Home ದಾವಣಗೆರೆ ಅನರ್ಹ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಶಾಕ್: ಮೃತರ ಖಾತೆ, ಏರ್‌ಟೆಲ್ ಆಪ್ ಬ್ಯಾಂಕ್ ಲೂಪ್‌ಹೋಲ್‌ಗೆ ಸಿಎಂ ಬ್ರೇಕ್!
ದಾವಣಗೆರೆಬೆಂಗಳೂರುವಾಣಿಜ್ಯ

ಅನರ್ಹ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಶಾಕ್: ಮೃತರ ಖಾತೆ, ಏರ್‌ಟೆಲ್ ಆಪ್ ಬ್ಯಾಂಕ್ ಲೂಪ್‌ಹೋಲ್‌ಗೆ ಸಿಎಂ ಬ್ರೇಕ್!

Share
ಗೃಹಲಕ್ಷ್ಮಿ
Share

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ‘ಗೃಹಲಕ್ಷ್ಮಿ‘ ಮತ್ತು ‘ಗೃಹಜ್ಯೋತಿ’ ಅನುಷ್ಠಾನದಲ್ಲಿ ಆಗುತ್ತಿರುವ ತಾಂತ್ರಿಕ ಲೋಪ ಹಾಗೂ ದುರುಪಯೋಗದ ಕುರಿತು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಮಹತ್ವದ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಅಕೌಂಟೆಟ್ ಜನರಲ್ ರಿಪೋರ್ಟ್  (AG) ವರದಿ ಉಲ್ಲೇಖಿಸಿ ಹಲವು ಗಂಭೀರ ಅಕ್ರಮಗಳನ್ನು ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

“ಒಬ್ಬೇ ಒಬ್ಬ ಅರ್ಹ ಫಲಾನುಭವಿಗೂ ತೊಂದರೆ ಆಗಬಾರದು. ಆದರೆ ಯೋಜನೆ ದುರುಪಯೋಗಪಡಿಸಿಕೊಳ್ಳುವ ಅನರ್ಹರಿಗೆ ಕಟ್ಟುನಿಟ್ಟಾಗಿ ಬ್ರೇಕ್ ಹಾಕಬೇಕು” ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದ್ದಾರೆ.

60 ಕೋಟಿ ರೂಪಾಯಿ ಗೋಲ್‌ಮಾಲ್ ಶಂಕೆ!

ಆಡಿಟರ್ ಜನರಲ್ (AG) ವರದಿಯ ಪ್ರಕಾರ, ಒಂದೇ ಬ್ಯಾಂಕ್ ಖಾತೆಯನ್ನು ಬಳಸಿ ಹಲವು ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುತ್ತಿರುವುದು ಪತ್ತೆಯಾಗಿದೆ. ಒಟ್ಟು ಮೂರು ಲಕ್ಷ ಕಂತುಗಳಲ್ಲಿ ಸುಮಾರು 60 ಕೋಟಿ ರೂಪಾಯಿ ಹಣ ಈ ರೀತಿ ವರ್ಗಾವಣೆಯಾಗಿದೆ ಎನ್ನಲಾಗಿದೆ. ಆರಂಭದಲ್ಲಿ ಅರ್ಜಿಗಳ ನೈಜತೆಯನ್ನು ಪರಿಶೀಲಿಸದೆ ಇರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಪತ್ತೆಯಾದ ಪ್ರಮುಖ ತಾಂತ್ರಿಕ ಲೋಪಗಳು ಮತ್ತು ಅಕ್ರಮಗಳು:

ಮೃತರ ಖಾತೆಗೆ ಹಣ ವರ್ಗಾವಣೆ: ಮರಣ ಹೊಂದಿದ ಫಲಾನುಭವಿಗಳ ನಿಖರ ಸಂಖ್ಯೆ ಸಕಾಲದಲ್ಲಿ ಲಭ್ಯವಾಗದ ಹಿನ್ನೆಲೆಯಲ್ಲಿ ಮೃತರ ಖಾತೆಗಳಿಗೂ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಏರ್‌ಟೆಲ್ ಆಪ್ ಬ್ಯಾಂಕ್ ದುರುಪಯೋಗ: ಏರ್‌ಟೆಲ್ ಸಿಮ್ ಬಳಕೆದಾರರು ತೆರೆಯಬಹುದಾದ ಏರ್‌ಟೆಲ್ ಆಪ್ ಬ್ಯಾಂಕ್‌ನಲ್ಲಿ ನಕಲಿ ಯುಪಿಐ (UPI) ಖಾತೆಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡುತ್ತಿರುವುದು ಪತ್ತೆಯಾಗಿದೆ.

ಹೊರ ರಾಜ್ಯಗಳ ಮತದಾರರಿಗೆ ಲಾಭ: ರಾಜ್ಯದ ಗ್ಯಾರಂಟಿ ಯೋಜನೆಗಳು ಕರ್ನಾಟಕದ ಜನರಿಗೆ ಮಾತ್ರ ಸಿಗಬೇಕು. ಆದರೆ ನೆರೆ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಹಾಗೂ ಹೊರರಾಜ್ಯದ ಮತದಾರರ ಖಾತೆಗಳಿಗೂ ಹಣ ವರ್ಗಾವಣೆಯಾಗುತ್ತಿರುವುದಕ್ಕೆ ತಕ್ಷಣ ತಡೆ ಒಡ್ಡಲು ಸಿಎಂ ಸೂಚಿಸಿದ್ದಾರೆ.

ಬ್ಯಾಂಕ್ ಖಾತೆ ಬದಲಾವಣೆಗೆ ಮುಕ್ತ ಅವಕಾಶ:

ಹಲವು ಮಹಿಳಾ ಫಲಾನುಭವಿಗಳು ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದು, ಗೃಹಲಕ್ಷ್ಮಿ ಹಣ ಜಮೆಯಾದ ತಕ್ಷಣ ಬ್ಯಾಂಕ್‌ನವರು ಸಾಲದ ಮೊತ್ತಕ್ಕೆ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಯಿಂದ ಪಾರಾಗಲು ಮಹಿಳೆಯರು ಬ್ಯಾಂಕ್ ಖಾತೆ ಬದಲಾಯಿಸುತ್ತಿದ್ದು, ಇಂತಹ ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ನೀಡದಂತೆ ಸರ್ಕಾರ ಅಭಯ ನೀಡಿದೆ.

ಇನ್ಮುಂದೆ ಬರಲಿದೆ ‘ವಾಯ್ಸ್ ಮೆಸ್ಸೇಜ್’ ಕನ್ಫರ್ಮೇಷನ್!

ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ತಕ್ಷಣ, ಅವರ ಮೊಬೈಲ್ ಸಂಖ್ಯೆಗೆ ವಾಯ್ಸ್‌ ಮೆಸ್ಸೇಜ್‌ (Voice Message) ಮೂಲಕ ಖಚಿತಪಡಿಸುವ ಹೊಸ ತಂತ್ರಜ್ಞಾನ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

ಇದರೊಂದಿಗೆ, ಮೃತರ ಖಾತೆ ಪತ್ತೆ ಹಚ್ಚಲು ಇ-ಕೆವೈಸಿ (e-KYC) ಮತ್ತು ಎನ್‌ಪಿಸಿಐ (NPCI) ಮ್ಯಾಪಿಂಗ್ ಅನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ಆರ್ಥಿಕವಾಗಿ ಸಬಲರಾಗಿರುವವರು ಸ್ವಯಂಪ್ರೇರಿತರಾಗಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಟ್ಟರೆ ಅಂಥವರನ್ನು ಪ್ರೋತ್ಸಾಹಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *