SUDDIKSHANA KANNADA NEWS/ DAVANAGERE/ DATE:22-10-2023
ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ (Ticket) ನೀಡುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಾಂತರ ರೂಪಾಯಿ ಪಡೆದು ಜೈಲು ಪಾಲಾಗಿರುವ ಹಿಂದೂ ಭಾಷಣಕಾರ್ತಿ ಚೈತ್ರಾ ಕುಂದಾಪುರ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇದು ಬಿಜೆಪಿಗೆ ಇರಿಸು ಮುರಿಸು ತರಿಸುವಂತಾಗಿದೆ.
Read Also This Story:
BIG BREAKING NEWS: ಚನ್ನಗಿರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರ: ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ಯಾಕೆ….?
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರ (ಎಸ್ ಸಿ)ದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೊಟ್ಟೂರು ತಾಲೂಕಿನ ಬೆನಕಹಳ್ಳಿ ಗ್ರಾಮದ ಬಿಜೆಪಿ ಮುಖಂಡರಾಗಿದ್ದ ರೇವಣಸಿದ್ಧಪ್ಪ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಎನ್. ಪಿ. ಶೇಖರ್ ಅವರು ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದ ಪಿಡಬ್ಲ್ಯೂಡಿ ಇಲಾಖೆಯ ನಿವೃತ್ತ ಸಹಾಯಕ ಅಭಿಯಂತರ ಸಿ. ಶಿವಮೂರ್ತಿ ಅವರು ದೂರು ಕೊಟ್ಟಿದ್ದಾರೆ. ಮಾತ್ರವಲ್ಲ, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ರೇವಣಸಿದ್ಧಪ್ಪ ಎಂಬುವವರು ನನ್ನ ನಿವೃತ್ತಿ ಕಾರ್ಯಕ್ರಮದಲ್ಲಿ ಪರಿಚಯವಾಗಿದ್ದರು. ಆ ಬಳಿಕ ಸ್ನೇಹಿತರಾದರು. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನನ್ನನ್ನು ಪದೇ ಪದೇ ಭೇಟಿ ಮಾಡಿದ್ದರು. ಬಿಜೆಪಿಯಿಂದ ಎಂಎಲ್ ಎ
ಟಿಕೆಟ್ ಕೊಡಿಸುವುದಾಗಿ ನಂಬಿಸಿ 2022ರ ಅಕ್ಟೋಬರ್ 23ರಂದು ಬೆಂಗಳೂರಿಗೆ ಕರೆದುಕೊಂಡು ಹೋಗಿ ಹೊಟೇಲ್ ನಲ್ಲಿ ಪುತ್ತೂರಿನ ಬಿಜೆಪಿ ಮುಖಂಡ ಎನ್. ಪಿ. ಶೇಖರ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು.
ಶೇಖರ್ ಅವರು, ಬೆಂಗಳೂರಿನ ಬಿಜೆಪಿ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಆಗ ನನಗೆ ನಳೀನ್ ಕುಮಾರ್ ಕಟೀಲ್ ಅವರು ನನ್ನ ಬಳಿ ಮಾತನಾಡಿ ಟಿಕೆಟ್ ವಿಚಾರದ ಎಲ್ಲಾ ವ್ಯವಹಾರವನ್ನು ಎನ್. ಪಿ. ಶೇಖರ್ ಜೊತೆ ಮಾತನಾಡಿ ಎಂದು ಕಳುಹಿಸಿದ್ದರು. ಹಣ ಕೊಟ್ಟರೆ ಟಿಕೆಟ್ ಸಿಗುತ್ತದೆ ಎಂದು ನಂಬಿಸಿ, ಅಕ್ಟೋಬರ್ 9ರಿಂದ ಆರಂಭವಾದ ಹಣದ ವ್ಯವಹಾರ ಏಪ್ರಿಲ್ 2023ಕ್ಕೆ 2 ಕೋಟಿ 55 ಲಕ್ಷ ರೂಪಾಯಿಯವರೆಗೂ ಹಣ ಪಡೆದುಕೊಂಡಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಹಣ ವಾಪಸ್ ಕೊಡುವುದಾಗಿ ನಂಬಿಸಿದ್ದರು. ನನಗೆ ಟಿಕೆಟ್ ಸಿಗಲಿಲ್ಲ. ಚುನಾವಣೆ ಮುಗಿದು ಐದು ತಿಂಗಳಾಗುತ್ತಾ ಬಂದಿದ್ದರೂ ಹಣ ವಾಪಸ್ ಕೊಟ್ಟಿಲ್ಲ ಎಂದು ಶಿವಮೂರ್ತಿ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೆಸರು ಹೇಳಿಕೊಂಡು ಹಣ ಪಡೆದಿರುವ ಆರೋಪ ಕೇಳಿ ಬಂದಿದೆ. ಮಾತ್ರವಲ್ಲ, ಈ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
ಚೈತ್ರಾ ಕುಂದಾಪುರ ಕೋಟಿ ಡೀಲ್ ಕೇಸ್ ಬೆನ್ನಲ್ಲೇ ಈ ಕೇಸ್ ಕೂಡ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಲಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬರೋಬ್ಬರಿ ಎರಡು ಕೋಟಿ ಮೂರು ಲಕ್ಷ ರೂಪಾಯಿ ವಂಚನೆ ಮಾಡಿರುವ ಕುರಿತಂತೆ ದೂರಿನಲ್ಲಿ ಆರೋಪಿಸಲಾಗಿದೆ.
