ಭಾರತ ದೇಶದ ಗುರು ಅಥವಾ ಶಿಕ್ಷಕ ವಿದ್ಯಾರ್ಥಿಯನ್ನು ಸ್ವತಂತ್ರವಾಗಿ ಯೋಚಿಸುವುದರ ಜೊತೆಗೆ ಸತ್ಯ ಸಂಸ್ಕಾರ ಮತ್ತು ಕರ್ತವ್ಯದೊಂದಿಗೆ ಬದುಕುವ ವ್ಯಕ್ತಿಯನ್ನಾಗಿ ರೂಪಿಸುವ ಪರಂಪರೆಯನ್ನು ಹೊಂದಿದ್ದಾನೆ ಆದರೆ ಪಶ್ಚಿಮಾತ್ಯ ಶಿಕ್ಷಕನು ವಿದ್ಯಾರ್ಥಿಯನ್ನು ಸ್ವತಂತ್ರವಾಗಿ ಯೋಚಿಸುವ ವ್ಯಕ್ತಿಯನ್ನಾಗಿ ರೂಪಿಸಲು ಪ್ರಯತ್ನಿಸುತ್ತಾನೆ.
ಇಂದಿನ ಜಾಗತಿಕ ಯುಗದಲ್ಲಿ ಪಶ್ಚಿಮಾತ್ಯರ ವೈಜ್ಞಾನಿಕ ತಾಂತ್ರಿಕ ದೃಷ್ಟಿಕೋನ ಮತ್ತು ಭಾರತದ ಗುರು-ಶಿಷ್ಯ ಪರಂಪರೆಯ ಮಾನವೀಯ ಮೌಲ್ಯಗಳನ್ನು ಸಂಯೋಜಿಸುವುದು ಅತ್ಯುತ್ತಮ ಶಿಕ್ಷಣಕ್ಕೆ ಮಾದರಿಯಾಗಬಹುದು
ಪಾಶ್ಚಿಮಾತ್ಯ ಶಿಕ್ಷಕರು – ಭಾರತೀಯ ಶಿಕ್ಷಕರು: ಪ್ರಮುಖ ವ್ಯತ್ಯಾಸ
| ಅಂಶ | ಪಾಶ್ಚಿಮಾತ್ಯ ಶಿಕ್ಷಣ ಪರಂಪರೆ | ಭಾರತೀಯ ಶಿಕ್ಷಣ ಪರಂಪರೆ |
| ಶಿಕ್ಷಕನ ಪಾತ್ರ | Facilitator/ಮಾರ್ಗದರ್ಶಕ | ಗುರು, ಮಾರ್ಗದರ್ಶಕ ಮತ್ತು ಜೀವನದ ದಾರಿದೀಪ |
| ಬೋಧನಾ ವಿಧಾನ | ಚರ್ಚೆ, ಪ್ರಶ್ನೆ, ಪ್ರಾಯೋಗಿಕ ಕಲಿಕೆ | ಜ್ಞಾನ, ಅನುಭವ, ಮೌಲ್ಯ ಮತ್ತು ಚಿಂತನೆಯ ಸಮನ್ವಯ |
| ವಿದ್ಯಾರ್ಥಿಯ ಪಾತ್ರ | ಸ್ವತಂತ್ರ ಚಿಂತನೆಗೆ ಹೆಚ್ಚು ಒತ್ತು | ಸ್ವತಂತ್ರ ಚಿಂತನೆಯ ಜೊತೆಗೆ ಗುರು-ಶಿಷ್ಯ ಸಂಬಂಧಕ್ಕೂ ಮಹತ್ವ |
| ತಂತ್ರಜ್ಞಾನ | ಡಿಜಿಟಲ್ ಸಾಧನಗಳ ವ್ಯಾಪಕ ಬಳಕೆ | ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾ, ಮಾನವೀಯ ಬೋಧನೆಗೆ ಒತ್ತು |
| ಮೌಲ್ಯ ಶಿಕ್ಷಣ | ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಕೌಶಲ್ಯ | ನೈತಿಕತೆ, ಸಂಸ್ಕಾರ, ಕರ್ತವ್ಯ, ಮಾನವೀಯತೆ |
| ಶಿಕ್ಷಕ–ವಿದ್ಯಾರ್ಥಿ ಸಂಬಂಧ | ಹೆಚ್ಚು ಸಮಾನತಾಧಾರಿತ ಮತ್ತು ಅನೌಪಚಾರಿಕ | ಗೌರವ ಮತ್ತು ಮಾರ್ಗದರ್ಶನಕ್ಕೆ ಹೆಚ್ಚಿನ ಮಹತ್ವ |
| ಮೌಲ್ಯಮಾಪನ | ನಿರಂತರ ಚಟುವಟಿಕೆ, ಪ್ರಾಜೆಕ್ಟ್, ಪ್ರಾಯೋಗಿಕತೆ | ಪರೀಕ್ಷೆಯ ಜೊತೆಗೆ ಜ್ಞಾನ, ಶಿಸ್ತು ಮತ್ತು ಸಾಧನೆಗೆ ಒತ್ತು |
