ದಾವಣಗೆರೆ: ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಹರ ಪಂಚಮಸಾಲಿ ಮಠ ಹಾಗೂ ಮಠದ ಆವರಣದಲ್ಲಿ ಜೂನ್ 1 ರಿಂದ ಜೂನ್ 15 ರವರೆಗೆ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಹೊರತುಪಡಿಸಿ ಉಳಿದೆಲ್ಲಾ ರೀತಿಯ ಸಭೆ, ಸಮಾರಂಭ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು ಕಟ್ಟುನಿಟ್ಟಿನ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಹಿನ್ನೆಲೆ ಏನು?:
ಕಳೆದ ಮಾರ್ಚ್ 10 ರಿಂದ ಏಪ್ರಿಲ್ 27 ರವರೆಗಿನ ಅವಧಿಯಲ್ಲಿ ಹರಿಹರ ಪಂಚಮಸಾಲಿ ಮಠದಲ್ಲಿ ಮಠದ ಟ್ರಸ್ಟಿಗಳು, ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಅವರ ಬೆಂಬಲಿಗರು ನಡೆಸಿದ ಸಭೆಗಳು ಮತ್ತು ಪತ್ರಿಕಾಗೋಷ್ಠಿಗಳನ್ನು ಅವಲೋಕಿಸಿದಾಗ ಉದ್ರೇಕಕಾರಿ ಹೇಳಿಕೆ ಹಾಗೂ ಭಾಷಣಗಳನ್ನು ಮಾಡಿರುವುದು ಕಂಡುಬಂದಿದೆ. ಈ ಭಾಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದರಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ, ಸಮಾಜದ ಸ್ವಾಸ್ಥ್ಯ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಸಾರ್ವಜನಿಕರ ಆಸ್ತಿಪಾಸ್ತಿ, ಪ್ರಾಣಹಾನಿ ಮತ್ತು ಮಠದ ಆಸ್ತಿಗೆ ನಷ್ಟ ಉಂಟಾಗುವ ಆತಂಕ ಎದುರಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು (SP) ವರದಿ ಸಲ್ಲಿಸಿದ್ದರು.
ಕಾನೂನು ಕ್ರಮ:
ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯನ್ನಾಧರಿಸಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (BNSS), 2023ರ ಕಲಂ 163ರ ಅನ್ವಯ ತಮಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಿದ್ದಾರೆ. ಜೂನ್ 15ರವರೆಗೆ ಮಠದ ಆವರಣದಲ್ಲಿ ಯಾವುದೇ ರಾಜಕೀಯ ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ. ಆದರೆ, ಮಠದ ದೈನಂದಿನ ಧಾರ್ಮಿಕ ಪೂಜೆಗಳು ಮತ್ತು ಆಚರಣೆಗಳಿಗೆ ಯಾವುದೇ ಅಡ್ಡಿಯಿರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
- ban order Harihara
- BNSS ಕಲಂ 163
- Davanagere DC order
- Davanagere district magistrate
- DAVANAGERE LATEST NEWS
- Harihara Panchamasali Mutth
- Harihara police station
- Karnataka breaking news
- Panchamasali mutth news
- Section 163 BNSS
- Vachanananda Swamiji
- ಕಾನೂನು ಸುವ್ಯವಸ್ಥೆ
- ಗಂಗಾಧರಸ್ವಾಮಿ ಜಿ.ಎಂ.
- ದಾವಣಗೆರೆ ಜಿಲ್ಲಾಧಿಕಾರಿ ಆದೇಶ
- ದಾವಣಗೆರೆ ಸುದ್ದಿ
- ನಿಷೇದಾಜ್ಞೆ
- ಪಂಚಮಸಾಲಿ ಮಠ ನಿಷೇದಾಜ್ಞೆ
- ವಚನಾನಂದ ಸ್ವಾಮೀಜಿ
- ಹರಿಹರ ಗ್ರಾಮಾಂತರ ಠಾಣೆ
- ಹರಿಹರ ಪಂಚಮಸಾಲಿ ಮಠ





Leave a comment