SUDDIKSHANA KANNADA NEWS/ DAVANAGERE/ DATE:31-10-2023
ನವೆಂಬರ್ ೧ ಬಂತೆಂದರೆ ಕನ್ನಡಿಗರಿಗೆ ಹಬ್ಬದ ಸಂಭ್ರಮ. ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು… ಎನ್ನುವ ಕವಿವಾಣಿಯಂತೆ ಕನ್ನಡ ನುಡಿ ಎಂದಾಕ್ಷಣ ಪ್ರತೀ ಕನ್ನಡಿಗರ ನರ ನಾಡಿಗಳಲ್ಲೂ ವಿದ್ಯುತ್ ಸಂಚಾರವಾಗುತ್ತದೆ, ಮನಸ್ಸಿನಲ್ಲಿ ಹರ್ಷೋಲ್ಲಾಸ ತುಂಬಿ ಹರಿಯುತ್ತದೆ.
ಈ ವರ್ಷ ಕನ್ನಡಿಗರೆಲ್ಲರಿಗೂ ೬೮ ನೇ ರಾಜ್ಯೋತ್ಸವ ಸಂಭ್ರಮ. ಇದರ ಜೊತೆಗೆ ಮೈಸೂರು ರಾಜ್ಯವು “ಕರ್ನಾಟಕ” ರಾಜ್ಯವಾಗಿ ನಾಮಾಂಕಿತವಾಗಿ ೫೦ ವರ್ಷ ತುಂಬಿದ ಸಂಭ್ರಮ. ಕನ್ನಡಿಗರ ಹರ್ಷ ಇಮ್ಮಡಿಯಾಗಿದೆ. ಸರಕಾರವೂ ವರ್ಷಪೂರ್ತಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕನ್ನಡಿಗರ ಸಂಭ್ರಮವನ್ನು ನೂರ್ಮಡಿ ಮಾಡಲು “ಕರ್ನಾಟಕ ಸಂಭ್ರಮ -೫೦ ಹೆಸರಾಯಿತು ಕರ್ನಾಟಕ – ಉಸಿರಾಗಲಿ ಕರ್ನಾಟಕ” ಶೀರ್ಷಿಕೆಯ ಅಡಿಯಲ್ಲಿ ವೈವಿಧ್ಯಮಯ ಹಾಗೂ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಕನ್ನಡ ನಾಡಿನ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿಯ ಹಿರಿಮೆ ಗರಿಮೆಯನ್ನು ಜಗಕೆ ಸಾರುವುದರ ಜೊತೆಗೆ ಯುವ ಜನತೆಗೆ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅರಿವು ಮೂಡಿಸಲು ಉದ್ದೇಶಿಸಿದೆ.
ಹಾಗೆಯೇ ಈ ಬಾರಿ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯ ವಿರಚಿತ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”, ರಾಷ್ಟ್ರಕವಿ ಕುವೆಂಪು ವಿರಚಿತ ” ಎಲ್ಲಾದರೂ ಇರು ಎಂತಾದರೂ ಇರು”, ದ.ರಾ.ಬೇಂದ್ರೆ ವಿರಚಿತ “ಒಂದೇ ಒಂದೇ ಕರ್ನಾಟಕ ಒಂದೇ”, ಸಿದ್ದಯ್ಯ ಪುರಾಣಿಕ ವಿರಚಿತ ” ಹೊತ್ತಿತೋ ಹೊತ್ತಿತು ಕನ್ನಡದ ದೀಪ”, ಚೆನ್ನವೀರ ಕಣವಿ ವಿರಚಿತ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಗೀತೆಗಳನ್ನು ಗೀತಗಾಯನದ ಮೂಲಕ ಕನ್ನಡಾಂಬೆಗೆ ನುಡಿನಮನ ಸಲ್ಲಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇಂತಹ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳು ಕನ್ನಡಿಗರಿಗೆ ತಮ್ಮ ನಾಡು ನುಡಿಯ ಬಗ್ಗೆ ಇನ್ನಷ್ಟು ಅಭಿಮಾನ, ಹೆಮ್ಮೆ, ಗರ್ವ ಮೂಡಿಸಲು ಸಹಕಾರಿಯಾಗುತ್ತದೆ. ಈ ಸಂಭ್ರಮಾಚರಣೆ ಕೇವಲ ಸರಕಾರದ ಮಟ್ಟದಲ್ಲಿ, ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ನಡೆದರೆ ಸಾಲದು.
ಅರೆಸರ್ಕಾರಿ, ನಿಗಮ ಮಂಡಳಿಗಳ ಕಛೇರಿಗಳು, ಬ್ಯಾಂಕುಗಳು, ವಿಮಾ ಕಛೇರಿಗಳು, ಖಾಸಗಿ ಸಂಸ್ಥೆಗಳು, ಸಂಘ ಸಂಸ್ಥೆಗಳು ಹಾಗೂ ಸರ್ವ ಕನ್ನಡಿಗರು ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು. ಒಟ್ಟಿನಲ್ಲಿ ರಾಜ್ಯೋತ್ಸವ ಸಂಭ್ರಮವು ಕನ್ನಡೋತ್ಸವವಾಗಬೇಕು, ಜನೋತ್ಸವವಾಗಬೇಕು, ನಿತ್ಯೋತ್ಸವವಾಗಬೇಕು. ವಾಸ್ತವವಾಗಿ ನಾವು ನವೆಂಬರ್ ಒಂದರಂದು ಆಚರಿಸಬೇಕಾದದ್ದು ಕರ್ನಾಟಕ ರಾಜ್ಯೋತ್ಸವವೇ ಹೊರತು ಕನ್ನಡ ರಾಜ್ಯೋತ್ಸವ ಅಲ್ಲ. ಇದಕ್ಕೆ ಕಾರಣಗಳೂ ಇವೆ. ಆದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ಕನ್ನಡಿಗರು ಗುರುತಿಸಿರುವುದರಿಂದ ಮತ್ತು ಕರ್ನಾಟಕ ಸರಕಾರದ ಆಡಳಿತ ಭಾಷೆ ಕನ್ನಡವೇ ಆಗಿರುವುದರಿಂದ ಕರ್ನಾಟಕ ರಾಜ್ಯೋತ್ಸವವು ಕನ್ನಡ ರಾಜ್ಯೋತ್ಸವವಾಗಿಯೇ ಜನ ಜನಿತವಾಗಿದೆ. ಯಾಕೆ ಇದು ಕರ್ನಾಟಕ ರಾಜ್ಯೋತ್ಸವ ಅನ್ನುವುದಕ್ಕೆ ಒಂದಿಷ್ಟು ಚರಿತ್ರೆಯೂ ಇದೆ.
ಹೊಯ್ಸಳರು ಮತ್ತು ಸೇವುಣರ ನಡುವಣ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ಭಾಗವಾದದ್ದು ೧೩ನೇ ಶತಮಾನದಲ್ಲಿ. ವಸಾಹತು ಕಾಲಘಟ್ಟದಲ್ಲಿ ಕರ್ನಾಟಕವು ಮುಂಬಯಿ, ಮದ್ರಾಸ್, ಹೈದರಾಬಾದ್ಗಳ ನಡುವೆ ಹಂಚಿ ಹೋಗಿತ್ತು. ಕೊಡಗು ಜಿಲ್ಲೆಯು ಬ್ರಿಟಿಷರ ಒಂದು ಅಧೀನ ರಾಜ್ಯವಾಗಿ ಉಳಿಯಿತು. ಕೆಲವು ಪ್ರದೇಶಗಳು ಸ್ಥಳೀಯ ಮರಾಠೀ ಸಂಸ್ಥಾನಿಕರ ವಶದಲ್ಲಿ ಉಳಿದವು. ಹೀಗೆ ನಿರಂರವಾಗಿ ಒಡೆಯುತ್ತಲೇ ಹೋದ ಕರ್ನಾಟಕವು ಮತ್ತೆ ಆಡಳಿತಾತ್ಮಕವಾಗಿ ಒಂದಾದದ್ದು ಸುಮಾರು ೭೫೦ ವರ್ಷಗಳ ಆನಂತರ ಅಂದರೆ ೧೯೫೬ರಲ್ಲಿ.
೨೦ನೇ ಶತಮಾನದ ಆರಂಭದ ಹೊತ್ತಿಗೆ ಕರ್ನಾಟಕವು ಕನಿಷ್ಠ ೨೦ ಕಡೆ ಹಂಚಿಹೋಗಿತ್ತು. ಈ ನಡುವೆ ದೇಶದಾದ್ಯಂತ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೊಸ ಎಚ್ಚರ ಮೂಡುತ್ತಿದ್ದಂತೆ ಕನ್ನಡ ಭಾಷಿಕರೇ ಪ್ರಧಾನವಾಗಿರುವ ಜನರದ್ದೂ ಒಂದು ಪ್ರತ್ಯೇಕ ಪ್ರಾಂತ್ಯವಿರಬೇಕೆಂಬ ಭಾವನೆ ಕರ್ನಾಟಕದಲ್ಲಿ ಬೆಳೆಯಿತು. ನವೋದಯ ಕಾಲಘಟ್ಟದಲ್ಲಿ ಕಾಣಿಸಿಕೊಂಡ ಹೊಸಬಗೆಯ ಬೌದ್ದಿಕತೆಯು ರಾಷ್ಟ್ರೀಯತೆಯನ್ನೂ ಕರ್ನಾಟಕತ್ವವನ್ನೂ ಸಂಘರ್ಷವಿಲ್ಲದ ರೀತಿಯಲ್ಲಿ ಬೆಳೆಸಿತು. ಕುವೆಂಪು ಅವರು “ಜೈ ಭಾರತ ಜನನಿಯ ತನುಜಾತೇ, ಜಯ ಹೇ ಕರ್ನಾಟಕ ಮಾತೇ” ಎಂದು ಬರೆದು ಹೋರಾಟವನ್ನು ಸಂಘರ್ಷಾತೀತಗೊಳಿಸಿದರು.
ಆ ಕಾಲದಲ್ಲಿ ಕರ್ನಾಟಕದ ಇತಿಹಾಸದ ಬಗ್ಗೆ ಪ್ರಕಟವಾದ ಪುಸ್ತಕಗಳು ಕರ್ನಾಟಕ ಏಕೀಕರಣದ ಅವಶ್ಯಕತೆಯನ್ನು ಇನ್ನಷ್ಟು ಮನವರಿಕೆ ಮಾಡಿಕೊಟ್ಟವು. ಇನ್ನಷ್ಟು ಹಿಂದಕ್ಕೆ ಹೋದರೆ ೧೯೦೩ರಲ್ಲೇ ಬೆನಗಲ್ ರಾಮರಾಯರು ಕರ್ನಾಟಕ
ಏಕೀಕರಣದ ಕಲ್ಪನೆಯನ್ನು ಮುಂದಿಟ್ಟು ಧಾರವಾಡದಲ್ಲಿ ಒಂದು ಭಾಷಣ ಮಾಡಿದ್ದರು. ಆಲೂರ ವೆಂಕಟರಾಯರು ೧೯೦೭ರಲ್ಲಿ ‘ವಾಗ್ಭೂಷಣ’ ಪತ್ರಿಕೆಯಲ್ಲಿ ಏಕೀಕರಣವನ್ನು ಒತ್ತಾಯಿಸಿ ಒಂದು ಲೇಖನವನ್ನು ಪ್ರಕಟಿಸಿದರು. ೧೯೧೫ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ೧೯೨೪ರಲ್ಲಿ ಬೆಳಗಾವಿ ಕಾಂಗ್ರೆಸ್ಸಿನ ಕಾಲಕ್ಕೇ ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ಪ್ರಥಮ ಕರ್ನಾಟಕ ಏಕೀಕರಣ
ಸಮ್ಮೇಳನವೂ ಜರುಗಿತು.
