Home ಕ್ರೈಂ ನ್ಯೂಸ್ ಇಸ್ಪೀಟ್ ದಂಧೆಗೆ ಪೊಲೀಸರೇ ಕಾವಲುಗಾರರು? ಮಾಯಕೊಂಡ ಶಾಸಕರ ವಿರುದ್ಧ ತಿರುಗಿಬಿದ್ದ ಮಾಯಕೊಂಡ ಬಿಜೆಪಿ, ಬೃಹತ್ ಪ್ರತಿಭಟನೆಗೆ ಸಿದ್ಧತೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಇಸ್ಪೀಟ್ ದಂಧೆಗೆ ಪೊಲೀಸರೇ ಕಾವಲುಗಾರರು? ಮಾಯಕೊಂಡ ಶಾಸಕರ ವಿರುದ್ಧ ತಿರುಗಿಬಿದ್ದ ಮಾಯಕೊಂಡ ಬಿಜೆಪಿ, ಬೃಹತ್ ಪ್ರತಿಭಟನೆಗೆ ಸಿದ್ಧತೆ!

Share
ಇಸ್ಪೀಟ್
Share

ದಾವಣಗೆರೆ: ಜಿಲ್ಲಾದ್ಯಂತ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ಅಕ್ರಮ ಇಸ್ಪೀಟ್ ಜೂಜಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಮಾಯಕೊಂಡ ಭಾರತೀಯ ಜನತಾ ಪಾರ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಬಸವರಾಜ್ ನಾಯ್ಕ್ ಅವರು, ಈ ಅಕ್ರಮ ದಂದೆಗೆ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳ ರಕ್ಷಣೆ ಹಾಗೂ ಸ್ಥಳೀಯ ಶಾಸಕರ ಭ್ರಷ್ಟಾಚಾರವೇ ನೇರ ಕಾರಣ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ
ಬಿಜೆಪಿ ಪದಾಧಿಕಾರಿಗಳು ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಖಾಕಿ ಕಾವಲಿನಲ್ಲಿ ಜೂಜಾಟ?

ಮಾಯಕೊಂಡ ಕ್ಷೇತ್ರದ ಗುಡಾಳು ಗ್ರಾಮದ ಗುಡ್ಡದಲ್ಲಿ ಪ್ರತಿದಿನವೂ ಸುಮಾರು 200 ರಿಂದ 300 ಕ್ಕೂ ಹೆಚ್ಚು ಜನ ಸೇರಿ ಜೂಜಾಟವಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿ, ಸಬ್ ಇನ್ಸ್‌ಪೆಕ್ಟರ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಅವರೇ ಖುದ್ದಾಗಿ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.

ಹೊನ್ನಾಳಿ ಭಾಗದ ಗೊಲ್ಲರಟ್ಟಿ ಹಾಗೂ ಚನ್ನಗಿರಿ ತಾಲೂಕಿನ ಬಸವನಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕ ಗುಡ್ಡದಮ್ಮ ದೇವಸ್ಥಾನದ ಬೆಟ್ಟ, ಚಿನ್ನಲಾದ್ರಿ ಬೆಟ್ಟ ಮತ್ತು ಪರ್ವತ ಶ್ರೇಣಿಗಳಲ್ಲಿ ಈ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ನೂರಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕವಾಗಿ ಬೀದಿಗೆ ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ದೂರುದಾರರ ಹೆಸರು ಬಹಿರಂಗ: ಜೀವಕ್ಕೆ ಆಪತ್ತು!

ಈ ವ್ಯಾಪ್ತಿಯ ಸರ್ಕಲ್‌ ಇನ್ಸ್‌ಪೆಕ್ಟರ್ ಆದ ಮಲ್ಲಮ್ಮ ಚೌಬೆ ಅವರ ನಡೆಗೆ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಧೈರ್ಯ ಮಾಡಿ ಇಸ್ಪೀಟ್ ದಂಧೆ ನಡೆಯುತ್ತಿರುವ ಜಾಗಗಳ ಬಗ್ಗೆ ಮಾಹಿತಿ ನೀಡಿದರೆ, ಇನ್ಸ್‌ಪೆಕ್ಟರ್
ಅವರು ದೂರು ನೀಡಿದವರ ಹೆಸರನ್ನೇ ಜೂಜು ದಂದೆಕೋರರಿಗೆ ಬಹಿರಂಗಪಡಿಸಿ ಅವರ ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ದೂರಲಾಗಿದೆ. ಸಾರ್ವಜನಿಕರು ಠಾಣೆಗೆ ದೂರು ನೀಡಲು ಹೋದರೆ, “ನೀವೇ ಅವರೊಂದಿಗೆ
ಹಾಗೂ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳಿ” ಎಂದು ಅಧಿಕಾರಿಗಳು ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ವಿರುದ್ಧ ಲಂಚದ ಗಂಭೀರ ಆರೋಪ:

ಈ ಅಕ್ರಮದ ವಿರುದ್ಧ ಬಿಜೆಪಿ ವತಿಯಿಂದ ಸಾಗರಪೇಟೆ ಸರ್ಕಲ್‌ನಲ್ಲಿ ಈಗಾಗಲೇ ಎರಡು ಬಾರಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು “ಶಾಸಕರ ಆದೇಶವಿದೆ, ಪ್ರತಿದಿನ ಶಾಸಕರಿಗೆ ಮಾಮೂಲಿ (ಲಂಚ) ತಲುಪುತ್ತಿದೆ” ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಧಿಕಾರಿಗಳ ವರ್ಗಾವಣೆ ಹಾಗೂ ಪೋಸ್ಟಿಂಗ್‌ಗಾಗಿ ಕನಿಷ್ಠ 15 ರಿಂದ 40 ಲಕ್ಷ ರೂಪಾಯಿಗಳವರೆಗೆ ಲಂಚ ಪೀಕುತ್ತಿರುವ ಶಾಸಕರ ದೌರ್ಜನ್ಯವೇ ಈ ಎಲ್ಲಾ ಅಕ್ರಮಗಳಿಗೆ ಮೂಲ ಕಾರಣ ಎಂದು ಕಿಡಿಕಾರಿದರು.

ಬಿಜೆಪಿ ನೀಡಿದ ಅಂತಿಮ ಎಚ್ಚರಿಕೆ:

“ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರು ತಕ್ಷಣವೇ ತಮ್ಮ ನಡತೆಯನ್ನು ಬದಲಿಸಿಕೊಳ್ಳಬೇಕು ಹಾಗೂ ಅಧಿಕಾರಿಗಳಿಂದ ಲಂಚ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ಜಿಲ್ಲಾದ್ಯಂತ ನಡೆಯುತ್ತಿರುವ ಇಸ್ಪೀಟ್ ದಂದೆಯನ್ನು ತಕ್ಷಣವೇ ಮಟ್ಟಹಾಕದಿದ್ದರೆ, ಭಾರತೀಯ ಜನತಾ ಪಾರ್ಟಿ ಮಾಯಕೊಂಡ ಘಟಕದ ವತಿಯಿಂದ ಅತ್ಯಂತ ಉಗ್ರವಾದ ಸಾರ್ವಜನಿಕ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು,” ಎಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರಕಟಣೆಯ ಮೂಲಕ ಅಂತಿಮ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಯುವ ಮುಖಂಡ ಜಿ. ಎಸ್. ಶ್ಯಾಮ್, ಅನಿಲ್ ಕುಮಾರ್ ನಾಯ್ಕ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles