ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತೆಗೆದುಹಾಕಲು ಹಾಗೂ ಪ್ರೊಜನಿ ಮ್ಯಾಪಿಂಗ್ ಮಾಡಲು ಜೂನ್ 16 ರವರೆಗೆ ಅವಕಾಶವಿರುತ್ತದೆ. ಆ ಬಳಿಕ ಪೋರ್ಟಲ್ ಫ್ರೀಜ್ ಆಗಲಿದ್ದು, ಕರಡು ಮತದಾರರ ಪಟ್ಟಿ (Draft Roll) ಪ್ರಕಟವಾಗುವವರೆಗೆ ಯಾವುದೇ ಬದಲಾವಣೆಗಳಿಗೆ ಅವಕಾಶವಿರುವುದಿಲ್ಲ ಎಂದರು.
ಮನೆ ಮನೆಗೆ 3 ಬಾರಿ ಭೇಟಿ ನೀಡಲಿರುವ BLOಗಳು:
ಜೂನ್ 26 ರಿಂದ 29 ರವರೆಗೆ ಮತಗಟ್ಟೆ ಅಧಿಕಾರಿಗಳಿಗೆ (BLO) ತರಬೇತಿ ನಡೆಯಲಿದ್ದು, ಜೂನ್ 30 ರಿಂದ ಜುಲೈ 29 ರವರೆಗೆ ಬಿಎಲ್‌ಒಗಳು ಪ್ರತಿ ಮನೆಗೆ ಒಟ್ಟು 3 ಬಾರಿ ಭೇಟಿ ನೀಡಿ ಪರಿಶೀಲನಾ ಪಟ್ಟಿ ನೀಡಿ ಮತದಾರರಿಂದ ಸಹಿ ಪಡೆಯಲಿದ್ದಾರೆ. ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಆಕ್ಷೇಪಣೆಗಳಿದ್ದಲ್ಲಿ ಸೆಪ್ಟೆಂಬರ್ 4 ರವರೆಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7 ರಂದು ಬಿಡುಗಡೆ ಮಾಡಲಾಗುವುದು.
ವಯಸ್ಸಿನ ಆಧಾರದ ಮೇಲೆ ಬೇಕಾಗುವ ದಾಖಲೆಗಳು:
1987 ರ ಜುಲೈ 1 ಕ್ಕಿಂತ ಮೊದಲು ಜನಿಸಿದವರು: ಸ್ವಯಂ ಜನ್ಮ ದಿನಾಂಕ, ಸ್ಥಳವನ್ನು ಗುರುತಿಸುವ 12 ದಾಖಲೆಗಳಲ್ಲಿ ಒಂದನ್ನು ನೀಡಬೇಕು.
2004 ರ ಡಿಸೆಂಬರ್ 2 ರ ವರೆಗೆ ಜನಿಸಿದವರು: ಸ್ವಯಂ ದಾಖಲೆಯೊಂದಿಗೆ, ತಂದೆ ಅಥವಾ ತಾಯಿ ಹುಟ್ಟಿದ ದಿನಾಂಕ, ಸ್ಥಳ ದೃಢಪಡಿಸುವ ದಾಖಲೆ ನೀಡಬೇಕು.
2004 ರ ಡಿಸೆಂಬರ್ 2 ರ ನಂತರ ಜನಿಸಿದವರು: ಸ್ವಯಂ ದಾಖಲೆಯೊಂದಿಗೆ, ಪೋಷಕರಿಬ್ಬರ ಜನ್ಮ ದಿನಾಂಕ ಮತ್ತು ಸ್ಥಳ ದೃಢಪಡಿಸುವ ದಾಖಲೆಗಳನ್ನು ಒದಗಿಸಬೇಕು.
ಗಮನಿಸಿ:
ಹೆಸರು ಸೇರಿಸಲು ಪಡಿತರ ಚೀಟಿ, ನರೇಗಾ ಕಾರ್ಡ್ ನೀಡಬಹುದು. ಆದರೆ ಆಧಾರ್ ಕಾರ್ಡ್ ಅನ್ನು ಕೇವಲ ಗುರುತಿನ ಚೀಟಿಯಾಗಿ ಮಾತ್ರ ಪರಿಗಣಿಸಲಾಗುವುದು, ವಾಸಸ್ಥಳದ ದಾಖಲೆಯಲ್ಲ.
ಆನ್‌ಲೈನ್ ಅರ್ಜಿ ಮತ್ತು ಸಹಾಯವಾಣಿ:
18 ವರ್ಷ ತುಂಬಿದ ಯುವ ಮತದಾರರು ಮತ್ತು ಸಾರ್ವಜನಿಕರು ಹೆಸರು ಸೇರ್ಪಡೆ ಹಾಗೂ ಸಣ್ಣಪುಟ್ಟ ತಿದ್ದುಪಡಿಗಳಿಗಾಗಿ ಭೌತಿಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಬಿಎಲ್‌ಒಗಳ ಸಂಖ್ಯೆಯನ್ನು ಸಂಪರ್ಕಿಸಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ತಾಂತ್ರಿಕ ಸಮಸ್ಯೆಗಳ ನಿವಾರಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ವೋಟರ್ ಫೆಸಿಲಿಟೇಶನ್ ಸೆಂಟರ್‌ಗಳನ್ನು (VFC) ತೆರೆಯಲಾಗುತ್ತಿದೆ. ಸಾರ್ವಜನಿಕರ ದೂರುಗಳಿಗಾಗಿ 1950 ಉಚಿತ ಸಹಾಯವಾಣಿ ಸಂಖ್ಯೆ ಬೆಳಿಗ್ಗೆ 8:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.
ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರತಿ ರಾಜಕೀಯ ಪಕ್ಷಗಳು ತಮ್ಮ ಬಿಎಲ್‌ಎ (Booth Level Agents) ಗಳನ್ನು ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
- BLO house visit
- DAVANAGERE NEWS
- DC Gangadharaswamy
- Draft roll publication
- Online voter registration
- Special Intensive Revision SIR
- Voter Facilitation Centre VFC
- Voter helpline 1950
- Voter ID card correction
- Voter list revision Karnataka
- ಕರಡು ಮತದಾರರ ಪಟ್ಟಿ
- ಜಿಲ್ಲಾಧಿಕಾರಿ ಗಂಗಾಧರಸ್ವಾಮಿ
- ದಾವಣಗೆರೆ ಸುದ್ದಿ
- ಬಿಎಲ್ಒ ಮನೆ ಮನೆ ಭೇಟಿ
- ಮತದಾರರ ಪಟ್ಟಿ ಪರಿಷ್ಕರಣೆ
- ಮತದಾರರ ಸಹಾಯವಾಣಿ 1950
- ವೋಟರ್ ಐಡಿ ತಿದ್ದುಪಡಿ
- ವೋಟರ್ ಫೆಸಿಲಿಟೇಶನ್ ಸೆಂಟರ್
- ಹೊಸ ಮತದಾರರ ನೋಂದಣಿ





Leave a comment