ದಾವಣಗೆರೆ: ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ವೇಳೆಯಲ್ಲೇ ಮಹಿಳೆಯೊಬ್ಬರನ್ನು ಮಾತನಾಡಿಸುವ ನೆಪದಲ್ಲಿ ಚಿನ್ನದ ಸರ ದೋಚಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧಿತನಿಂದ 4,20,000/- ರೂ ಮೌಲ್ಯದ 30.440 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಮಾತನಾಡಿಸುವ ನೆಪದಲ್ಲಿ ಕಳವು:
ದಾವಣಗೆರೆಯ ನಿವಾಸಿಯಾದ ಶ್ರೀಮತಿ ಸುಮಾ ಅವರು ಜೂನ್ 20 ರಂದು ಬೆಳಗ್ಗೆ ಎಸ್.ಎಸ್. ಲೇಔಟ್ ಎ ಬ್ಲಾಕ್‌ನ ಆಶಾಕಿರಣ ಟ್ರಸ್ಟ್ ಹತ್ತಿರ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ, ಸುಮಾ ಅವರನ್ನು ಮಾತನಾಡಿಸುವ ನೆಪ ಒಡ್ಡಿದ್ದಾನೆ. ಅವರು ತಿರುಗಿ ನೋಡುತ್ತಿದ್ದಂತೆ ಏಕಾಏಕಿ ಕೊರಳಿಗೆ ಕೈ ಹಾಕಿ ಎರಡು ಎಳೆಯ ಚಿನ್ನದ ಸರವನ್ನು ಕಿತ್ತುಕೊಂಡು ಜಾಗ ಖಾಲಿ ಮಾಡಿದ್ದನು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 309(4) ರ ಅಡಿಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ಪೊಲೀಸರ ಮಿಂಚಿನ ಕಾರ್ಯಾಚರಣೆ:
ಪ್ರಕರಣದ ಗಾಂಭೀರ್ಯತೆಯನ್ನು ಅರಿತ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ ಹೆಗಡೆ ಹಾಗೂ ಉಪಾಧೀಕ್ಷಕರಾದ ಶರಣ ಬಸವೇಶ್ವರ ಬಿ ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಮತಿ ಶಿಲ್ಪಾ ವೈ.ಎಸ್. ನೇತೃತ್ವದ ವಿಶೇಷ ತಂಡ ರಚಿಸಲಾಯಿತು. ತಾಂತ್ರಿಕ ಹಾಗೂ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ತಂಡ, ದಾವಣಗೆರೆ ಮೂಲದ ಪ್ರದೀಪ್ @ ಪ್ರದೀಪಾಚಾರಿ (38 ವರ್ಷ) ಎಂಬಾತನನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ.
ಬಂಧಿತನಿಂದ ಕಳವು ಮಾಡಲಾಗಿದ್ದ ಇಡೀ ಚಿನ್ನದ ಸರವನ್ನು ಪೊಲೀಸರು ಜಪ್ತಿ ಮಾಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ತಂಡಕ್ಕೆ ಎಸ್ಪಿ ಶ್ಲಾಘನೆ: ದೂರು ದಾಖಲಾದ ಕೆಲವೇ ದಿನಗಳಲ್ಲಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿ ಆರೋಪಿಯನ್ನು ಪತ್ತೆ ಹಚ್ಚಿದ ಇನ್ಸ್‌ಪೆಕ್ಟರ್ ಶಿಲ್ಪಾ ವೈ.ಎಸ್. ಹಾಗೂ ಸಿಬ್ಬಂದಿಗಳಾದ ಮಲ್ಲೇಶ, ಮಾಲತೇಶ, ಬಸವರಾಜ, ಕೊಟ್ರೇಶ, ಚಂದ್ರಪ್ಪ ಹಾಗೂ ಕವಿತಾ ಅವರ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ. ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
- BNS case Davanagere
- chain snatching arrest Davanagere
- Davanagere crime news
- Davanagere police success
- gold chain recovered
- Pradeep alias Pradeepachari
- SS Layout Davanagere
- Vidyanagar Police Station
- ಎಸ್ ಎಸ್ ಲೇಔಟ್ ದಾವಣಗೆರೆ
- ಚಿನ್ನದ ಸರ ವಶ
- ದಾವಣಗೆರೆ ಕ್ರೈಮ್ ನ್ಯೂಸ್
- ದಾವಣಗೆರೆ ಸುದ್ದಿ
- ಬಿ ಎನ್ ಎಸ್ ಕಾಯ್ದೆ
- ವಿದ್ಯಾನಗರ ಪೊಲೀಸ್ ಠಾಣೆ
- ಶಿಲ್ಪಾ ವೈ ಎಸ್ ಇನ್ಸ್‌ಪೆಕ್ಟರ್
- ಸರಗಳ್ಳತನ ಆರೋಪಿ ಬಂಧನ





Leave a comment