ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಕೇವಲ ಐಟಿ ಅಥವಾ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ, ಸಾಂಪ್ರದಾಯಿಕ ಕಾಯಕಗಳಿಗೂ ವಿಸ್ತರಿಸುತ್ತಿದೆಯೇ ಎಂಬ ದೊಡ್ಡ ಪ್ರಶ್ನೆ ಹಾಗೂ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ. ಇದಕ್ಕೆ ಕಾರಣ ಆರ್‌ಪಿಜಿ ಎಂಟರ್‌ಪ್ರೈಸಸ್ ಸಂಸ್ಥೆಯ ಅಧ್ಯಕ್ಷ, ಪ್ರಸಿದ್ಧ ಉದ್ಯಮಿ ಹರ್ಷ್ ಗೋಯೆಂಕಾ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿರುವ ಒಂದು ವೀಡಿಯೊ. ಈ ವಿಡಿಯೋದಲ್ಲಿ ಕ್ಷೌರಿಕರಿಗೂ ಉದ್ಯೋಗದ ಭೀತಿ ಎದುರಾಗುವಂತಿದೆ.
ವೀಡಿಯೊದಲ್ಲೇನಿದೆ?
AI training going on India ! Even barbers job may soon be at risk 🙈 pic.twitter.com/99CAwj5m2h
— Harsh Goenka (@hvgoenka) September 14, 2026
ಸಾಮಾನ್ಯ ಕ್ಷೌರಿಕನೊಬ್ಬ ಗ್ರಾಹಕನಿಗೆ ಕ್ಷೌರ (ಹೇರ್ ಕಟ್) ಮಾಡುವಾಗ ಹೈಟೆಕ್ ‘ಮೋಷನ್-ಕ್ಯಾಪ್ಚರ್’ ಸೂಟ್ ಧರಿಸಿದ್ದಾನೆ. ತಲೆಗೆ ಕ್ಯಾಮೆರಾ, ಮೈಮೇಲೆ ವೈರ್‌ಗಳು ಮತ್ತು ಸೆನ್ಸಾರ್‌ಗಳು ಹಾಗೂ ಕೈಗಳಿಗೆ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಿಕೊಂಡು ಆತ ಕೆಲಸ ಮಾಡುತ್ತಿದ್ದಾನೆ. ಆತ ಕತ್ತರಿ ಮತ್ತು ಉಪಕರಣಗಳನ್ನು ಬಳಸುವ ವಿಧಾನ, ಆಂಗಿಕ ಚಲನೆ ಹಾಗೂ ತಂತ್ರಗಳನ್ನು ಈ ಸಾಧನಗಳು ನಿಖರವಾಗಿ ದಾಖಲಿಸುತ್ತಿವೆ (Data Collection). ಈ ಡೇಟಾವನ್ನು ರೋಬೋಟಿಕ್ಸ್ ಮತ್ತು ಎಐ ಸಿಸ್ಟಮ್‌ಗಳಿಗೆ ತರಬೇತಿ ನೀಡಲು ಬಳಸಲಾಗುತ್ತಿದೆ ಎಂದು ಹೇಳಲಾಗಿದೆ.
ವೀಡಿಯೊ ಹಂಚಿಕೊಂಡ ಹರ್ಷ್ ಗೋಯೆಂಕಾ ಅವರು, “ಭಾರತದಲ್ಲಿ ಎಐ ತರಬೇತಿ ನಡೆಯುತ್ತಿದೆ! ಶೀಘ್ರದಲ್ಲೇ ಕ್ಷೌರಿಕ ಉದ್ಯೋಗಗಳಿಗೂ ಅಪಾಯ ಬರಬಹುದು” ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರ ಚರ್ಚೆ ಮತ್ತು ಕಳವಳ:
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ:
ವೇತನ ಮತ್ತು ಶೋಷಣೆ: ಎಐ ತರಬೇತಿಗಾಗಿ ಚಲನೆಗಳನ್ನು ನೀಡುತ್ತಿರುವ ಕಾರ್ಮಿಕರಿಗೆ ಸರಿಯಾದ ವೇತನ ಸಿಗುತ್ತಿದೆಯೇ ಅಥವಾ ಇದು ಮಾಹಿತಿ ಸಂಗ್ರಹಣೆಯ ಹುನ್ನಾರವೇ ಎಂದು ಕೆಲವರು ಪ್ರಶ್ನಿಸಿದ್ದಾರೆ.
ನಿಯಂತ್ರಣ ಸಂಸ್ಥೆಯ ಅಗತ್ಯ: ಇಂತಹ ತಂತ್ರಜ್ಞಾನ ಅಭಿವೃದ್ಧಿಗೆ ನಿಯಮಾವಳಿ ರೂಪಿಸಬೇಕು. ಮಾನವ ಶ್ರಮ ಬಳಸಿ ಅವರ ಕೆಲಸವನ್ನೇ ಕಸಿದುಕೊಳ್ಳುವುದು ಸರಿಯಲ್ಲ ಎಂದು ಕೆಲ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಮಾನವ ಸ್ಪರ್ಶವೇ ಮೇಲು: “ಸಾಫ್ಟ್‌ವೇರ್ ಅಪ್‌ಡೇಟ್ ಸಮಸ್ಯೆಯಿಂದ ಅಪಾಯ ತರಬಲ್ಲ ರೋಬೋಟ್‌ಗಿಂತ, ನಡುಗುವ ಕೈಗಳಿರುವ ಮಾನವ ಕ್ಷೌರಿಕನೇ ಮೇಲು” ಎಂದು ಹಲವರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.





Leave a comment