ಚಿತ್ರಕೂಟ: ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಪಹಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಹ್ ಗ್ರಾಮದ ಬಳಿ ಬಿಜೆಪಿ ನಾಯಕ ಜಗದೀಶ್ ಗೌತಮ್ ಅವರಿಗೆ ಸೇರಿದ ಖಾಲಿ ನಿವೇಶನದಲ್ಲಿ ಭೀಕರ ಸ್ಫೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಜಾಗದಲ್ಲಿ ಆಳವಾದ ತಾಣ ಸೃಷ್ಟಿಯಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬನ ಕಡಿದುಬಿದ್ದ ಕಾಲುಗಳು ಪತ್ತೆಯಾಗಿರುವುದು ಪ್ರದೇಶದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಘಟನೆ ನಡೆದ ಎರಡು ದಿನಗಳ ನಂತರ ಅಂದರೆ ಸೋಮವಾರ ರಾತ್ರಿ ಪೊಲೀಸರಿಗೆ ಮಾಹಿತಿ ತಲುಪಿತ್ತು. ಮಂಗಳವಾರ ಪೊಲೀಸರು ಸ್ಥಳ ತನಿಖೆ ನಡೆಸಿದಾಗ ಕಾಂಪೌಂಡ್ ಗೋಡೆಯ ಒಳಗೆ ಕಡಿದುಬಿದ್ದ ಒಂದು ಕಾಲು ಮತ್ತು ಹೊರಭಾಗದಲ್ಲಿ ಮತ್ತೊಂದು ಕಾಲು ಪತ್ತೆಯಾಗಿದೆ. ಆದರೆ ದೇಹದ ಇತರ ಭಾಗಗಳು ಪತ್ತೆಯಾಗಿಲ್ಲ.
ಚಿತ್ರಕೂಟ ಎಸ್‌ಪಿ ಅರುಣ್ ಕುಮಾರ್ ಸಿಂಗ್ ಅವರು ಬಾಂಬ್ ಪತ್ತೆ ದಳ, ಡಾಗ್ ಸ್ಕ್ವಾಡ್ ಹಾಗೂ ಎಸ್‌ಒಜಿ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಅಪಾಯಕಾರಿ ಸ್ಫೋಟಕಗಳನ್ನು ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ಆತ ಮೃತಪಟ್ಟಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕಿಸಿದ್ದಾರೆ. ಆದಾಗ್ಯೂ, ಇದು ದೊಡ್ಡ ಮಟ್ಟದ ಸಂಚಿನ ಭಾಗವಾಗಿರಬಹುದು ಎಂದು ಸ್ಥಳೀಯರು ಭೀತಿ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.





Leave a comment