಗೆ, ತನ್ನ ನೆಮ್ಮದಿಯೇ ಮುಖ್ಯ ಎಂದು ತೀರ್ಮಾನಿಸಿದ ಮಹಿಳೆ, ಪತಿಯಿಂದ ಯಾವುದೇ ರೀತಿಯ ಜೀವನಾಂಶ (Alimony) ಬೇಡವೆಂದು ಲಿಖಿತವಾಗಿ ತಿಳಿಸಿದ ಹಿನ್ನೆಲೆಯಲ್ಲಿ ಕೋರ್ಟ್ ತಕ್ಷಣವೇ ವಿಚ್ಛೇದನ ಮಂಜೂರು ಮಾಡಿದೆ. ಆದರೆ, ಪತಿ ಮತ್ತು ಮಾವನ ವಿರುದ್ಧದ ಕ್ರಿಮಿನಲ್ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಗಳು ಸ್ವತಂತ್ರವಾಗಿ ಮುಂದುವರಿಯಲಿವೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Share

Leave a comment

Leave a Reply

Your email address will not be published. Required fields are marked *