ತಿರುವನಂತಪುರಂ: ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಒಡಿಶಾ ಮೂಲದ 27 ವರ್ಷದ ಯುವಕನೊಬ್ಬ ತೀವ್ರ ಹಲ್ಲೆಯಿಂದ ಸಾವನ್ನಪ್ಪಿರುವ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ. ಈ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ವಸತಿ ಪ್ರದೇಶದಲ್ಲೇ ರಹಸ್ಯವಾಗಿ ನಡೆಯುತ್ತಿದ್ದ ದೊಡ್ಡ ವೇಶ್ಯಾವಾಟಿಕೆ ಜಾಲವೊಂದು ಪತ್ತೆಯಾಗಿದೆ.
ಒಡಿಶಾ ಮೂಲದ ದನ್ಪತ್ ನಾಯಕ್ (27) ಕೊಲೆಯಾದ ದುರ್ದೈವಿ. ಈತ ಎಂ.ಜಿ ರಸ್ತೆಯ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಜೂನ್ ೧೮ ರಂದು ದನ್ಪತ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕೊರಪ್ಪತ್ನಲ್ಲಿರುವ ಮನೆಯೊಂದಕ್ಕೆ ತೆರಳಿದ್ದ ಎನ್ನಲಾಗಿದೆ. ಈ ವೇಳೆ ಹಣದ ಪಾವತಿ ವಿಚಾರವಾಗಿ ಅಲ್ಲಿ ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ವೇಶ್ಯಾವಾಟಿಕೆ ದಂದೆಯಲ್ಲಿದ್ದ ಎಂಟು ಜನರ ಗುಂಪು ದನ್ಪತ್ ಮತ್ತು ಆತನ ಸ್ನೇಹಿತರ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದೆ.
ಹಲ್ಲೆಯ ನಂತರ ಗಾಯಾಳುಗಳನ್ನು ಅವರ ರೂಮ್ ಬಳಿ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರೂ ದನ್ಪತ್ ತಕ್ಷಣ ಆಸ್ಪತ್ರೆಗೆ ದಾಖಲಾಗದೆ ನಿರ್ಲಕ್ಷ್ಯ ವಹಿಸಿದ್ದ ಎನ್ನಲಾಗಿದೆ. ಪರಿಣಾಮ ಭಾನುವಾರ ಆಂತರಿಕ ರಕ್ತಸ್ರಾವದಿಂದ ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಮಹಿಳೆಯರು ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಒಬ್ಬ ಅಸ್ಸಾಂಗೆ ಓಡಿಹೋಗಿದ್ದಾನೆ ಎಂದು ಶಂಕಿಸಲಾಗಿದೆ. ವಸತಿ ಪ್ರದೇಶದಲ್ಲಿ ಇಂತಹ ಕಾನೂನುಬಾಹಿರ ದಂದೆ ನಡೆಯುತ್ತಿರುವುದಕ್ಕೆ ತ್ರಿಶೂರ್ ಮೇಯರ್ ಡಾ. ನಿಜಿ ಜಸ್ಟಿನ್ ಆಘಾತ ವ್ಯಕ್ತಪಡಿಸಿದ್ದು, ಮನೆ ಮಾಲೀಕರು ಬಾಡಿಗೆದಾರರ ಮತ್ತು ವಲಸೆ ಕಾರ್ಮಿಕರ ಸಂಪೂರ್ಣ ದಾಖಲೆಗಳನ್ನು ಪೊಲೀಸರಿಗೆ ನೀಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.





Leave a comment