ಹಿಂದೂಸ್ಥಾನೀ ಸೇವಾದಳವು ೧೯೨೬ರಲ್ಲಿ ಸಹಿ ಸಂಗ್ರಹ ಚಳವಳಿಯನ್ನು ಶುರು ಮಾಡಿ, ಏಕೀಕರಣದ ಪರ ೩೬,೦೦೦ ಜನರ ಸಹಿ ಪಡೆಯಿತು. ನೆಹರೂ ಕಮಿಟಿಯು ೧೯೨೮ರಲ್ಲಿ ಏಕೀಕರಣವನ್ನು ಬಲವಾಗಿ ಬೆಂಬಲಿಸಿತು. ಆದರೆ ಅನೇಕ ಆಡಳಿತಗಳಿಗೆ ಒಳಪಟ್ಟಿದ್ದ ಕರ್ನಾಟಕವನ್ನು ಒಂದುಗೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ೧೯೪೬ರ ಕೊನೆಗೆ ಬ್ರಿಟಿಷರು ಭಾರತವನ್ನು ಬಿಡುವ ಸಂಗತಿ ಖಚಿತವಾಗುತ್ತಿದ್ದಂತೆಯೇ ಮುಂಬೈ ಹಾಗೂ ಮದ್ರಾಸ್ ವಿಧಾನಸಭೆಗಳು ೧೯೪೭ರಲ್ಲಿ ಕರ್ನಾಟಕ ಏಕೀಕರಣವನ್ನು ಬೆಂಬಲಿಸಿ ಠರಾವು ಮಂಡಿಸಿದವು. ಅದೇ ವರ್ಷ ಕರ್ನಾಟಕ ಏಕೀಕರಣ ಮಹಾಸಮಿತಿಯನ್ನು ಸ್ಥಾಪಿಸಲಾಯಿತು. ಇದರ ಮೊದಲ ಅಧ್ಯಕ್ಷರು ಶ್ರೀ ಎಸ್. ನಿಜಲಿಂಗಪ್ಪನವರು, ಕಾರ್ಯದರ್ಶಿಗಳು ಅಂದಾನಪ್ಪ ದೊಡ್ಡಮೇಟಿ ಹಾಗೂ ಮಂಗಳವೇಡೆ ಶ್ರೀನಿವಾಸರಾಯರು.
೧೯೪೭ರ ಡಿಸೆಂಬರಿನಲ್ಲಿ ಕಾಸರಗೋಡಿನಲ್ಲಿ ಡಾ. ದಿವಾಕರರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೇಳನವು ದೇಶ ಸ್ವತಂತ್ರವಾದರೂ ರಾಜ್ಯ ಏಕೀಕರಣ ಆಗದ ಬಗ್ಗೆ ತೀವ್ರ ಅಸಮಾಧಾನ ಸೂಚಿಸಿತು. (ಮುಂದೆ ಇದೇ ಕಾಸರಗೋಡು ಕರ್ನಾಟಕದ ಭಾಗವಾಗದೇ ಹೋಯಿತು) ದೇಶ ಸ್ವತಂತ್ರವಾದ ಆನಂತರ ಸಂಸ್ಥಾನಗಳೆಲ್ಲ ಮಾಯವಾದುವು. ಆಗ ೨೦ ಆಡಳಿತಗಳಿಗೆ ಸೇರಿದ್ದ ಕರ್ನಾಟಕವು ಮುಂಬೈ, ಮದ್ರಾಸ್, ಮೈಸೂರು, ಹೈದರಾಬಾದ್ ಹಾಗೂ ಕೊಡಗು, ಹೀಗೆ ಐದು ಆಡಳಿತಕ್ಕೆ ಮಾತ್ರ ಒಳಪಟ್ಟಿತು. ಇದು ಏಕೀಕರಣದ ನಿಟ್ಟಿನಲ್ಲಿ ಇಡಲಾದ ಮೊದಲ ಮತ್ತು ಮಹತ್ವದ ಹೆಜ್ಜೆ. ಮೈಸೂರು ಸಂಸ್ಥಾನ ಅತ್ಯಂತ ವಿಶಾಲ ಕನ್ನಡ ಪ್ರದೇಶವಾಗಿದ್ದು ಅದರ ಜೊತೆ ಉಳಿದ ಪ್ರದೇಶಗಳು ಐಕ್ಯವಾದಲ್ಲಿ ಏಕೀಕರಣ ಸುಲಭವೆಂದು ಹೋರಾಟಗಾರರು ಭಾವಿಸಿದರು. ಪೊಟ್ಟಿ ಶ್ರೀರಾಮುಲು ಉಪವಾಸ ನಡೆಸಿ ತೀರಿಕೊಂಡಾಗ ಆಂಧ್ರ ಪ್ರಾಂತ್ಯ ರಚನೆಯಾಗಿ, ಬಳ್ಳಾರಿ ಜಿಲ್ಲೆಯ ಏಳು ತಾಲ್ಲೂಕುಗಳು ಮೈಸೂರಿಗೆ ಸೇರಿತು. ಕೊನೆಗೆ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ರಾಜ್ಯ ಪುನರ್ಘಟನಾ ಆಯೋಗ ನೇಮಕಗೊಂಡು, ಏಕೀಕೃತ ಕರ್ನಾಟಕವು ೧೯೫೬ರ ನವೆಂಬರ್ ೧ಕ್ಕೆ ಅಸ್ತಿತ್ವಕ್ಕೆ ಬಂತು.
