ಛತ್ತೀಸ್‌ಗಢ: ಮುಂಬೈನಿಂದ ಬೈಕ್ ರೈಡ್ ಕೈಗೊಂಡಿದ್ದ 24 ವರ್ಷದ ಮಹಿಳಾ ಬೈಕರ್ ರಿದ್ಧಿ ಠಕ್ಕರ್, ಛತ್ತೀಸ್‌ಗಢದ ಧಮ್ತರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-30ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮುಂಬೈನ ಕಾಂದಿವಲಿ ಪಶ್ಚಿಮದ ನಿವಾಸಿಯಾಗಿದ್ದ ರಿದ್ಧಿ, ತಮ್ಮ 23 ಸವಾರರ ಬೈಕಿಂಗ್ ತಂಡದೊಂದಿಗೆ ಬಸ್ತಾರ್ ಪ್ರದೇಶವನ್ನು ವೀಕ್ಷಿಸಲು ತೆರಳುತ್ತಿದ್ದರು. ಬುಧವಾರ ಬೆಳಗಿನ ಜಾವ 5 ರಿಂದ 6 ಗಂಟೆಯ ಸುಮಾರಿಗೆ ಮಾರ್ಕಟೋಲ ಘಾಟ್ ಬಳಿ ವೇಗವಾಗಿ ಬಂದ ಟ್ರೇಲರ್ ಟ್ರಕ್ (Trailer Truck) ಇವರ ಬೈಕ್‌ಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರಿದ್ಧಿ ಅವರನ್ನು ತಕ್ಷಣವೇ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಧಮ್ತರ್ರಿಯ ಶ್ರೀರಾಮ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಅಪಘಾತ ಎಸಗಿದ ಟ್ರೇಲರ್ ಚಾಲಕ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿ ಚಾಲಕನ ಪತ್ತೆಗೆ ಜಾಲ ಬೀಸಿದ್ದಾರೆ. ಧಮ್ತರಿ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





Leave a comment