SUDDIKSHANA KANNADA NEWS/ DAVANAGERE/ DATE:05-02-2025
ದಾವಣಗೆರೆ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2 ತಂತ್ರಾಂಶದಲ್ಲಿ ದೋಷ ಕಂಡು ಬಂದಿದೆ. ಕಳೆದ ಹದಿನೈದು ದಿನಗಳಿಂದ ಇಲ್ಲಿಗೆ ಬರುತ್ತಿರುವ ಜನರು ಹೈರಾಣಾಗಿದ್ದಾರೆ. ಯಾವಾಗ ಬಂದರೂ ಸೈಟ್ ಓಪನ್ ಆಗ್ತಿಲ್ಲ, ತಂತ್ರಾಂಶ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಿದ್ಧ ಉತ್ತರ ಬರುತ್ತಿದೆ. ರಿಜಿಸ್ಟ್ರೇಷನ್ ಗೆ ಬರುವವರ ಗೋಳು ಕೇಳುವವರೇ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಮಾಡಿರುವ ಯಡವಟ್ಟಿಗೆ ಜನರು, ರೈತರು ಸಮಸ್ಯೆ ಅನುಭವಿಸುವಂತಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಾವೇರಿ-2 ತಂತ್ರಾಂಶದಲ್ಲಿ ದೋಷದಿಂದ ಆಸ್ತಿ ನೋಂದಣಿಗಾಗಿ ಜನರು ಪರದಾಡುತ್ತಿದ್ದಾರೆ. ಆದರೂ ರಾಜ್ಯ ಸರ್ಕಾರವಾಗಲೀ, ಕಂದಾಯ ಸಚಿವರಾಗಲೀ ತಲೆ ಕೆಡಿಸಿಕೊಂಡಿಲ್ಲ. ಕೇಳಿದರೆ
ಸರ್ವರ್ ಸಮಸ್ಯೆ ಎನ್ನುತ್ತಾರೆ. ಇದರಲ್ಲಿ ಬೇರೆಯದ್ದೇ ಸಮಸ್ಯೆ ಇದೆ ಎಂಬುದು ದಾವಣಗೆರೆ ಜಿಲ್ಲಾ ಬಿಜೆಪಿ ಆರೋಪ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ರಾಜಶೇಖರ ನಾಗಪ್ಪನವರ ನೇತೃತ್ವದ ನಿಯೋಗ ದಾವಣಗೆರೆ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿತು. ವಸ್ತುಸ್ಥಿತಿ ಅಧ್ಯಯನ, ಸಾರ್ವಜನಿಕರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿತು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ ಕಳೆದ ವಾರದಿಂದ ಕರ್ನಾಟಕ ರಾಜ್ಯದಲ್ಲಿ ಆಸ್ತಿ ನೋಂದಣಿ ಕಾರ್ಯವು ಬಹುತೇಕ ಸ್ಥಗಿತಗೊಂಡಿದ್ದು ಜನ ಸಾಮಾನ್ಯರಿಗೆ, ರೈತರಿಗೆ ತೀರ್ವ ತೊಂದರೆಯಾಗಿದೆ. ಒಂದು ಮೂಲದ ಪ್ರಕಾರ ತಂತ್ರಾಂಶ ನಿರ್ವಹಿಸುತ್ತಿರುವ ಸಂಸ್ಥೆಗೆ ನೀಡಬೇಕಾದ ಹಣವನ್ನು ನೀಡದಿರುವುದರಿಂದ ಈ ದುರ್ಗತಿಗೆ ಕಾರಣ ಎಂದು ತಿಳಿದು ಬಂದಿದೆ. ಆ ಕಾರಣದಿಂದ ಇಂದು ನೋಂದಣಿ ಕಛೇರಿಗೆ ಬಿಜೆಪಿ ಜಿಲ್ಲಾ ಘಟಕವು ಅಧಿಕಾರಿಗಳು ಹಾಗೂ
