ನವದೆಹಲಿ: ಇನ್‌ಸ್ಟಾಗ್ರಾಮ್ (Instagram) ರೀಲ್ಸ್, ಎಕ್ಸ್‌ಪ್ಲೋರ್ ಮತ್ತು ಫೀಡ್‌ಗಳಲ್ಲಿ ಕಾಣಿಸಿಕೊಳ್ಳುವ ಲೈಂಗಿಕ ಪ್ರಚೋದನಕಾರಿ ಹಾಗೂ ಹಿಂಸಾತ್ಮಕ ಕಂಟೆಂಟ್‌ಗಳಿಗೆ ಕಡಿವಾಣ ಹಾಕಲು ಮೆಟಾ ಸಂಸ್ಥೆ ಮುಂದಾಗಿದೆ.
ಭಾರತದ ಬಳಕೆದಾರರ ಆದ್ಯತೆಗೆ ತಕ್ಕಂತೆ ತನ್ನ ರೆಕಮೆಂಡೇಶನ್ ಅಲ್ಗಾರಿದಮ್‌ನಲ್ಲಿ ಮಹತ್ವದ ಬದಲಾವಣೆ ತಂದಿರುವುದಾಗಿ ಮೆಟಾ ನವೆಂಬರ್ 16ರಂದು ಪ್ರಕಟಿಸಿದೆ. ಬಳಕೆದಾರರು ಫಾಲೋ ಮಾಡದ ಖಾತೆಗಳಿಂದ ಬರುವ ಸಲಹೆಗಳ ಮೇಲೆ ಈ ಹೊಸ ನಿಯಮ ಅನ್ವಯವಾಗಲಿದೆ.
ಬಳಕೆದಾರರು ದೂರು ನೀಡುವವರೆಗೆ ಕಾಯದೆ, ಸ್ವಯಂಚಾಲಿತವಾಗಿ ಕಂಟೆಂಟ್‌ಗಳನ್ನು ಪರಿಶೀಲಿಸಲು ಮೆಟಾ ಹೆಚ್ಚು ಸಮರ್ಥವಾದ ಕೃತಕ ಬುದ್ಧಿಮತ್ತೆ (AI) ಮಾದರಿಗಳನ್ನು ಬಳಸುತ್ತಿದೆ. ಭಾರತೀಯ ಬಳಕೆದಾರರು ಯಾವ ರೀತಿಯ ವಿಡಿಯೋಗಳನ್ನು ನೋಡಲು ಇಷ್ಟಪಡುವುದಿಲ್ಲ ಎಂಬುದನ್ನು ಅರಿತು ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಸುಧಾರಣೆಯ ಬಳಿಕ, ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಶಿಫಾರಸು ಮಾಡಲಾದ ಕಂಟೆಂಟ್‌ಗಳ ವಿರುದ್ಧ ಬಳಕೆದಾರರು ದೂರು (Report) ನೀಡುವ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ ಎಂದು ಮೆಟಾ ತಿಳಿಸಿದೆ.
ನಿಷೇಧವಲ್ಲ, ನಿಯಂತ್ರಣ: ಇದು ಅಂತಹ ಕಂಟೆಂಟ್‌ಗಳ ಮೇಲಿನ ಸಂಪೂರ್ಣ ನಿಷೇಧವಲ್ಲ. ಬದಲಾಗಿ, ಬಳಕೆದಾರರು ಫಾಲೋ ಮಾಡದ ಖಾತೆಗಳ ಅಸಭ್ಯ ಅಥವಾ ಸೂಕ್ಷ್ಮ ವಿಡಿಯೋಗಳನ್ನು ಅಲ್ಗಾರಿದಮ್ ಮೂಲಕ ಇತರರಿಗೆ ಶಿಫಾರಸು ಮಾಡುವುದನ್ನು ತಡೆಯಲಾಗಿದೆ. ಸಮುದಾಯ ಮಾರ್ಗಸೂಚಿ ಉಲ್ಲಂಘಿಸುವ ಕಂಟೆಂಟ್‌ಗಳನ್ನು ಮಾತ್ರ ತೆಗೆದುಹಾಕಲಾಗುತ್ತದೆ.
ಬಳಕೆದಾರರಿಗೆ ನಿಯಂತ್ರಣ ಆಯ್ಕೆಗಳು: ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಫೀಡ್ ನಿಯಂತ್ರಿಸಲು ‘ಸೆನ್ಸಿಟಿವ್ ಕಂಟೆಂಟ್ ಕಂಟ್ರೋಲ್’, ‘ಪೊಲಿಟಿಕಲ್ ಕಂಟೆಂಟ್ ಕಂಟ್ರೋಲ್’, ‘ನಾಟ್ ಇಂಟರೆಸ್ಟೆಡ್’, ‘ಹಿಡನ್ ವರ್ಡ್ಸ್’ ಮತ್ತು ‘ಬ್ಲಾಕ್’ ಫೀಚರ್‌ಗಳನ್ನು ಬಳಸಬಹುದು ಎಂದು ಮೆಟಾ ಸಲಹೆ ನೀಡಿದೆ.
ಹದಿಹರೆಯದವರಿಗೆ ರಕ್ಷಣೆ: ಕಳೆದ ವರ್ಷ ಭಾರತದಲ್ಲಿ ಪರಿಚಯಿಸಲಾದ ‘ಟೀನ್ ಅಕೌಂಟ್ಸ್’ ಮೂಲಕ ಹದಿಹರೆಯದವರಿಗೆ ವಯಸ್ಸಿಗೆ ತಕ್ಕ 13+ ಕಂಟೆಂಟ್ ಸೆಟ್ಟಿಂಗ್‌ಗಳನ್ನು ಸ್ವಯಂಚಾಲಿತವಾಗಿ ನೀಡಲಾಗುತ್ತಿದೆ.
ಕೇಂದ್ರ ತಂತ್ರಜ್ಞಾನ ಸಚಿವಾಲಯವು ಅಕ್ಟೋಬರ್ 10ರಂದು ಮೆಟಾಗೆ ಸಲಹೆ ನೀಡಿ, ದಾರಿತಪ್ಪಿಸುವ ಅಥವಾ ತಿರುಚಿದ ಮಾಹಿತಿಗಳಿಗೆ ಹೆಚ್ಚಿನ ಪ್ರಚಾರ ಸಿಗದಂತೆ ರೆಕಮೆಂಡೇಶನ್ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಸೂಚಿಸಿದ್ದ ಬೆನ್ನಲ್ಲೇ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.





Leave a comment