| ಶಿಕ್ಷಣದ ಗುರಿ | ಸ್ವಾವಲಂಬನೆ, ಕೌಶಲ್ಯ ಮತ್ತು ಉದ್ಯೋಗ ಸಿದ್ಧತೆ | ವ್ಯಕ್ತಿತ್ವ ವಿಕಾಸ, ಜ್ಞಾನ, ಮೌಲ್ಯ ಮತ್ತು ಜೀವನ ಸಿದ್ಧತೆ |
ಶಿಕ್ಷಣದ ಸ್ವರೂಪ ಕಾಲದಿಂದ ಕಾಲಕ್ಕೆ ಬದಲಾಗುತ್ತಿದೆ ಹಿಂದೆ ಶಿಕ್ಷಕನೇ ಜ್ಞಾನದ ಪ್ರಮುಖ ಮೂಲವಾಗಿದ್ದರೆ ಇಂದು ಜ್ಞಾನವು ಬೆರಳ ತುದಿಯಲ್ಲಿದೆ ಕೃತಕ ಬುದ್ಧಿಮತ್ತೆ ಡಿಜಿಟಲ್ ತಂತ್ರಜ್ಞಾನ ಆನ್ಲೈನ್ ಶಿಕ್ಷಣ ಮತ್ತು ಸಾಮಾಜಿಕ ಮಾಧ್ಯಮಗಳು ವಿದ್ಯಾರ್ಥಿಗಳ ಕಲಿಕೆಯ ವಿಧಾನವನ್ನೇ ಬದಲಿಸಿದೆ. ಈ ಬದಲಾವಣೆಯ ಸಂದರ್ಭದಲ್ಲಿ ಆಧುನಿಕ ಶಿಕ್ಷಕನು ಕೇವಲ ಬೋಧಕನಾಗಿರದೆ ಮಾರ್ಗದರ್ಶಕ ಸಂಶೋಧಕ ತಂತ್ರಜ್ಞಾನ ಸ್ನೇಹಿತ ಮೌಲ್ಯಗಳ ರಕ್ಷಕ ಮತ್ತು ಭವಿಷ್ಯದ ನಿರ್ಮಾತೃ ಆಗಬೇಕಾಗಿದೆ.
ಶಿಕ್ಷಕನ ಮೊದಲ ಗುಣ ನಿರಂತರ ಕಲಿಕೆ ನಾನು ಶಿಕ್ಷಕ ಆದ್ದರಿಂದ ನನಗೆ ಎಲ್ಲವೂ ಗೊತ್ತು ಎಂಬ ಮನೋಭಾವಕ್ಕೆ ಅವಕಾಶವಿಲ್ಲ ಪ್ರತಿದಿನ ಹೊಸ ಜ್ಞಾನವನ್ನು ಕಲಿಯುವ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮತ್ತು ತನ್ನ ಬೋಧನಾ ವಿಧಾನವನ್ನು ನವೀಕರಿಸಿಕೊಳ್ಳುವ ಶಿಕ್ಷಕನೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾನೆ
1) ಆಧುನಿಕ ಶಿಕ್ಷಕನು ಜ್ಞಾನದ ವಿತರಕನಿಂದ ಜ್ಞಾನದ ಸೃಷ್ಟಿಕರ್ತನಾಗಿ ಭೋದಕನಿಂದ ಮಾರ್ಗದರ್ಶಕನಾಗಿ ಮತ್ತು ತರಗತಿಯ ಶಿಕ್ಷಕನಿಂದ ಭವಿಷ್ಯದ ನಿರ್ಮಾತೃವಾಗಿ ರೂಪಾಂತರಗೊಳ್ಳಬೇಕಾಗಿದೆ.
2) ಶಿಕ್ಷಕ ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ ಪೀಳಿಗೆಯನ್ನು ರೂಪಿಸುವ ಶಿಲ್ಪಿ.
3) ತಂತ್ರಜ್ಞಾನವು ಜ್ಞಾನಕ್ಕೆ ವೇಗ ನೀಡುತ್ತದೆ ಆದರೆ ಆ ಜ್ಞಾನಕ್ಕೆ ದಿಕ್ಕು ನೀಡುವವನು ಶಿಕ್ಷಕ.
4) ಕೈಯಲ್ಲಿ ತಂತ್ರಜ್ಞಾನ ಮನದಲ್ಲಿ ಮಾನವಿಯತೆ ತಲೆಯಲ್ಲಿ ಜ್ಞಾನ ಮತ್ತು ಹೃದಯದಲ್ಲಿ ವಿದ್ಯಾರ್ಥಿಯ ಭವಿಷ್ಯ ಇವನ್ನೆ ಲ್ಲ ಹೊಂದಿರುವ ಶಿಕ್ಷಕನೇ ನಿಜವಾದ ಆಧುನಿಕ ಶಿಕ್ಷಣ ಶಿಕ್ಷಕ.
ತಂತ್ರಜ್ಞಾನ ಶಿಕ್ಷಕರ ಪರ್ಯಾಯವಲ್ಲ ಅದು ಶಿಕ್ಷಕನ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಯುತ ಸಾಧನ ಉತ್ತಮ ಶಿಕ್ಷಕನ ತಂತ್ರಜ್ಞಾನವನ್ನು ಬಳಸಿಕೊಂಡು ಕಠಿಣ ವಿಷಯವನ್ನು ಸರಳವಾಗಿ ದೃಷ್ಟಾಂತವಾಗಿ ಮತ್ತು ಆಸಕ್ತಿದಾಯಕವಾಗಿ ವಿದ್ಯಾರ್ಥಿಗಳಿಗೆ ತಲುಪಿಸಬಹುದು ವಿಡಿಯೋ ಪ್ರಸ್ತುತಿಗಳು ಡಿಜಿಟಲ್ ಪುಸ್ತಕಗಳು ಆನ್ಲೈನ್ ಪರೀಕ್ಷೆಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳು ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಇಂದಿನ ಶಿಕ್ಷಕನು ನನಗೆ ಗೊತ್ತಿದೆ ಎನ್ನುವುದಕ್ಕಿಂತ ನಾನು ಇನ್ನೂ ಕಲಿಯುತ್ತಿದ್ದೇನೆ ಎನ್ನುವ ಮನೋಭಾವ ಹೊಂದಿರಬೇಕು ಪ್ರತಿದಿನ ಹೊಸ ತಂತ್ರಜ್ಞಾನವನ್ನು ಕಲಿಯುವುದು ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಮತ್ತು ಸೂಕ್ತವಾದ ಡಿಜಿಟಲ್ ಸಂಪನ್ಮೂಲಗಳನ್ನು ಆಯ್ಕೆ ಮಾಡುವುದು ಆಧುನಿಕ ಶಿಕ್ಷಕನ ಜವಾಬ್ದಾರಿಯಾಗಿದೆ.
ಏಕೆಂದರೆ, ಇಂದಿನ ವಿದ್ಯಾರ್ಥಿಗಳು ಪ್ರಶ್ನಿಸುವ ಪೀಳಿಗೆ ಅವರಿಗೆ ಕೇವಲ ಉತ್ತರಗಳನ್ನು ನೀಡುವುದಕ್ಕಿಂತ ಪ್ರಶ್ನಿಸುವ ಸಾಮರ್ಥ್ಯ ವಿಶ್ಲೇಷಿಸುವ ಶಕ್ತಿ ಸೃಜನಶೀಲತೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯ ಬೆಳೆಸುವುದು ಶಿಕ್ಷಕನ ಆದ್ಯ ಕರ್ತವ್ಯವಾಗಿದೆ ಪಠ್ಯಪುಸ್ತಕದ ಜ್ಞಾನವನ್ನು ಜೀವನದ ಅನುಭವದೊಂದಿಗೆ ಜೋಡಿಸಿದಾಗ ಮಾತ್ರ ಶಿಕ್ಷಣ ಅರ್ಥಪೂರ್ಣವಾಗುತ್ತದೆ ಹಾಗೆಯೇ ಮೌಲ್ಯ ಶಿಕ್ಷಣವು ಅತ್ಯಂತ ಮುಖ್ಯ ತಂತ್ರಜ್ಞಾನ ಎಷ್ಟೇ ಮುಂದುವರಿದರು ಪ್ರಾಮಾಣಿಕತೆ ಮಾನವೀಯತೆ ಕರುಣೆ ಶಿಸ್ತು ದೇಶಪ್ರೇಮ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಯಂತ್ರಗಳು ಕಲಿಸಲು ಸಾಧ್ಯವಿಲ್ಲ ಇವುಗಳನ್ನು ಬದುಕಿನ ಮೂಲಕ ತೋರಿಸುವ ಶಿಕ್ಷಕನೇ ನಿಜವಾದ ಆದರ್ಶ ಶಿಕ್ಷಕ.
ಕಾಲ ಬದಲಾಗಬಹುದು ತಂತ್ರಜ್ಞಾನ ಬದಲಾಗಬಹುದು ಬೋಧನಾ ವಿಧಾನಗಳು ಬದಲಾಗಬಹುದು ಆದರೆ ಒಬ್ಬ ಉತ್ತಮ ಶಿಕ್ಷಕನಿಂದ ಜ್ಞಾನ ಪಡೆದ ವಿದ್ಯಾರ್ಥಿಯ ಬದುಕು ಶಾಶ್ವತ
ಒಟ್ಟಾರೆಯಾಗಿ ಹೇಳುವುದಾದರೆ ಬೋಧಕ ವರ್ಗ ಅಥವಾ ಶಿಕ್ಷಕ ವರ್ಗದವರು ವಿದ್ಯಾರ್ಥಿಗಳ ಭವ್ಯ ಭವಿಷ್ಯತ್ತನ್ನು ಕಟ್ಟುವಂತಹ ಜವಾಬ್ದಾರಿ ಮತ್ತು ವೃತ್ತಿಯೊಂದಿಗೆ ಸಮಾಜದ ನಕ್ಷತ್ರಗಳಾಗಿದ್ದಾರೆ.
ಸರ್ವ ಶಿಕ್ಷಕ ವೃಂದಕ್ಕೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳೊಂದಿಗೆ.






Leave a comment