ನವದೆಹಲಿ / ಬೆಂಗಳೂರು: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿವಾದ ತೀವ್ರಗೊಂಡಿರುವ ನಡುವೆಯೇ, ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿಯಾಗಿರುವುದು ತಮಿಳುನಾಡು ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.
ವಿಜಯ್ ಅವರು ಮೇಕೆದಾಟು ವಿಚಾರವನ್ನು ‘ಸಿನಿಮಾ ಸ್ಟೈಲ್’ನಲ್ಲಿ ನಿಭಾಯಿಸುತ್ತಿದ್ದಾರೆ ಎಂದು ವಿರೋಧ ಪಕ್ಷ ಡಿಎಂಕೆ ತೀವ್ರ ವಾಗ್ದಾಳಿ ನಡೆಸಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ. ಶಿವಕುಮಾರ್ “ಖಂಡಿತವಾಗಿಯೂ ನಾವಿಬ್ಬರೂ ಒಳ್ಳೆಯ ಸ್ನೇಹಿತರು, ಅವರಿಗೆ ಅವರದೇ ಆದ ರಾಜಕೀಯ ಸಮಸ್ಯೆಗಳಿವೆ” ಎಂದು ಹೇಳಿದ್ದಾರೆ.
ಡಿಎಂಕೆ ಮುಖವಾಣಿ ‘ಮುರಸೊಳಿ’ಯಲ್ಲಿ ಸಿಎಂ ವಿಜಯ್ ವಿರುದ್ಧ ಕಿಡಿಕಾರಲಾಗಿದ್ದು, ಸಿನಿಮಾಗಳಲ್ಲಿ ಮಾತ್ರ ಅವರು ಏಕಾಂಗಿ ಪ್ರದರ್ಶನ ನೀಡಬಹುದು, ಆದರೆ ರಾಜ್ಯದ ಜೀವನಾಡಿಯಾದ ಕಾವೇರಿ ಮತ್ತು ಮೇಕೆದಾಟು ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಡೆಯಬೇಕು ಎಂದು ಎಚ್ಚರಿಸಿದೆ. ಅಲ್ಲದೆ, ಮೇಕೆದಾಟು ಅಣೆಕಟ್ಟು ಕಟ್ಟುವುದೇ ತಮ್ಮ ಜೀವನದ ಏಕೈಕ ಗುರಿ ಎಂಬಂತೆ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ಒಗ್ಗಟ್ಟು ಪ್ರದರ್ಶಿಸಲು ತಕ್ಷಣ ಸರ್ವಪಕ್ಷ ಸಭೆ ಕರೆಯುವಂತೆ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಒತ್ತಾಯಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಸ್ಪಷ್ಟನೆ: “ತಮಿಳುನಾಡಿಗೆ ನಾವು ನೀರು ಕೊಡಲು ಬದ್ಧರಾಗಿದ್ದೇವೆ ಎಂದು ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟವಾಗಿ ಹೇಳಿದೆ, ಅದರಂತೆ ನಾವು ನೀರು ನೀಡುತ್ತೇವೆ. ಎಐಎಡಿಎಂಕೆ, ಡಿಎಂಕೆ ಸೇರಿದಂತೆ ಎಲ್ಲಾ ಪಕ್ಷಗಳು ಸುಪ್ರೀಂ ಕೋರ್ಟ್ ಆದೇಶವನ್ನು ಸರಿಯಾಗಿ ಓದಿಕೊಳ್ಳಲಿ” ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ವಿಜಯ್ ವಿರುದ್ಧ ಎಐಎಡಿಎಂಕೆ, ಬಿಜೆಪಿ ಕಿಡಿ: ದೆಹಲಿಯಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿಯಾದಾಗ ಮೇಕೆದಾಟು ವಿಚಾರ ಪ್ರಸ್ತಾಪಿಸದೆ ತಮಿಳುನಾಡಿನ ಜನರಿಗೆ ವಿಜಯ್ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಎಐಎಡಿಎಂಕೆ ಆರೋಪಿಸಿದೆ. ಕಾಂಗ್ರೆಸ್ ಬೆಂಬಲ ಕಳೆದುಕೊಳ್ಳುವ ಭಯದಿಂದ ವಿಜಯ್ ಮೌನವಾಗಿದ್ದಾರೆ ಎಂದು ಟೀಕಿಸಿದೆ. ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಕೂಡ ವಿಜಯ್ ದೆಹಲಿ ಭೇಟಿಯನ್ನು ಪ್ರಶ್ನಿಸಿದ್ದಾರೆ.
ವಿಜಯ್ ನಿಲುವು: ಕಾವೇರಿ ವಿಚಾರದಲ್ಲಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ತಾವು ಪ್ರಯತ್ನಿಸಿದ್ದು, ತಮಿಳುನಾಡು ಜನರಿಗಾಗಿ ಅವಮಾನ ಸಹಿಸಲು ಸಿದ್ಧ. ಆದರೆ ಕಾವೇರಿ ಹಾಗೂ ಮೇಕೆದಾಟು ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ವಿಜಯ್ ಈ ಹಿಂದೆ ಸ್ಪಷ್ಟಪಡಿಸಿದ್ದರು.





Leave a comment