SUDDIKSHANA KANNADA NEWS/ DAVANAGERE/ DATE:31-10-2023
ಕನ್ನಡವೆಂದರೆ ಬರೀ ಸಕ್ಕರೆಯಲ್ಲ ಕನ್ನಡಿಗದುವೆ ಅಕ್ಕರೆ…ಎಂಬ ನನ್ನ ಮಾತಿನಂತೆ ಭಾಷೆ ಮನದೊಳಗೆ ಹೊಕ್ಕಾಗ ಆನಂದ ಹೇಳತೀರದು. ಕನ್ನಡವೆಂದರೆ ಆಹ್ಲಾದಕರವು ನುಡಿಮುತ್ತಿನಲ್ಲಿ ನಿತ್ಯ ವ್ಯವಹಾರ ಮಾಡುವುದೆಂದರೆ ಅದೊಂದು ರೀತಿಯ ಸೌಖ್ಯ..
ಕರ್ನಾಟಕದ ಮೂಲ ಭಾಷೆಯನ್ನು ಸಂಸ್ಕೃತ ಎಂದು ಹೇಳಬಹುದು ಸಂಸ್ಕೃತ ಭಾಷೆಯ ಕನ್ನಡ ಪದದಿಂದ ಕರ್ನಾಟಕ ಹುಟ್ಟಿದೆ .ಕರ್ನಾಟಕವನ್ನು ನಾವು ವಿಸ್ತರಿಸಿ ಹೇಳುವುದಾದರೆ ಹಳೆಯ ಗ್ರಂಥಗಳಲ್ಲಿ ಇದನ್ನು ಕರು + ನಾಡು ಇದರ ಅರ್ಥವಾಗಿ ಕರುನಾಡು ಆಗಿದೆ ಇದನ್ನು ಕರ್ನಾಟಕ ಎಂದು ಕರೆಯಲಾಗಿದೆ. ಇದನ್ನು ಕಪ್ಪು ಮಣ್ಣಿನ ನಾಡು ಎಂದು ಕರೆಯಲ್ಪಟ್ಟಿದೆ..
ಮೊಟ್ಟಮೊದಲ ಬಾರಿಗೆ ೧೯೫೬ರಲ್ಲಿ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು.. ಕರ್ನಾಟಕ ಹುಟ್ಟಿಗೆ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕದ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ ೧೯೦೫ ರಲ್ಲಿ ಆರಂಭಿಸಿದರು. ಭಾಷೆಗಳ ಆಧಾರದ ಮೇಲೆ ೧೯೫೬ರಲ್ಲಿ ನವೆಂಬರ್ ೧ರಂದು ರಾಜ್ಯಗಳನ್ನು ವಿಂಗಡಿಸಲಾಗಿದೆ ಎಂದು ಹೇಳಲಾಗಿದೆ.
ಕರ್ನಾಟಕ ರಾಜ್ಯ ತನ್ನದೇ ಆದ ರಾಜ್ಯವನ್ನು ಹೊಂದಿ ಕನ್ನಡದ ಹೋರಾಟಗಾರರರಾದ ಎಂ. ರಾಮಮೂರ್ತಿಯವರು ಕೆಂಪು ಮತ್ತುಹಳದಿ ಬಣ್ಣದ ಬಾವುಟವನ್ನು ಪ್ರಥಮವಾಗಿ ತಯಾರಿಸಿ ಬಳಸಿದ್ದಾರೆಂದು ಹೇಳಲು ಹರ್ಷವಾಗುತ್ತದೆ..ಪ್ರತಿ ವರ್ಷವೂ ಒಂದನೇ ತಾರೀಕು ಕನ್ನಡಾಂಬೆಯ ಸಂಭ್ರಮದ ದಿನ ಸುದಿನ ಈ ದಿನವನ್ನು ನಾವು ಕನ್ನಡಿಗರ ಕನ್ನಡದ ಹಬ್ಬ ವೆಂದೇ ಆಚರಿಸುತ್ತೇವೆ.