ಪುತ್ತೂರು ಮೂಲದ ಹಾಗೂ ಬಿಜೆಪಿಯಲ್ಲಿದ್ದ ಸ್ಥಳೀಯ ಮುಖಂಡನ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ಟಿಕೆಟ್ ನೀಡಿಸುತ್ತೇನೆ ಎಂದು ಹೇಳಿ ಹಂತ ಹಂತವಾಗಿ ಹಣವನ್ನು ಆನ್ ಲೈನ್ ಮೂಲಕ ಪಡೆದಿದ್ದಾರೆ. ಹಣ ವಾಪಸ್ ಕೊಡಿಸಬೇಕು. ನ್ಯಾಯ ಒದಗಿಸಿಕೊಡಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ವಿಜಯಪುರದ ರೇವಣ್ಣ ಸಿದ್ದಪ್ಪ, ಪುತ್ತೂರಿನ ಶೇಖರ್ ಎನ್.ಪಿ ವಿರುದ್ಧ ಎಫ್.ಐ.ಆರ್ ದಾಖಲಾಗಿದ್ದು, ಹಗರಿಬೊಮ್ಮನಹಳ್ಳಿಯ ಸಿ ಶಿವಮೂರ್ತಿ ಎಂಬುವವರು ದೂರು ಕೊಟ್ಟಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ ಐ ಆರ್ ಆಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಕರೆ ಮಾಡಿದ್ದರು ಅಂತಾ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.
ಬೆಂಗಳೂರಿನ ಬಿಜೆಪಿ ರಾಜ್ಯಾಧ್ಯಕ್ಷರ ಕಚೇರಿಯಲ್ಲಿ ನಳೀನ್ ಅವರನ್ನು ಶೇಖರ್ ಮಾಡಿದ್ದು, ಆ ಬಳಿಕ ನಳೀನ್ ಕುಮಾರ್ ಕಟೀಲ್ ಕರೆ ಮಾಡಿ ಟಿಕೆಟ್ ವಿಚಾರವಾಗಿ ಶೇಖರ್ ಜೊತೆ ಮಾತನಾಡಿ ಅಂತಾ ಹೇಳಿದ್ರು ಅಂತಾ ದೂರಿನಲ್ಲಿ
ಆರೋಪಿಸಲಾಗಿದೆ.
ಹಣ ವಂಚನೆ ಮಾಡಿದ ಪುತ್ತೂರಿನ ಬಿಜೆಪಿ ಮುಖಂಡ ಎನ್. ಪಿ. ಶೇಖರ್ ಹಾಗೂ ಕೊಟ್ಟೂರಿನ ರೇವಣಸಿದ್ಧಪ್ಪ ವಿರುದ್ಧ ಕ್ರಮ ಕೈಗೊಂಡು ನನ್ನ ಹಣ ವಾಪಸ್ ಕೊಡಿಸುವಂತೆ ಸಿ. ಶಿವಮೂರ್ತಿ ದೂರಿನಲ್ಲಿ ಮನವಿ ಮಾಡಿದ್ದಾರೆ.