ಹಾಗಾಗಿ ಇವತ್ತು ನಾವು ಆಚರಿಸುತ್ತಿರುವುದು ಕರ್ನಾಟಕ ರಾಜ್ಯ ಏಕೀಕರಣಗೊಂಡ ದಿನ. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಮುಖ್ಯ ಭಾಷೆ. ಆದರೆ ಉಳಿದ ೭೦ಕ್ಕೂ ಹೆಚ್ಚು ಭಾಷೆಗಳು ಕರ್ನಾಟಕದ ಸೊತ್ತು ಎಂಬುದನ್ನು ನಾವು ಮರೆಯಬಾರದು.
ಕರ್ನಾಟಕ ಕನ್ನಡ, ಸಂಸ್ಕೃತಿ ಮತ್ತು ಇತಿಹಾಸಕ್ಕೆ ಹೆಸರುವಾಸಿಯಾದ ರಾಜ್ಯ. ಪ್ರಾಚೀನ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದಿನ ಇತಿಹಾಸವನ್ನು ಕನ್ನಡ ಜನರು ಮತ್ತು ಭಾಷೆ ಹೊಂದಿದೆ. ಭಾರತೀಯ ಇತಿಹಾಸದುದ್ದಕ್ಕೂ ಅನೇಕ ಶ್ರೇಷ್ಠ ಕನ್ನಡ ಸಾಮ್ರಾಜ್ಯಗಳು ಇದ್ದವು ಹಾಗೂ ಹೊಯ್ಸಳ ಸಾಮ್ರಾಜ್ಯವು ಅತ್ಯಂತ ಪ್ರಮುಖವಾದದ್ದು.
ಕನ್ನಡ ನಾಡು ಕಲೆ ಸಾಹಿತ್ಯ ಸಂಸ್ಕೃತಿಗಳ ತವರೂರು : ಕನ್ನಡ ನಾಡು ಕಲೆ ಸಾಹಿತ್ಯ ಸಂಸ್ಕೃತಿಗಳ ತವರೂರಾಗಿದೆ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿ ತಮ್ಮ ಬದುಕನ್ನು ಕಟ್ಟಿಕೊಂಡ ಕನ್ನಡಿಗರೇ ಭಾಗ್ಯಶಾಲಿಗಳು. ವಿಶ್ವದ ಯಾವುದೇ ಭಾಷೆಗಿರದ ಐತಿಹಾಸಿಕ ಪರಂಪರೆ ಕನ್ನಡ ಭಾಷೆಗಿದೆ. ಸಾವಿರಾರು ವರ್ಷಗಳ ಭವ್ಯ ಪರಂಪರೆಯಿದೆ. ಇಂತಹ ಪವಿತ್ರವಾದ ಕನ್ನಡ ಭಾಷೆಯನ್ನು ಇನ್ನಷ್ಟು ವೈಭವೀಕರಿಸಿ ಕನ್ನಡ ಬಳಸುವಿಕೆಯನ್ನು ಹೆಚ್ಚಿಸುವುದು ನಮ್ಮ ಸಂಕಲ್ಪವಾಗಬೇಕು.
ಕರ್ನಾಟಕ ರಾಜ್ಯೋತ್ಸವವು ಕನ್ನಡೋತ್ಸವವಾಗಲಿ, ನಿತ್ಯೋತ್ಸವವಾಗಲಿ, ಜನೋತ್ಸವವಾಗಲಿ : ಕನ್ನಡ ನಾಡು – ನುಡಿ – ನೆಲ – ಜಲ – ಕಲೆ – ಸಂಸ್ಕೃತಿಗಳ ರಕ್ಷಣೆ ಸರ್ವ ಕನ್ನಡಿಗರ ಹೊಣೆಗಾರಿಕೆಯಾಗಿದೆ. ಕನ್ನಡ ನಾಡು ನುಡಿಯ ಅಸ್ಮಿತೆಗೆ ಆಪತ್ತು ಬಂದಾಗ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕನ್ನಡಿಗರೆಲ್ಲರೂ ಒಂದಾಗಿ ಹೋರಾಡಬೇಕು. ಕನ್ನಡವನ್ನು ಉಳಿಸೋಣ ಬೆಳೆಸೋಣ ಎಂದು ಕರೆ ನೀಡುವುದರ ಬದಲಾಗಿ ಕನ್ನಡವನ್ನೇ ಎಲ್ಲಾ ಕಡೆ ಬಳಸುವುದರ ಮೂಲಕ ಕನ್ನಡ ನುಡಿಯನ್ನು ವೈಭವೀಕರಿಸಿ ನಮ್ಮತನವನ್ನು ಮೆರೆಯಬೇಕು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ರಾಷ್ಟ್ರ ಕವಿ ಕುವೆಂಪು ವಾಣಿಯು ನಮ್ಮ ಪ್ರತಿ ನಿತ್ಯದ ಸ್ಮರಣೆಯಾಗಬೇಕು.
ಕನ್ನಡ ಸಾಹಿತ್ಯ ಪರಿಷತ್ತು: ಕನ್ನಡ ನಾಡು ನುಡಿಯ ಉನ್ನತಿಗಾಗಿ ವರ್ಷವಿಡೀ ಕೆಲಸ ಮಾಡುವ ಏಕೈಕ ಸಂಸ್ಥೆ ಅಂದರೆ ಅದು ಸರ್ವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು. ೧೯೧೫ ರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಹತ್ವಾಕಾಂಕ್ಷೆಯ ಫಲವಾಗಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು ೧೦೮ ವರ್ಷಗಳ ಭವ್ಯವಾದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಕನ್ನಡ ನಾಡು ನುಡಿ, ನೆಲ ಜಲ, ಕಲೆ ಸಾಹಿತ್ಯ ಸಂಸ್ಕೃತಿಗಳ ಅಸ್ಮಿತೆಗೆ ಧಕ್ಕೆ ಬರುವ ಸಂದರ್ಭ ಎದುರಾದಾಗೆಲ್ಲ ಕನ್ನಡ ಸಾಹಿತ್ಯ ಪರಿಷತ್ತು ಸಿಡಿದು ನಿಂತಿದೆ.
ಕನ್ನಡ ನಾಡು ಮತ್ತು ನುಡಿಯನ್ನು ಸಂಪದ್ಭರಿತವಾಗಿ ಬೆಳೆಸುವಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಇಂತಹ ಕನ್ನಡ ಸಾಹಿತ್ಯ ಪರಿಷತ್ತಿಗೆ ನಾವು ಇನ್ನಷ್ಟು ಶಕ್ತಿಯನ್ನು ತುಂಬಿದಲ್ಲಿ ಕನ್ನಡ ನಾಡು ನುಡಿಯನ್ನೂ ಸತ್ವಭರಿತವಾಗಿ ಬೆಳೆಸಲು ಸಾಧ್ಯ. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆ ಮತ್ತು ಯಶಸ್ಸಿನಲ್ಲಿ ವಿದ್ವಾಂಸರು, ಸಾಹಿತಿಗಳು, ಕವಿಗಳು, ಕಲಾವಿದರು,
ಸಂಘಟಕರ ಜೊತೆಗೆ ಪತ್ರಕರ್ತರ ಪಾತ್ರ ಸಹ ಅತೀ ಮುಖ್ಯವಾದುದು. ಕಸಾಪ ಆಯೋಜಿಸುವ ಕಾರ್ಯಕ್ರಮಗಳ ಸಾರವನ್ನು ನಾಡಿನ ಕನ್ನಡಿಗರಿಗೆ, ಸರಕಾರಕ್ಕೆ ತಲುಪಿಸುವುದರ ಜೊತೆಗೆ ಕನ್ನಡ ಕಟ್ಟುವಲ್ಲಿ ಪತ್ರಕರ್ತರ ಹಾಗೂ ಕನ್ನಡ ದಿನಪತ್ರಿಕೆಗಳ ಪಾತ್ರ ಬಹುದೊಡ್ಡದಾಗಿದೆ. ಕನ್ನಡ ನುಡಿಗೆ ಸಾವಿರಾರು ವರ್ಷಗಳ ಸುದೀರ್ಘ ಪರಂಪರೆಯಿದೆ, ಇತಿಹಾಸವಿದೆ. ಇದರ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ.
ಜೊತೆಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸವಾಲೂ ಇದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪ್ರಜ್ಞಾವಂತಿಕೆಯಿಂದ ಕೆಲಸ ಮಾಡುತ್ತಿದೆ. ಕನ್ನಡದ ಶ್ರೇಷ್ಠತೆಯನ್ನು ನಾಡಿನ ಮೂಲೆ ಮೂಲೆಗೂ ಕೊಂಡೊಯ್ಯುವ ಕೆಲಸವೂ ಮುಂದಿನ ದಿನಮಾನಗಳಲ್ಲಿ ನಡೆಯಬೇಕು.
ಕನ್ನಡವು ಲಿಪಿಗಳ ರಾಣಿ ಎಂದ ಬಿರುದನ್ನು ಹೊಂದಿದೆ. ೮ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಕನ್ನಡ ಭಾಷೆಯ ಬಳಕೆಯ ಬಗ್ಗೆ ಯಾರಿಗೂ ಕೀಳರಿಮೆ ಇರಬಾರದು. ಕನ್ನಡ ನುಡಿಯು ಬರೀ ಭಾಷೆಯಲ್ಲ, ಅದೊಂದು ಸಂಸ್ಕೃತಿಯ ಬೆಸುಗೆ, ಪರಂಪರೆಯ ಬೆಸುಗೆ ಹಾಗೂ ಬದುಕಿನ ಬೆಸುಗೆಯಾಗಿದೆ. ಆಂಗ್ಲ ಭಾಷೆಯು ನಮ್ಮ ದೇಶಕ್ಕೆ ಆಂಗ್ಲರ ಮೂಲಕ ವಾಮನನಾಗಿ ಬಂದು ಇಂದು ದೈತ್ಯಾಕಾರದ ಆಕಾರವನ್ನು ಪಡೆದು ಇಡೀ ವಿಶ್ವವನ್ನೇ ಆವರಿಸಿದೆ. ಆದರೆ ನಾವು ನಮ್ಮತನವನ್ನು ಬಿಡಬಾರದು, ಕನ್ನಡದ ಗೌರವವನ್ನು ಮುಗಿಲೆತ್ತರಕ್ಕೆ ಎತ್ತರಿಸಬೇಕು. ಜೊತೆಗೆ ಕರ್ನಾಟಕದ ಅಸ್ಮಿತೆಯನ್ನು ನಾಶ ಮಾಡುತ್ತಿರುವ ದುಷ್ಟ ಶಕ್ತಿಗಳ ವಿರುದ್ಧವೂ ನಾವೆಲ್ಲ ಒಟ್ಟು ಸೇರಿ ಕೆಲಸಮಾಡಬೇಕಾಗಿದೆ. ಆಗ ನಿಜಕ್ಕೂ ನಾವು ಆಚರಿಸುವ ರಾಜ್ಯೋತ್ಸವವು ಕನ್ನಡೋತ್ಸವವಾಗುವುದು, ಜನೋತ್ಸವವಾಗುವುದು ಹಾಗೂ ನಿತ್ಯೋತ್ಸವವಾಗುವುದು.