ಕನ್ನಡ ಎಂದರೆ ಕನ್ನಡಿಗರಿಗೆ ಮಾತೃಭಾಷೆ. ರಾಜ್ಯೋತ್ಸವ ಎಂದರೆ ರಾಜ್ಯದ ಜನನ ೧೯೫೬ರಲ್ಲಿ. ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸುವ ಮೂಲಕ ರಾಜ್ಯವನ್ನು ರಚಿಸಲಾಗಿದೆ. ಇದನ್ನು ನಾವು ಕರ್ನಾಟಕ ಎಂದು ಕರೆಯುತ್ತೇವೆ. ಕನ್ನಡ ರಾಜ್ಯೋತ್ಸವವನ್ನು ನಾವು ವಿಜೃಂಭಣೆಯಿಂದ ಆಚರಿಸುತ್ತೇವೆ. ಈ ದಿನದ ವಿಶೇಷವೆಂದರೆ ಕೆಂಪು ಹಳದಿ ಬಣ್ಣದ ದ್ವಜವನ್ನು ಹಾರಿಸುತ್ತೇವೆ. ಶಾಲೆಗಳಲ್ಲಿ ಸರ್ಕಾರಿ ಕಛೇರಿಗಳಲ್ಲಿ,ಕನ್ನಡ ಸಂಘಟನೆಗಳಲ್ಲಿ ಹೀಗೆ ಕರ್ನಾಟಕದಾದ್ಯಂತ ಸಂಭ್ರಮವೋ ಸಂಭ್ರಮ.
ಮಕ್ಕಳಿಗಂತೂ ಇದೊಂದು ಸಡಗರದ ಹಬ್ಬ. ಕನ್ನಡದ ಹಾಡುಗಳನ್ನು ಹಾಡುತ್ತಾ, ನೃತ್ಯಮಾಡುತ್ತಾ ಬಣ್ಣ ಬಣ್ಣದ ವಸ್ತ್ರವನ್ನು ಧರಿಸಿ ಕುಣಿದು ಕುಪ್ಪಳಿಸುವ ಒಂದು ಸಂಭ್ರಮದ ಹಬ್ಬ ಸಿಹಿಯನ್ನು ಹಂಚುತ್ತಾ ,ಕನ್ನಡ ನಾಡಿನ ಹಿರಿಯರ ನೆನೆಯುತ್ತಾ ಇತಿಹಾಸದ ಪುಟಗಳಲ್ಲಿ ಮಿಂಚಿ ಮಿರುಗಿದ ದಿಗ್ಗಜರನ್ನು ನೆನೆಯುವ ವಿಶೇಷ ದಿನವೇ ಕನ್ನಡ ರಾಜ್ಯೋತ್ಸವ..
ಕುವೆಂಪು ರಚಿತ ಜಯಭಾರತ ಜನನಿಯ ತನುಜಾತೆ ಗೀತೆಯನ್ನು ಸಾಮೂಹಿಕವಾಗಿ ಹಾಡುವುದು ಕನ್ನಡ ನಾಡಿಗೆ ಗೌರವವನ್ನು ಸೂಚಿಸುತ್ತದೆ..ಇಂತಹ ದಿನದಲ್ಲಿ ನಾಡಿಗಾಗಿ ದುಡಿದು ಮಡಿದ ಸಾಹಿತಿಗಳನ್ನು ನಾಡಿನ ಗಣ್ಯರನ್ನು ನೆನೆದು ಅವರ ಹೆಸರಿನಲ್ಲಿ ಹಲವಾರು ಪ್ರತಿಭೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರ,ವೈದ್ಯಕೀಯ, ಸಮಾಜ ಸೇವೆ ದೂರದರ್ಶನ, ಸಿನಿಮಾರಂಗ, ನಾಟಕ ರಂಗ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧಿಸಿದ ಸಾಧಕರಿಗೆ ನೀಡಿ ಗೌರವಿಸಲಾಗುತ್ತದೆ. ಯಾವುದೇ ಜಾತಿ, ಧರ್ಮ,ವಿಲ್ಲದೆ ಸಮರ್ಥರನ್ನು ಸರಿಸಮದಿ ಕಾಣುವ ಹಬ್ಬವೇ ನಮ್ಮ ಕನ್ನಡ ರಾಜ್ಯೋತ್ಸವ ..
