ಅಹಮದಾಬಾದ್: ಅಮೆರಿಕದ ಪೌರತ್ವ ಹೊಂದಿರುವ 46 ವರ್ಷದ ಎನ್‌ಆರ್‌ಐ ಮಹಿಳೆಯೊಬ್ಬರು ತಮ್ಮ 3ನೇ ಪತಿಯ ವಿರುದ್ಧ ವಂಚನೆ, ದೈಹಿಕ ಹೂಡಿಕೆ ಹಾಗೂ ವರದಕ್ಷಿಣೆ ಕಿರುಕುಳದ ಗಂಭೀರ ಆರೋಪಗಳನ್ನು ಹೊರಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ಮದುವೆಯಾದ ಕೇವಲ 15 ದಿನಗಳಲ್ಲೇ ಪತಿಯ ಚಾಟಿಂಗ್ ಮತ್ತು ಅಕ್ರಮ ಸಂಬಂಧಗಳು ಬಯಲಿಗೆ ಬಂದಿವೆ.
ಘಟನೆಯ ಹಿನ್ನೆಲೆ:
ಎರಡು ಬಾರಿ ವಿಚ್ಛೇದನ ಪಡೆದಿದ್ದ ಈ ಮಹಿಳೆ, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಅಹಮದಾಬಾದ್ ಮೂಲದ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡು ಮದುವೆಯಾಗಿದ್ದರು. ಮದುವೆಯ ನಂತರ ಪತಿ ಸದಾ ಮೊಬೈಲ್‌ನಲ್ಲೇ ನಿರತನಾಗಿರುವುದನ್ನು ಕಂಡು ಮಹಿಳೆಗೆ ಅನುಮಾನ ವ್ಯಕ್ತವಾಯಿತು. ಆತನ ಫೋನ್ ತಪಾಸಣೆ ನಡೆಸಿದಾಗ ಗೋವಾ, ಅಮೆರಿಕ ಮತ್ತು ಅಹಮದಾಬಾದ್‌ನ ಸುಮಾರು 15ಕ್ಕೂ ಹೆಚ್ಚು ಯುವತಿಯರೊಂದಿಗೆ ರೊಮ್ಯಾಂಟಿಕ್ ಚಾಟ್ ಮಾಡಿರುವುದು ಬೆಳಕಿಗೆ ಬಂದಿದೆ.
ದೈಹಿಕ ಹಲ್ಲೆ ಹಾಗೂ ಜೂಜಾಟ:
ಈ ಬಗ್ಗೆ ಪತಿಯನ್ನು ಪ್ರಶ್ನಿಸಿದಾಗ, ಆತ ಆಕೆಗೆ ಗಂಭೀರವಾಗಿ ಹಲ್ಲೆ ನಡೆಸಿ ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಗೋವಾ ಮತ್ತು ಬಾಲಿ ಪ್ರವಾಸದ ವೇಳೆ ಪತಿ ಜೂಜಾಟದಲ್ಲಿ ಅಪಾರ ಪ್ರಮಾಣದ ಹಣ ಕಳೆದುಕೊಂಡಿದ್ದ ಹಾಗೂ ಮದ್ಯದ ವ್ಯಸನಿಯಾಗಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಗೋವಾ ಪ್ರವಾಸದಲ್ಲಿ ಆತನ ಪ್ರಿಯತಮೆಯೊಬ್ಬಳು ತಾನೇ ಆತನ ಹೆಂಡತಿ ಎಂದು ಹೇಳಿಕೊಂಡಾಗ, ಅದನ್ನು ಪ್ರಶ್ನಿಸಿದ ಎನ್‌ಆರ್‌ಐ ಮಹಿಳೆಯ ಕೈಯನ್ನು ಬಲವಂತವಾಗಿ ಎಳೆದು ಮಣಿಕಟ್ಟಿಗೆ ಗಂಭೀರ ಗಾಯಗೊಳಿಸಲಾಗಿತ್ತು.
ಆರ್ಥಿಕ ಶೋಷಣೆ ಮತ್ತು ವರದಕ್ಷಿಣೆ ಕಿರುಕುಳ
ಮಹಿಳೆಯ ತಂದೆ ಆಸ್ತಿ ಮಾರಿ ಪಡೆದ ಹಣವನ್ನು ವರದಕ್ಷಿಣೆಯಾಗಿ ನೀಡುವಂತೆ ಪತಿ ಪೀಡಿಸುತ್ತಿದ್ದ. ಅಲ್ಲದೆ, ಮಹಿಳೆ ತವರು ಮನೆಯಿಂದ ತಂದಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವುದಾಗಿ ನಂಬಿಸಿ ಕಸಿದುಕೊಂಡು, ನಂತರ ವಾಪಸ್ ನೀಡಲು ನಿರಾಕರಿಸಿದ್ದ.
ಪೊಲೀಸ್ ತನಿಖೆ:
ಮಹಿಳೆ ಅಹಮದಾಬಾದ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಒಬ್ಬ ಮಗ ಮತ್ತು ಮಗಳಿದ್ದಾರೆ ಎಂಬುದು ತಿಳಿದುಬಂದಿದೆ. ಆರೋಪಿ ಪತಿ ಹಾಗೂ ಆತನ ಮಕ್ಕಳು ಸೇರಿ ಮಹಿಳೆಗೆ ಬೆದರಿಕೆ ಹಾಕಿ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರೆಂದು ತನಿಖೆಯಿಂದ ತಿಳಿದುಬಂದಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.





Leave a comment