SUDDIKSHANA KANNADA NEWS/ DAVANAGERE/ DATE:05-02-2025
ದಾವಣಗೆರೆ: ತಾಲೂಕಿನ ಕುರ್ಕಿ ಗ್ರಾಮದ ಭದ್ರಾ ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕನ ಮೃತದೇಹ ಪತ್ತೆಯಾಗಿದೆ. ಕಳೆದ ಭಾನುವಾರ ಈಜಲು ಹೋಗಿದ್ದಾಗ ಇಬ್ಬರು ಬಾಲಕರು ನೀರುಪಾಲಾಗಿದ್ದರು.
ಕುರ್ಕಿ ಗ್ರಾಮದ ಪಾಂಡು (16) ಮೃತದೇಹವು ಭಾನುವಾರವೇ ಪತ್ತೆಯಾಗಿತ್ತು. ಆದ್ರೆ. ಗಣೇಶ (16) ಮೃತದೇಹ ಸಿಕ್ಕಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ಸತತ ಹುಡುಕಾಟ ನಡೆಸಿದ್ದು, ಘಟನೆ ನಡೆದ ಸ್ಥಳದಿಂದ ಸುಮಾರು 5 ಕಿಲೋಮೀಟರ್
ದೂರದಲ್ಲಿ ಮೃತದೇಹ ಪತ್ತೆಯಾಗಿದೆ.
ಅಗ್ನಿಶಾಮಕ ದಳ ಸಿಬ್ಬಂದಿ, ಹದಡಿ ಪೊಲೀಸರು ಹಾಗೂ ಸ್ಥಳೀಯರು ಸತತ ಹುಡುಕಾಟ ನಡೆಸಿದ್ದರು. 5 ಕಿಲೋಮೀಟರ್ ದೂರದಲ್ಲಿ ಮೃತದೇಹ ತೇಲುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆ ಬಳಿಕ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಆ ದೇಹವು ಗಣೇಶನದ್ದು ಎಂದು ಗೊತ್ತಾಗಿದೆ.
ತುರ್ಚಘಟ್ಟದ ಗುರುಕಲ ವಸತಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದ ಪಾಂಡು ಹಾಗೂ ಗಣೇಶ್ ಭಾನುವಾರ ರಜೆ ಇದ್ದ ಕಾರಣ ಭದ್ರಾ ನಾಲೆಯಲ್ಲಿ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.
ಗ್ರಾಮದ ಬಳಿ ಹರಿಯುತ್ತಿರುವ ದೊಡ್ಡದಾದ ಭದ್ರಾ ಕಾಲುವೆಯಲ್ಲಿ ಪಾಂಡು ಮತ್ತು ಗಣೇಶ ಈಜಲು ಬಂದಿದ್ದರು. ಪಾಂಡುಗೆ ಈಜಲು ಬರುತ್ತಿತ್ತು. ಗಣೇಶನಿಗೆ ಈಜಲು ಬರುತ್ತಿರಲಿಲ್ಲ. ಮೊದಲು ಪಾಂಡು ಕಾಲುವೆಗೆ ಜಿಗಿದು ಈಜಾಡುತ್ತಿದ್ದ. ನಂತರ ಗಣೇಶ ಜಿಗಿದಿದ್ದಾನೆ. ಈ ವೇಳೆ ಗಣೇಶ ಮುಳುಗಿ ಏಳುತ್ತಿದ್ದಾಗ ಪಾಂಡು ಅವನನ್ನು ರಕ್ಷಣೆ ಮಾಡಲು ಬಂದಿದ್ದ. ಈ ಸಂದರ್ಭದಲ್ಲಿ ಇಬ್ಬರು ನೀರು ಪಾಲಾಗಿದ್ದರು. ಈಜುತ್ತಿದ್ದ ಸಮೀಪವೇ ಗೇಟು ಇದ್ದು, ಈ ಗೇಟ್ ಬಳಿ ಪಾಂಡು ಮೃತದೇಹ ಪತ್ತೆಯಾಗಿತ್ತು.