Home ಕ್ರೈಂ ನ್ಯೂಸ್ ಟ್ರಕ್‌ಗಳ ಮಧ್ಯೆ ಸಿಲುಕಿಸಿ ಕಾರಿಗೆ ಬೆಂಕಿ: ಮರಳು ಮಾಫಿಯಾ ಜಗಳಕ್ಕೆ ಬಲಿಯಾದ್ರು ಪ್ರಭಾವಿ ಬಿಜೆಪಿ ಲೀಡರ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಟ್ರಕ್‌ಗಳ ಮಧ್ಯೆ ಸಿಲುಕಿಸಿ ಕಾರಿಗೆ ಬೆಂಕಿ: ಮರಳು ಮಾಫಿಯಾ ಜಗಳಕ್ಕೆ ಬಲಿಯಾದ್ರು ಪ್ರಭಾವಿ ಬಿಜೆಪಿ ಲೀಡರ್!

Share
ಮರಳು
Share

ಕೋರಿಯಾ (ಛತ್ತೀಸ್‌ಗಢ): ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯ ಹಳೇ ದ್ವೇಷದ ಹಿನ್ನೆಲೆಯಲ್ಲಿ ಛತ್ತೀಸ್‌ಗಢದ ಕೋರಿಯಾ ಜಿಲ್ಲೆಯಲ್ಲಿ ಭೀಕರ ಹತ್ಯಾಕಾಂಡ ನಡೆದಿದೆ. ಪ್ರಭಾವಿ ಬಿಜೆಪಿ ಮುಖಂಡ ಹಾಗೂ ಮಾಜಿ ಜನಪದ ಪಂಚಾಯತ್ ಅಧ್ಯಕ್ಷ ಭರತ್ ಸಿಂಗ್ (ಲಲ್ಲಾ ಸಿಂಗ್) ಸೇರಿದಂತೆ ಮೂವರನ್ನು ಫಾರ್ಚೂನರ್ ಎಸ್‌ಯುವಿ ಕಾರಿನೊಳಗೆ ಹಾಕಿ ಸಜೀವ ದಹನ ಮಾಡಲಾದ ಘಟನೆ ತಡರಾತ್ರಿ ನಡೆದಿದೆ. ಮರಳು ಮಾಫಿಯಾದ ಈ ಗ್ಯಾಂಗ್ ವಾರ್ ಇಡೀ ರಾಜ್ಯವನ್ನೇ ನಡುಗಿಸಿದೆ.

ಪ್ರಮುಖಾಂಶಗಳು:

ಸಜೀವ ದಹನವಾದವರು: ಬಿಜೆಪಿ ನಾಯಕ ಭರತ್ ಸಿಂಗ್ (ಲಲ್ಲಾ ಸಿಂಗ್), ಅವರ ಸೋದರಸಂಬಂಧಿ ಶಿಕ್ಷಕ ನಾಗೇಂದ್ರ ಸಿಂಗ್ ಮತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವೀರೇಂದ್ರ ಸಿಂಗ್.

ಗಂಭೀರ ಗಾಯಾಳು: ತಲೆ ಮತ್ತು ಮುಖಕ್ಕೆ ತೀವ್ರ ಗಾಯಗಳಾಗಿರುವ ಮಯಾಂಕ್ ಸಿಂಗ್ ಎಂಬುವವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬಿಲಾಸ್‌ಪುರದ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಕಾರಣ: ಸೋನ್ಹತ್ ಪ್ರಾಂತ್ಯದಲ್ಲಿ ಮರಳು ಕ್ವಾರಿಗಳ ಮೇಲಿನ ನಿಯಂತ್ರಣ ಮತ್ತು ಸಾಗಾಣಿಕೆಯ ಅಕ್ರಮ ವಸೂಲಿ ವಿಚಾರವಾಗಿ ಭರತ್ ಸಿಂಗ್ ಮತ್ತು ಮತ್ತೊಬ್ಬ ಬಿಜೆಪಿ ನಾಯಕ ಮನೋಜ್ ತ್ರಿಪಾಠಿ ಕುಟುಂಬದ ನಡುವೆ ದೀರ್ಘಕಾಲದ ಹಗೆತನವಿತ್ತು ಎನ್ನಲಾಗಿದೆ.

ಸಂಚು ನಡೆಸಿ ಕೃತ್ಯ ಎಸಗಿದ ಆರೋಪ:

ಸಂತ್ರಸ್ತರ ಕುಟುಂಬದ ಪ್ರಕಾರ, ಮರಳು ಕ್ವಾರಿ ವಿವಾದ ಇತ್ಯರ್ಥ ಪಡಿಸಲು ಭರತ್ ಸಿಂಗ್ ಅವರು ಮಂಗಳವಾರ ರಾತ್ರಿ ನೌಗೈನ್ ಗ್ರಾಮಕ್ಕೆ ಹೋಗಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಎದುರಾಳಿ ಬಣ, ಅವರು ಪ್ರಯಾಣಿಸುತ್ತಿದ್ದ ಫಾರ್ಚೂನರ್ ಕಾರನ್ನು ಟ್ರಕ್‌ಗಳ ಮಧ್ಯೆ ಸಿಲುಕಿಸಿ, ತಪ್ಪಿಸಿಕೊಳ್ಳದಂತೆ ಬಾಗಿಲುಗಳನ್ನು ಜಾಮ್ ಮಾಡಿದ್ದಾರೆ. ಬಳಿಕ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕಾರಿನಿಂದ ಹೊರಬರಲು ಯತ್ನಿಸಿದವರ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ನಾಲ್ವರ ಬಂಧನ, ತನಿಖೆಗೆ ಸಿಎಂ ಆದೇಶ:

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ತ್ರಿಪಾಠಿ ಕುಟುಂಬದ ಅಕ್ಷತ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ ಮತ್ತು ಮನ್ನು ತ್ರಿಪಾಠಿ ಎಂಬ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯನ್ನು ಖಂಡಿಸಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, “ದೋಷಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ. ಸದ್ಯ ಸಂತ್ರಸ್ತರ ಕುಟುಂಬವು ಸಿಬಿಐ (CBI) ತನಿಖೆಗೆ ಆಗ್ರಹಿಸಿದೆ.

Share

Leave a comment

Leave a Reply

Your email address will not be published. Required fields are marked *