ಸಾರ್ವಜನಿಕರು ಮತ್ತು ಪತ್ರ ಬರಹಗಾರರೊಂದಿಗೆ ಚರ್ಚಿಸಿ, ಅಧಿಕಾರಿಗಳಿಗೆ ತಕ್ಷಣವೇ ವ್ಯವಸ್ಥೆಯನ್ನು ಸರಿಪಡಿಸಲು ಆಗ್ರಹಿಸಿತಲ್ಲದೇ, ಸಮಸ್ಯೆ ಸರಿಪಡಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ನಾಗಪ್ಪ ಮಾತನಾಡಿ, ಇದೊಂದು ಪಾಪರ್, ದಿವಾಳಿ ಸರ್ಕಾರ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ತಂತ್ರಾಂಶ ನಿರ್ವಹಣೆ ಮಾಡುವ ಸಂಸ್ಥೆಗೆ 460 ಕೋಟಿ ರೂಪಾಯಿ ದುಡ್ಡು ಬಾಕಿ ಇದೆ ಎಂಬುದು. ಆದ್ರೆ,
ಅಧಿಕಾರಿಗಳು ಈ-ಖಾತಾ ತೊಂದರೆಯಿಂದ ಆಗಿದೆ ಎನ್ನುತ್ತಾರೆ. ಈ ಖಾತಾ ನಿರ್ವಹಣೆ ಸಂಸ್ಥೆಯೇ ಬೇರೆ, ನೋಂದಣಿ ಮಾಡುವ ಸಂಸ್ಥೆಯೇ ಬೇರೆ. ರಾಜ್ಯದಲ್ಲಿ ದಿನಕ್ಕೆ 8 ಸಾವಿರ ನೋಂದಣಿ ಆಗುತ್ತಿದ್ದವು. ಆದ್ರೆ, ಈಗ ಕೇವಲ ದಿನಕ್ಕೆ 600 ಮಾತ್ರ
ರಿಜಿಸ್ಟ್ರೇಷನ್ ಆಗುತ್ತಿವೆ. ಸರ್ಕಾರಕ್ಕೆ ಬರುವ ಆದಾಯವೂ ಖೋತಾ ಆಗಿದೆ. ಜನರು ಬೆಳಿಗ್ಗೆಯಿಂದ ಸಂಜೆಯವರೆಗೆ ಕಾದು ವಾಪಸ್ ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುತ್ತಾರೆ. ಅವರ ಯೋಗ್ಯತೆ ಏನು ಎಂಬುದು ಜನರಿಗೆ ಗೊತ್ತಾಗಿದೆ. ಕೂಡಲೇ ಸರಿಪಡಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಬಿಜೆಪಿ ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ. ಎಂ. ಸತೀಶ್, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳ್, ಬಿ. ಜಿ. ಅಜಯಕುಮಾರ್, ಪಿ. ಸಿ. ಶ್ರೀನಿವಾಸ ಭಟ್, ಕಡ್ಲೇಬಾಳ್ ಬಸಣ್ಣ, ಪ್ರವೀಣ್ ಜಾಧವ್, ಹೆಚ್. ಪಿ. ವಿಶ್ವಾಸ್, ಜಯರುದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.
ಉಪನೋಂದಣಾಧಿಕಾರಿ ಆರ್. ಎಲ್. ವೀಣಾ ಹೇಳಿದ್ದೇನು..?
ಉಪನೋಂದಣಾಧಿಕಾರಿ ಆರ್ ಎಲ್ ವೀಣಾ ಅವರು ಬಿಜೆಪಿ ನಿಯೋಗದೊಂದಿಗೆ ಮಾತನಾಡಿ, ಸಿಟಿಜನ್ ಲಾಗಿನ್ ನಿನ್ನೆ ಕಾರ್ಯ ನಿರ್ವಹಿಸಲಿಲ್ಲ. ಈಗ ಅದು ಸೇರಿಹೋಗಿದೆ. ಕಾವೇರಿ-2 ತಂತ್ರಾಂಶದಲ್ಲಿ ಸಣ್ಣ ಪುಟ್ಟ ನ್ಯೂನತೆಗಳು ಇರುವುದು ಸಾಮಾನ್ಯ. ಅದನ್ನು ಇಲಾಖೆ ಮಟ್ಟದಲ್ಲಿ ಸರಿಪಡಿಸಲು ಪ್ರಯತ್ನಿಸಲಾಗಿದೆ. ಇನ್ನು ಮುಂದೆ ಸರ್ವರ್ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು.