ನ್ಯೂಜೆರ್ಜಿ: ಸಿರಿಗೆರೆಯ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನ್ಯೂಜೆರ್ಸಿಯಲ್ಲಿ ಭಕ್ತಿಪೂರ್ವಕ ಕಾರ್ಯಕ್ರಮ ನಡೆಯಿತು.
ಬೀರೂರಿನ ಹೆಸರಾಂತ ಉದ್ಯಮಿ ಶ್ರೀ ಆರ್.ವಿ. ರವಿ (ಬೋರ್ವೆಲ್ ರವಿ) ಅವರ ಪುತ್ರಿ ಶ್ರೀಮತಿ ರಂಜಿತಾ ಎಸ್.ಆರ್. ಹಾಗೂ ಶ್ರೀ ರಘುಕುಮಾರ್ ದಂಪತಿಯ ನಿವಾಸದಲ್ಲಿ ಭಕ್ತಿಪೂರ್ವಕ ಪಾದಪೂಜೆ ನೆರವೇರಿಸಿ, ದಂಪತಿಯು ಶ್ರೀ ಜಗದ್ಗುರುಗಳವರ ಆಶೀರ್ವಾದ ಪಡೆದರು. ಈ ಭಕ್ತಿಸ್ಮರಣೀಯ ಸಂದರ್ಭದಲ್ಲಿ ಅಮೆರಿಕಾದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಜಗದ್ಗುರುಗಳವರ ಮಾರ್ಗದರ್ಶನದಲ್ಲಿ ನವೀಕರಿಸಲಾದ ಬಸವಾದಿ ಶಿವಶರಣರ ವಚನಗಳ ಮೊಬೈಲ್ ಆ್ಯಪ್ನ ಪ್ರಾತ್ಯಕ್ಷಿಕೆ ನಡೆಯಿತು. ಈ ಕುರಿತು ಶ್ರೀ ಜಗದ್ಗುರುಗಳವರು ಆಶೀರ್ವಚನ ನೀಡಿದರು.
ಕಂಪ್ಯೂಟರ್ ತಂತ್ರಜ್ಞಾನ ಆರಂಭಿಕ ಹಂತದಲ್ಲಿದ್ದ 1990ರ ದಶಕದಲ್ಲಿಯೇ ವಚನ ಸಾಹಿತ್ಯವನ್ನು ಗಣಕೀಕೃತಗೊಳಿಸುವ ದೂರದೃಷ್ಟಿಯ ಕಾರ್ಯಕ್ಕೆ ಶ್ರೀ ಜಗದ್ಗುರುಗಳವರು ಮುಂದಾಗಿದ್ದರು. ಬಸವಾದಿ ಶಿವಶರಣರ 22,000ಕ್ಕೂ ಅಧಿಕ ವಚನಗಳು ಹಾಗೂ ಪಾಣಿನಿ ಮಹರ್ಷಿಗಳ ಅಷ್ಟಾಧ್ಯಾಯಿಯನ್ನು ಗಣಕೀಕೃತಗೊಳಿಸಿ ‘ಗಣಕ ವಚನ’ ಮತ್ತು ‘ಗಣಕಾಷ್ಟಾಧ್ಯಾಯಿ’ ಸಾಫ್ಟ್ವೇರ್ಗಳನ್ನು ರೂಪಿಸಿದ ಹಿನ್ನೆಲೆಯಲ್ಲಿ ಅವರಿಗೆ ‘ಗಣಕ ಋಷಿ’ ಎಂಬ ಗೌರವ ದೊರೆತಿದೆ.
ಪ್ರಸ್ತುತ ನವೀಕರಿಸಲಾದ ಆ್ಯಪ್ನಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮ ಸೇರಿದಂತೆ ವಿವಿಧ ಶಿವಶರಣರ ವಚನಗಳೊಂದಿಗೆ ಸರಳ ಕನ್ನಡ ಅರ್ಥ, ಸ್ವಾರಸ್ಯಾರ್ಥದ ವಿಶ್ಲೇಷಣೆ ಹಾಗೂ ವಿವಿಧ ಭಾಷೆಗಳ ಅನುವಾದ ಲಭ್ಯವಿದೆ. ಸಂಗೀತ ಮತ್ತು ಗಾಯನದ ಮೂಲಕವೂ ವಚನಗಳನ್ನು ಆಸ್ವಾದಿಸುವ ಅವಕಾಶ ಕಲ್ಪಿಸಲಾಗಿದೆ.
ಅಕ್ಕ ಸಂಸ್ಥೆಯ ರಜತೋತ್ಸವದ ಸಂದರ್ಭದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಕೇವಲ ಒಂದು ಸಂಸ್ಥೆಯ ವಾರ್ಷಿಕೋತ್ಸವವಲ್ಲ; ವಿಶ್ವ ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆ ಮತ್ತು ಕನ್ನಡದ ಜಾಗತಿಕ ಚೇತನೆಯ ಅಭಿವ್ಯಕ್ತಿ ಎಂದು ಆಶೀರ್ವಚನ ನೀಡಿದರು.
ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯೊಂದಿಗೆ, ಕನ್ನಡಿಗರ ಮುಂದಿನ ಪೀಳಿಗೆಯಲ್ಲಿಯೂ ಕನ್ನಡದ ಬಗ್ಗೆ ಅಭಿಮಾನ ಹಾಗೂ ಆತ್ಮೀಯತೆಯನ್ನು ಬೆಳೆಸುವಲ್ಲಿ ಇಂತಹ ಜಾಗತಿಕ ವೇದಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಮೆರಿಕಾದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ನೂರಾರು ಭಕ್ತರು, ಕುಟುಂಬದ ಸದಸ್ಯರು, ಬಂಧುಗಳು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿ ಶ್ರೀ ಜಗದ್ಗುರುಗಳವರ ಆಶೀರ್ವಾದ ಪಡೆದರು.
ಶ್ರೀಮತಿ ರಂಜಿತಾ ಎಸ್.ಆರ್. ಹಾಗೂ ಶ್ರೀ ರಘುಕುಮಾರ್ ದಂಪತಿಯ ಭಕ್ತಿ, ಆತಿಥ್ಯ ಮತ್ತು ಗುರುಸ್ಮರಣೆ ಕಾರ್ಯಕ್ರಮಕ್ಕೆ ವಿಶೇಷ ಭಕ್ತಿಭಾವವನ್ನು ತುಂಬಿತು
- AKKA Silver Jubilee
- Borewell Ravi
- Dr. Shivamurthy Shivacharya Swamiji.
- Ganaka Rishi
- New Jersey
- Pada Pooja
- Raghu Kumar
- Ranjitha SR
- Taralabalu Jagadguru
- Vachana App
- World Kannada Conference
- ಅಕ್ಕ ಸಂಸ್ಥೆ ರಜತೋತ್ಸವ
- ಗಣಕ ಋಷಿ
- ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
- ನ್ಯೂಜೆರ್ಸಿ
- ಪಾದಪೂಜೆ
- ಬೋರ್ವೆಲ್ ರವಿ
- ರಘುಕುಮಾರ್
- ರಂಜಿತಾ ಎಸ್ ಆರ್
- ವಚನ ಆ್ಯಪ್
- ವಿಶ್ವ ಕನ್ನಡ ಸಮ್ಮೇಳನ
- ಶ್ರೀ ತರಳಬಾಳು ಜಗದ್ಗುರು





Leave a comment