ನವದೆಹಲಿ: ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲು ತಾವು ಭಾರತ ಬಿಟ್ಟು ಪರಾರಿಯಾಗಿದ್ದೇವೆ ಎಂಬ ಆರೋಪಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಆಯುಕ್ತ ಲಲಿತ್ ಮೋದಿ ತಳ್ಳಿಹಾಕಿದ್ದಾರೆ.
2010ರಲ್ಲಿ ಭೂಗತ ಜಗತ್ತಿನಿಂದ ತಮ್ಮ ಪ್ರಾಣಕ್ಕೆ ಗಂಭೀರ ಬೆದರಿಕೆ ಬಂದ ಹಿನ್ನೆಲೆಯಲ್ಲಿ ತಾವು ದೇಶ ತೊರೆಯುವ ನಿರ್ಧಾರ ಕೈಗೊಂಡೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ತಮ್ಮ ಸಶಸ್ತ್ರ ಪೊಲೀಸ್ ಭದ್ರತೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ಹಿಂಪಡೆದ ಕೇವಲ ಮೂರು ದಿನಗಳ ನಂತರ ತಾವು ಭಾರತವನ್ನು ತೊರೆದಿದ್ದಾಗಿ ಲಲಿತ್ ಮೋದಿ ತಿಳಿಸಿದ್ದಾರೆ. ಆ ಸಮಯದಲ್ಲಿ ತಮ್ಮ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರೀಯ ಏಜೆನ್ಸಿಗಳ ಗುಪ್ತಚರ ಮಾಹಿತಿಯ ಆಧಾರದ ಮೇಲೆ ತಮಗೆ ಜೀವ ಬೆದರಿಕೆ ಇರುವುದರಿಂದ ಭದ್ರತೆ ನೀಡಲಾಗಿತ್ತು ಎಂಬುದನ್ನು ಮುಂಬೈ ಪೊಲೀಸ್ ಹೆಚ್ಚುವರಿ ಆಯುಕ್ತರು ಜಾರಿ ನಿರ್ದೇಶನಾಲಯಕ್ಕೆ (ED) ಬರೆದ ಪತ್ರದಲ್ಲೇ ದೃಢಪಡಿಸಿದ್ದರು ಎಂದು ಅವರು ಹೇಳಿದ್ದಾರೆ.
16 ವರ್ಷವಾದರೂ ಚಾರ್ಜ್‌ಶೀಟ್ ಇಲ್ಲ: ಕಳೆದ 16 ವರ್ಷಗಳಲ್ಲಿ ಭಾರತದ ಯಾವುದೇ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ ಅಥವಾ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ. 2010ರ ಅಕ್ಟೋಬರ್‌ನಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಎನ್. ಶ್ರೀನಿವಾಸನ್ ದ್ವೇಷ ಸಾಧನೆಗಾಗಿ ಚೆನ್ನೈನಲ್ಲಿ ಎಫ್‌ಐಆರ್ ದಾಖಲಿಸಿದ್ದರು ಎಂದು ಮೋದಿ ಆರೋಪಿಸಿದ್ದಾರೆ.
ಬ್ರಿಟಿಷ್ ಪೌರತ್ವಕ್ಕೆ ಹೆಮ್ಮೆ: 2010ರಿಂದಲೂ ಯುನೈಟೆಡ್ ಕಿಂಗ್‌ಡಮ್ ತಮ್ಮ ಮನೆಯಾಗಿದೆ. ಕಾನೂನುಬದ್ಧ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ 2026ರ ಜುಲೈನಲ್ಲಿ ಬ್ರಿಟಿಷ್ ಗೃಹ ಕಚೇರಿಯಿಂದ ತಮಗೆ ಬ್ರಿಟಿಷ್ ಪೌರತ್ವ ಲಭಿಸಿದ್ದು, ಅದರ ಬಗ್ಗೆ ತಮಗೆ ಹೆಮ್ಮೆ ಇದೆ ಎಂದಿದ್ದಾರೆ.
ಮಾಧ್ಯಮಗಳ ವಿರುದ್ಧ ಕಾನೂನು ಸಮರದ ಎಚ್ಚರಿಕೆ: ತಮ್ಮ ಬ್ರಿಟಿಷ್ ಪೌರತ್ವ ಮತ್ತು ದೇಶ ತೊರೆದ ವಿಚಾರವಾಗಿ ಸುಳ್ಳು ಹಾಗೂ ಮಾನಹಾನಿಕರ ವರದಿ ಪ್ರಕಟಿಸುತ್ತಿರುವ ಭಾರತೀಯ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಲಲಿತ್ ಮೋದಿ ಎಚ್ಚರಿಕೆ ನೀಡಿದ್ದಾರೆ. ಇಂಟರ್‌ಪೋಲ್ ಕೂಡ ತಮ್ಮ ವಿರುದ್ಧ ಯಾವುದೇ ರೆಡ್ ಕಾರ್ನರ್ ಅಥವಾ ಅಲರ್ಟ್ ನೋಟಿಸ್ ಇಲ್ಲವೆಂದು ಲಿಖಿತವಾಗಿ ತಿಳಿಸಿದೆ ಎಂದು ಹೇಳಿದ್ದಾರೆ.





Leave a comment