ಹಾಸನ: ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಡಿರುವ ಭ್ರಷ್ಟಾಚಾರ ಆರೋಪ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಸ್ಟೋನ್ ಕ್ರಷರ್ ಫೈಲ್ ಹಾಗೂ ವರ್ಗಾವಣೆ ದಂಧೆ ಕುರಿತು ಹೆಚ್ಡಿಕೆ ಬಿಡುಗಡೆ ಮಾಡಿರುವ ವಾಟ್ಸಾಪ್ ಚಾಟ್ ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿರುವ ಜಿಲ್ಲಾಧಿಕಾರಿ ಲತಾಕುಮಾರಿ, ಆ ಚಾಟ್ನ ಸತ್ಯಾಸತ್ಯತೆ ಪರಿಶೀಲಿಸಲು ತಾವೇ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಾಸನಾಂಬೆ ಜಾತ್ರೆಯ ಮಹತ್ವದ ಜವಾಬ್ದಾರಿಯಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಈ ರೀತಿಯ ನಿರಾಧಾರ ವೈಯಕ್ತಿಕ ಆರೋಪ ಮಾಡಿರುವುದು ತಮಗೆ ತೀವ್ರ ನೋವುಂಟು ಮಾಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆರೋಪಗಳು ಸಂಪೂರ್ಣ ಸುಳ್ಳು: ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಚಾಟ್ ಹಾಗೂ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಡಿಸಿ ಲತಾಕುಮಾರಿ ಖಡಂಡಿತವಾಗಿ ತಳ್ಳಿಹಾಕಿದ್ದಾರೆ.
ತನಿಖೆಗೆ ಆಗ್ರಹ: ಆ ವಾಟ್ಸಾಪ್ ಸಂಭಾಷಣೆ ನಿಜವೋ ಅಥವಾ ನಕಲಿಯೋ ಎಂಬುದನ್ನು ಪತ್ತೆಹಚ್ಚಲು ಮತ್ತು ಸತ್ಯಾಸತ್ಯತೆ ಹೊರತರಲು ತಾವೇ ಸ್ವತಃ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.
ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚೆ: ಈ ಸಂಪೂರ್ಣ ವಿವಾದದ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಜತೆ ಚರ್ಚಿಸುವುದಾಗಿ ಹಾಗೂ ಧೈರ್ಯವಾಗಿ ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಸಾರ್ವಜನಿಕವಾಗಿ ಆರೋಪ ಮಾಡುವ ಬದಲು ನೇರವಾಗಿ ಸಂಬಂಧಪಟ್ಟವರಿಗೆ ದೂರು ನೀಡಬಹುದಿತ್ತು ಎಂದು ತಿಳಿಸಿರುವ ಡಿಸಿ, ಈ ತನಿಖೆಯಿಂದ ಎಲ್ಲ ಸತ್ಯಾಂಶಗಳು ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.





Leave a comment