Home ಕ್ರೈಂ ನ್ಯೂಸ್ ಪಂಜಾಬಿ ಗಾಯಕಿ ಇಂದರ್ ಕೌರ್ ಭೀಕರ ಕೊಲೆ: ಮದುವೆ ನಿರಾಕರಿಸಿದ್ದಕ್ಕೆ ಕಿಡ್ನ್ಯಾಪ್ ಮಾಡಿ ಕಾಲುವೆಗೆ ಎಸೆದ ಕೆನಡಾ ಅನಿವಾಸಿ ಭಾರತೀಯ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪಂಜಾಬಿ ಗಾಯಕಿ ಇಂದರ್ ಕೌರ್ ಭೀಕರ ಕೊಲೆ: ಮದುವೆ ನಿರಾಕರಿಸಿದ್ದಕ್ಕೆ ಕಿಡ್ನ್ಯಾಪ್ ಮಾಡಿ ಕಾಲುವೆಗೆ ಎಸೆದ ಕೆನಡಾ ಅನಿವಾಸಿ ಭಾರತೀಯ!

Share
ಪಂಜಾಬಿ
Share

ಲುಧಿಯಾನ: ಪಂಜಾಬಿ ಚಿತ್ರರಂಗದ ಉದಯೋನ್ಮುಖ ಗಾಯಕಿ ಇಂದರ್ ಕೌರ್ (ಯಶಿಂದರ್ ಕೌರ್) ಅವರ ಭೀಕರ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕಳೆದ ಆರು ದಿನಗಳ ಹಿಂದೆ ಗನ್ ಪಾಯಿಂಟ್‌ನಲ್ಲಿ ಅಪಹರಣಕ್ಕೊಳಗಾಗಿದ್ದ 29 ವರ್ಷದ ಗಾಯಕಿಯ ಶವ ಮಂಗಳವಾರ ಲುಧಿಯಾನದ ‘ನೀಲೋ ಕಾಲುವೆ’ಯಲ್ಲಿ ಪತ್ತೆಯಾಗಿದೆ. ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಕೆನಡಾ ಮೂಲದ ಅನಿವಾಸಿ ಭಾರತೀಯನೊಬ್ಬ ಈ ಹತ್ಯೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಪರಾರಿಯಾದ ಮುಖ್ಯ ಆರೋಪಿ ಸುಖ್ವಿಂದರ್ ಸಿಂಗ್:

ಮೃತ ಗಾಯಕಿ ಇಂದರ್ ಕೌರ್ ಅವರ ಸಹೋದರ ಜೊತಿಂದರ್ ಸಿಂಗ್ ನೀಡಿರುವ ದೂರಿನ ಅನ್ವಯ ಮೊಗಾ ಜಿಲ್ಲೆಯ ಭಾಲೂರ್ ನಿವಾಸಿ ಸುಖ್ವಿಂದರ್ ಸಿಂಗ್ (ಸುಖಾ) ಮತ್ತು ಆತನ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಸುಖ್ವಿಂದರ್, ಇಂದರ್ ಕೌರ್‌ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಆತನಿಗೆ ಈಗಾಗಲೇ ಕೆನಡಾದಲ್ಲಿ ಪತ್ನಿ ಮತ್ತು ಮಕ್ಕಳಿದ್ದಾರೆ ಎಂಬ ಸತ್ಯ ತಿಳಿದ ಇಂದರ್ ಕೌರ್, ಮದುವೆ ಪ್ರಸ್ತಾಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ಇದರಿಂದ ಪ್ರಚೋದಿತನಾದ ಆರೋಪಿ, ಸೇಡು ತೀರಿಸಿಕೊಳ್ಳಲು ಕೆನಡಾದಿಂದ ನೇಪಾಳ ಮಾರ್ಗವಾಗಿ ಪಂಜಾಬ್‌ಗೆ ಬಂದಿದ್ದ ಎಂದು ತಿಳಿದುಬಂದಿದೆ.

ಗನ್ ಪಾಯಿಂಟ್‌ನಲ್ಲಿ ಕಿಡ್ನ್ಯಾಪ್, ಕಾರಿನಲ್ಲೇ ಕೊಲೆ ಶಂಕೆ:

ಮೇ 13 ರಂದು ರಾತ್ರಿ 8:30 ರ ಸುಮಾರಿಗೆ ಇಂದರ್ ಕೌರ್ ದಿನಸಿ ಸಾಮಗ್ರಿ ಖರೀದಿಸಲು ತಮ್ಮ ಫೋರ್ಡ್ ಫಿಗೋ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಈ ವೇಳೆ ಆರೋಪಿ ಸುಖ್ವಿಂದರ್ ಮತ್ತು ಆತನ ಗ್ಯಾಂಗ್ ಗಾಯಕಿ ಇಂದರ್ ಕೌರ್ ಅವರನ್ನು ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದಾರೆ. ತನಿಖೆಯ ವೇಳೆ ಪತ್ತೆಯಾದ ಗಾಯಕಿಯ ಕಾರಿನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಕಾರಿನೊಳಗೇ ಆಕೆಯನ್ನು ಕೊಲೆ ಮಾಡಿ ಬಳಿಕ ಶವವನ್ನು ಕಾಲುವೆಗೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೃತ್ಯ ಎಸಗಿದ ತಕ್ಷಣವೇ ಮುಖ್ಯ ಆರೋಪಿ ಸುಖ್ವಿಂದರ್ ಮತ್ತೆ ನೇಪಾಳದ ಮೂಲಕ ಕೆನಡಾಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮೂವರ ಬಂಧನ, ಪೊಲೀಸ್ ವೈಫಲ್ಯಕ್ಕೆ ಆಕ್ರೋಶ:

ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಾಲ್‌ಪುರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿ ಸುಖ್ವಿಂದರ್ ಸಿಂಗ್ ತಂದೆ ಪ್ರೀತಮ್ ಸಿಂಗ್ ಸೇರಿದಂತೆ ಕರಮ್‌ಜೀತ್ ಸಿಂಗ್ ಮತ್ತು ರವೀಂದರ್ ಸಿಂಗ್ ಎಂಬ ಮೂವರು ಸಹಚರರನ್ನು ಬಂಧಿಸಿದ್ದಾರೆ. ಆದರೆ, ಮೇ 15 ರಂದೇ ಕಿಡ್ನ್ಯಾಪ್ ದೂರು ನೀಡಿದ್ದರೂ ಪೊಲೀಸರು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಇಂದರ್ ಕೌರ್ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲುಧಿಯಾನ ಪೊಲೀಸರು ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *