SUDDIKSHANA KANNADA NEWS/ DAVANAGERE/ DATE:13-01-2025
ಬೆಂಗಳೂರು: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಗೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಸಿಎಂ ಕುರ್ಚಿಯಲ್ಲಿ ಕುಳಿತುಕೊಂಡು ದಯನೀಯವಾಗಿ, ಅಸಹಾಯಕನಾಗಿ “ನಾನೇ ಸಿಎಂ” ಎಂದು ಹೇಳಿಕೊಳ್ಳುವ ಪರಿಸ್ಥಿತಿ ಸಮಾಜವಾದಿ ಸಿದ್ದರಾಮಯ್ಯ ಅವರಿಗೆ ಬಂದಿರುವುದು ದುರಂತ ಎಂದು ಬಿಜೆಪಿ ರಾಜ್ಯ ಘಟಕ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಸರ್ಕಾರದೊಳಗಿನ ಕುರ್ಚಿ ಕಿತ್ತಾಟದಿಂದ ರಾಜ್ಯ ಬಡವಾಗಿದೆ. ಅಭಿವೃದ್ಧಿಯೂ ಇಲ್ಲ, ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ, ದಿನ ನಿತ್ಯ ಬೆಲೆ ಏರಿಕೆ ಸಾಮಾನ್ಯವಾಗಿದೆ, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆದರೂ ನಾಡಿನ ದೊರೆಗೆ ಕುರ್ಚಿಯದ್ದೇ ಚಿಂತೆಯಾಗಿದೆ ಎಂದು ವ್ಯಂಗ್ಯವಾಡಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿಯೇ ಸಿದ್ಧ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪಣ ತೊಟ್ಟಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಬಿಡುವುದಿಲ್ಲವೆಂದು ಸಿದ್ದು ಬಣ ತೊಡೆತಟ್ಟಿ ನಿಂತಿದೆ. ಈ ಗ್ಯಾರಂಟಿ ಸರ್ಕಾರ ಮುಂದುವರೆಯುವ ಬಗ್ಗೆ ಸ್ವತಃ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೂ ಗ್ಯಾರಂಟಿಯಿಲ್ಲ ಎಂದು ಬಿಜೆಪಿ ಟೀಕಿಸಿದೆ.