ದಾವಣಗೆರೆ: ನ್ಯಾಮತಿ ಪಟ್ಟಣದ ವೇದ ಗ್ಯಾಸ್ ಏಜೆನ್ಸಿಯು ಕಳೆದ ಎಂಟು ತಿಂಗಳಿನಿಂದ ಸಮಯಕ್ಕೆ ಸರಿಯಾಗಿ ಸಿಲಿಂಡರ್ ವಿತರಿಸದೆ ಗ್ರಾಹಕರನ್ನು ಅಲೆದಾಡಿಸುತ್ತಿದೆ ಎಂದು ಆರೋಪಿಸಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಬಿಜೆಪಿ ಮುಖಂಡರು ಗ್ರಾಹಕರೊಂದಿಗೆ ಸೇರಿ ಮಂಗಳವಾರ ಏಜೆನ್ಸಿ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಮಸ್ಯೆಗೆ ಸ್ಪಂದಿಸದ ಏಜೆನ್ಸಿ:
ನ್ಯಾಮತಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಕಳೆದ ಎಂಟು ತಿಂಗಳಿನಿಂದ ಸರಿಯಾಗಿ ಸಿಲಿಂಡರ್ ಪೂರೈಕೆಯಾಗುತ್ತಿರಲಿಲ್ಲ. ಹಲವು ಬಾರಿ ಮನವಿ ಮಾಡಿದರೂ ಏಜೆನ್ಸಿ ಮಾಲೀಕ, ಮಾಜಿ ಸೈನಿಕ ಚಂದ್ರಪ್ಪ ಸೂಕ್ತ ಸ್ಪಂದನೆ ನೀಡಿರಲಿಲ್ಲ. ಮಂಗಳವಾರ ಮಧ್ಯಾಹ್ನ ಗ್ರಾಹಕರು ಕಚೇರಿಯಲ್ಲಿ ಪ್ರಶ್ನಿಸುತ್ತಿದ್ದ ವೇಳೆ ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ತೀವ್ರಗೊಂಡಿತು. ಈ ವೇಳೆ ಉಂಟಾದ ಗೊಂದಲದಿಂದ ಏಜೆನ್ಸಿ ಮಾಲೀಕ ಸ್ಥಳದಿಂದ ನಿರ್ಗಮಿಸಿದರು.
ಜಿಲ್ಲಾಧಿಕಾರಿಗಳ ಮಧ್ಯಪ್ರವೇಶ:
ಪ್ರತಿಭಟನಾ ಸ್ಥಳದಿಂದಲೇ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಎಂ.ಪಿ. ರೇಣುಕಾಚಾರ್ಯ, “ರಾಜ್ಯದ ಎಲ್ಲೂ ಇಲ್ಲದ ಗ್ಯಾಸ್ ಅಭಾವ ನ್ಯಾಮತಿಯಲ್ಲಿ ಮಾತ್ರ ಏಕೆ?” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಗ್ರಾಹಕರ ಅನುಕೂಲಕ್ಕಾಗಿ ಈಗಾಗಲೇ ಮಲೇಬೆನ್ನೂರು ಹಾಗೂ ಬೆಳಗುತ್ತಿ ಗ್ಯಾಸ್ ಏಜೆನ್ಸಿಗಳ ಮೂಲಕ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಮೂರು ದಿನಗಳ ಗಡುವು:
ಸದರಿ ಏಜೆನ್ಸಿ ಪರವಾನಗಿ ರದ್ದುಪಡಿಸುವಂತೆ ಗ್ರಾಹಕರು ಪಟ್ಟು ಹಿಡಿದಾಗ, ಮೂರು ದಿನಗಳ ಒಳಗಾಗಿ ಗ್ಯಾಸ್ ವಿತರಣೆ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಭರವಸೆ ಮೆರೆಗೆ ಶುಕ್ರವಾರದವರೆಗೆ ಗಡುವು ನೀಡಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಏಜೆನ್ಸಿ ಮಾಲೀಕ ಅಸ್ವಸ್ಥ:
ಪ್ರತಿಭಟನೆ ಮುಗಿದ ನಂತರ ಫೋಟೋ ತೆಗೆಯುವ ವಿಚಾರದಲ್ಲಿ ಮಾಲೀಕರ ಕುಟುಂಬದವರು ಹಾಗೂ ಸಾರ್ವಜನಿಕರ ನಡುವೆ ಮತ್ತೆ ಮಾತಿನ ಚಕಮಕಿ ನಡೆದು ಗೊಂದಲ ಉಂಟಾಯಿತು. ಈ ಹಂತದಲ್ಲಿ ಏಜೆನ್ಸಿ ಮಾಲೀಕ ಚಂದ್ರಪ್ಪ ಹಠಾತ್ತಾಗಿ ಕುಸಿದು ಬಿದ್ದಿದ್ದು, ತಕ್ಷಣವೇ ಅವರನ್ನು ಖಾಸಗಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ.ಪಿ. ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ರಾಯ್ಕರ್, ಉಪಾಧ್ಯಕ್ಷ ಸೋಗಿ ರಾಜಣ್ಣ, ಕೋಡಿಕೊಪ್ಪ ಎಸ್.ಪಿ. ರವಿಕುಮಾರ್, ಬಳ್ಳಾರಿ ಸೋಮಶೇಖರ್ ವಾಲ್ಮೀಕಿ, ಸತೀಶ್ ರೆಡ್ಡಿ ಸಿಂಹ ಸೇರಿದಂತೆ ನೂರಾರು ಗ್ರಾಹಕರು ಭಾಗವಹಿಸಿದ್ದರು.





Leave a comment