SUDDIKSHANA KANNADA NEWS/ DAVANAGERE/ DATE:22-10-2023
ದಾವಣಗೆರೆ: ನಬಾರ್ಡ್ ಯೋಜನೆಯಡಿ 22 ಕೋಟಿ ರೂ. ವೆಚ್ಚದಲ್ಲಿ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕಂದಗಲ್ಲು ಮತ್ತು ಮಾಯಕೊಂಡ (Mayakonda) ಸಂಪರ್ಕಿಸುವ ರಸ್ತೆ ನಿರ್ಮಿಸಿದ್ದು, ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಕೆ. ಎಸ್. ಬಸವಂತಪ್ಪ ಹೇಳಿದರು.
Read Also This Story:
BIG BREAKING NEWS: ಚನ್ನಗಿರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರ: ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ಯಾಕೆ….?
ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮಾಯಕೊಂಡ ಕ್ಷೇತ್ರದ ಸುತ್ತಮುತ್ತಲ ಇರುವ ಕ್ಷೇತ್ರಗಳ ರಸ್ತೆಗಳು ತುಂಬ ಉತ್ತಮ ರಸ್ತೆಗಳು ಇವೆ. ಆದರೆ ನಮ್ಮ ಕ್ಷೇತ್ರದ ರಸ್ತೆಗಳನ್ನು ನೋಡಿದರೆ ತುಂಬ ನೋವಾಗುತ್ತದೆ. ಎಲ್ಲಾ ರಸ್ತೆಗಳು ಹದಗೆಟ್ಟು ಹೋಗಿವೆ. ಇದಕ್ಕೆಲ್ಲ ಕಾರಣ ಗುತ್ತಿಗೆದಾರರು ಮಾಡಿರುವ ಕಳಪೆ ಕಾಮಗಾರಿಯಿಂದ ಆಗಿವೆ. ಇನ್ನು ಮುಂದೆ ನಡೆಯುವ ರಸ್ತೆಗಳ ಕಾಮಗಾರಿ ಕಳಪೆ ಆಗದಂತೆ ಆಯಾ ಗ್ರಾಮಸ್ಥರು ನಿಗಾ ವಹಿಸಿ ಗುಣಮಟ್ಟ ರಸ್ತೆ ನಿರ್ಮಿಸಿಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.
ಸುಳ್ಳು ಹೇಳುವವರನ್ನು ಯಾರೂ ನಂಬಬಾರದು. ಸತ್ಯ ಹೇಳುವವರನ್ನು ನಂಬಿ. ನಾನೂ ಸುಳ್ಳು ಹೇಳಿದರೂ ನನ್ನನ್ನು ನಂಬಬೇಡಿ. ಯಾರೂ ಅಭಿವೃದ್ಧಿ ಪರ ಕೆಲಸ ಮಾಡುತ್ತಾರೆ ಅವರನ್ನು ಪ್ರೋತ್ಸಾಹಿಸಿ. ಆಗ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ ಎಂದು ಹೇಳಿದರು.
ಈ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಗಳು ಮಳೆ ಬಂದಾಗ ಸೊರುತ್ತವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ತರುವ ಮೂಲಕ ಶಾಲೆಗಳ ಆರ್ಸಿಸಿ ದುರಸ್ತಿಗೊಳಿಸುವುದಾಗಿ ಭರವಸೆ ನೀಡಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಐದು ಭರವಸೆಗಳಲ್ಲಿ ನಾಲ್ಕು ಭರವಸೆಗಳನ್ನು ಈಡೇರಿಸಿದೆ. ಕೊಟ್ಟ ಭರವಸೆ ಈಡೇರಿಸಿದ ಯಾವುದಾದರೂ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರವಾಗಿದೆ ಎಂದರು.
ಮಾಜಿ ಶಾಸಕ ಪ್ರೊ.ಎನ್.ಲಿಂಗಪ್ಪ ಮಾತನಾಡಿದರು. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಎಚ್.ಕೆ.ಬಸಪ್ಪ, ಜಗದೀಶಪ್ಪ ಬಣಕಾರ, ಕೆ.ಎನ್.ಸೋಮಶೇಖರಪ್ಪ, ಬಿ.ಜಿ. ಬಸವರಾಜಪ್ಪ, ಕೆ.ಒ.ಮಹೇಶ್, ಎಸ್.ಜಿ.ಶೇಖರ್, ಡಾ.ಎಸ್.ಎಂ.ಮೂರ್ತಿ, ಯಶೋಧ, ಡಾ.ಎನ್.ಗುರುಶೇಖರ್, ಗ್ರಾಪಂ ಸದಸ್ಯರಾದ ಜಿ.ಬಿ.ರಾಜಪ್ಪ, ಎ.ಆರ್.ಕಲ್ಲೇಶ್, ಎನ್.ಎಂ.ಕೋಟೆಪ್ಪ, ಪಾರ್ವತಮ್ಮ, ಬಿ.ಎಲ್. ವಿಜಯಮ್ಮ ಸೇರಿದಂತೆ ಇನ್ನಿತರರಿದ್ದರು.