ಕನ್ನಡ ರಾಜ್ಯೋತ್ಸವ ಒಂದು ವಿಶಿಷ್ಟ ಆಚರಣೆಯಾಗಿದೆ. ಕನ್ನಡಿಗರಿಗೆ ಇದು ವೈಭವ. ಕನ್ನಡದ ಹಲವಾರು ಸಂಘಟನೆಗಳು ಕಾರ್ಯಕರ್ತರನ್ನೊಳಗೊಂಡು ಕನ್ನಡದ ಬಾವುಟಗಳನ್ನು ಹಾರಿಸುತ್ತಾರೆ. ಇದನ್ನು ಕರ್ನಾಟಕದ ದೊಡ್ಡ ಹಬ್ಬವೆಂದೇ ಪರಿಗಣಿಸಲಾಗಿದೆ. ೧೯೭೩ ರ ನವೆಂಬರ್ ೧ ಕನ್ನಡ ನಾಡನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ.. ದಕ್ಷಿಣ ಭಾರತದಲ್ಲಿ ಕನ್ನಡ ನಾಡಿಗೆ ತನ್ನದೇ ಆದ ವೈಶಿಷ್ಯವಿದೆ ..
ರಾಜ್ಯೋತ್ಸವದ ದಿನ ಬಹುವರ್ಣದ ಚಿತ್ರಗಳಿಂದ, ತರತರ ಜಾತಿಯ ಘಮಿಸುವ ಹೂಗಳಿಂದ ಅಲಂಕೃತಗೊಳಿಸಿ ವಾಹನಗಳ ಮೇಲೆ ತಾಯಿ ಭುವನೇಶ್ವರಿಯನ್ನು ಆರಾಧಿಸಿ ಜನಸ್ತೋಮಕಿಕ್ಕಿರಿದು ಭಾಗವಹಿಸಿ ಭುವನೇಶ್ವರಿಗೆ ಜೈಕಾರ ಹಾಕುವರು. ನಂತರ ಮಕ್ಕಳು ಹಿರಿಯರು ಕಿರಿಯರೆಂಬ ಭೇಧವಿಲ್ಲದೆ ಎಲ್ಲರೂ ಪಾಲ್ಗೊಂಡು ನೃತ್ಯ,ಡೊಳ್ಳುಕುಣಿತ ,ಸಂಗೀತ,ವೀರಗಾಸೆ, ಕನ್ನಡದ ಚಲನಚಿತ್ರ ಗೀತೆಗಳ ಮೂಲಕ ಮೆರವಣಿಗೆ ರಾರಾಜಿಸುತ್ತದೆ..ಇಂತಹ ದೊಡ್ಡ ದೊಡ್ಡ ಕಾರ್ಯಕ್ರಮದಲ್ಲಿ ಗಣ್ಯರ ಭಾಷಣವೂ ಇರುತ್ತದೆ.
ಇನ್ನು ನಮ್ಮ ಕನ್ನಡದ ಬಗ್ಗೆ ದ್ವಜದ ಬಗ್ಗೆ ಹೇಳಬೇಕೆಂದರೆ ದ್ವಿಬಣ್ಣದ ದ್ವಜವು ಮಂಗಳಕರ ಮತ್ತು ಕಲ್ಯಾಣದ ಸಂಕೇತವಾಗಿ ರಾರಾಜಿಸುತ್ತದೆ. ಇಂತಹ ಧ್ವಜದಿಂದ ಹಲವಾರು ಸಂಘಟನೆಗಳು ರಾಜ್ಯಾದ್ಯಂತ ಕನ್ನಡದ ಹಿರಿಮೆಯನ್ನು ಮೆರೆಸುತ್ತವೆ.. ನಾವು ಕನ್ನಡಿಗರು ನಮ್ಮ ಮಣ್ಣಿನ ಋಣ ಹೊತ್ತವರು.. ನಾಡಿಗಾಗಿ ಬಾಳಿ ಬದುಕಬೇಕು… ಮುಂದಿನ ಪೀಳಿಗೆಗೆ ನಾಡಿನ ಸಂಸ್ಕತಿ ಮತ್ತು ಸಂಸ್ಕಾರದ ಬಗ್ಗೆ ತಿಳಿಸುತ್ತಾ ಭುವನೇಶ್ವರಿಯ ಸೇವೆಯನ್ನು ಮಾಡುತ್ತಾ ಬರಬೇಕಿದೆ…