Home ದಾವಣಗೆರೆ ಬೆಂಗಳೂರಿಗೆ ಹೋಗಬೇಕಿಲ್ಲ! ದಾವಣಗೆರೆಯಲ್ಲಿಯೇ ಸಂಕಲ್ಪ-2 ಯೋಜನೆಯಡಿ ಐಎಎಸ್, ಕೆಎಎಸ್ ಪರೀಕ್ಷೆಗೆ ಉಚಿತ ತರಬೇತಿ: ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

ಬೆಂಗಳೂರಿಗೆ ಹೋಗಬೇಕಿಲ್ಲ! ದಾವಣಗೆರೆಯಲ್ಲಿಯೇ ಸಂಕಲ್ಪ-2 ಯೋಜನೆಯಡಿ ಐಎಎಸ್, ಕೆಎಎಸ್ ಪರೀಕ್ಷೆಗೆ ಉಚಿತ ತರಬೇತಿ: ಪ್ರಭಾ ಮಲ್ಲಿಕಾರ್ಜುನ್

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಜಿಲ್ಲೆಯಲ್ಲಿಯೇ ಉಚಿತವಾಗಿ ಒದಗಿಸುವ ಉದ್ದೇಶದಿಂದ ಎಸ್.ಎಸ್. ಕೇರ್ ಟ್ರಸ್ಟ್, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ IAS ಬಾಬಾ, ಬೆಂಗಳೂರು ಅವರ ಸಹಯೋಗದಲ್ಲಿ ‘ಸಂಕಲ್ಪ-2″ ಯೋಜನೆ ಆರಂಭಿಸಲಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಸಂಕಲ್ಪ-2 ಯೋಜನೆಗೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ UPSC, KPSC, KEA ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಜಿಲ್ಲೆಯ ವಿದ್ಯಾರ್ಥಿಗಳು ಬೆಂಗಳೂರು, ಮೈಸೂರು ಸೇರಿದಂತೆ ಇತರ ನಗರಗಳಿಗೆ ತೆರಳಬೇಕಾಗುತ್ತಿತ್ತು. ತರಬೇತಿ ಶುಲ್ಕ, ವಸತಿ ಹಾಗೂ ಇತರ ವೆಚ್ಚಗಳಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದರು. ಈ ಸಮಸ್ಯೆಗೆ ಪರಿಹಾರವಾಗಿ ಜಿಲ್ಲೆಯಲ್ಲಿಯೇ ಉಚಿತ ಹಾಗೂ ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಕಳೆದ ವರ್ಷದ “ಸಂಕಲ್ಪ-1” ಯೋಜನೆಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆತಿದ್ದು, 1,541 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 300 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ತರಬೇತಿ ಪಡೆದ ಹಲವರು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದೇ ಯಶಸ್ಸಿನ ಹಿನ್ನೆಲೆಯಲ್ಲೇ ಸಂಕಲ್ಪ-2 ಯೋಜನೆಯನ್ನು ಮತ್ತಷ್ಟು ವಿಸ್ತ್ರತವಾಗಿ ಆರಂಭಿಸಲಾಗಿದೆ ಎಂದು ತಿಳಿಸಿದರು.

                                                              ಆಸಕ್ತರು ಈ ಕ್ಯೂರ್ ಕೋಡ್ ಬಳಸಬಹುದು

ಪ್ರಸ್ತುತ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 72 ಸಾವಿರಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, 300ಕ್ಕೂ ಹೆಚ್ಚು KAS ಹುದ್ದೆಗಳು ಸೇರಿದಂತೆ ಹಲವು ಉದ್ಯೋಗಾವಕಾಶಗಳು ಲಭ್ಯವಿವೆ. ಜಿಲ್ಲೆಯ ಯುವಕರು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆಯಾಗಬೇಕು ಎಂಬುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಸಂಕಲ್ಪ-2 ಯೋಜನೆಯಡಿ ಉಚಿತ ತರಬೇತಿ, ಅನುಭವಿ ಬೋಧಕರಿಂದ ಮಾರ್ಗದರ್ಶನ, ಸುಸಜ್ಜಿತ ತರಗತಿಗಳು, ಸ್ಪಡಿ ಹಾಲ್, ಗ್ರಂಥಾಲಯ, ಓದಲು ಅನುಕೂಲಕರ ವಾತಾವರಣ, ಶುದ್ಧ ಕುಡಿಯುವ ನೀರು ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸೂಕ್ತ ದರದಲ್ಲಿ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದು ಕೇವಲ ಕೋಚಿಂಗ್ ಕೇಂದ್ರವಲ್ಲ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಮಗ್ರ ಶಿಕ್ಷಣ ಕೇಂದ್ರವಾಗಿದೆ ಎಂದು ಹೇಳಿದರು.

UPSC, KPSC, KEA ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಈ ಯೋಜನೆಯ ಪ್ರವೇಶ ಪರೀಕ್ಷೆಯು 2026ರ ಆಗಸ್ಟ್ 3ರಂದು ದಾವಣಗೆರೆಯ BIET ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಮುತ್ಸದ್ದಿ ದಿ. ಡಾ. ಶಾಮನೂರು ಶಿವಶಂಕರಪ್ಪ ಅವರ ದೂರದೃಷ್ಟಿಯ ಆಶಯವನ್ನು ಸ್ಮರಿಸಿದ ಅವರು, ಸಂಕಲ್ಪ-2 ಯೋಜನೆಯನ್ನು ಯಶಸ್ವಿಯಾಗಿ ರೂಪಿಸಿ ಜಾರಿಗೊಳಿಸಿರುವ ಎಸ್.ಎಸ್. ಕೇರ್ ಟ್ರಸ್ಟ್, ದಾವಣಗೆರೆ ವಿಶ್ವವಿದ್ಯಾನಿಲಯ, IAS ಬಾಬಾ ಹಾಗೂ ಟೀಮ್ ಸಂಕಲ್ಪದ ಎಲ್ಲ ಸದಸ್ಯರ ಸೇವೆಯನ್ನು ಅಭಿನಂದಿಸಿದರು.

ಕಾರ್ಗಿಲ್ ವಿಜಯ ದಿವಸದ ಅಂಗವಾಗಿ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಳೆಸಿರಿಗೆರೆ ಗ್ರಾಮದ ನಿವೃತ್ತ ಕರ್ನಲ್ ಎಂ. ಬಿ. ರವೀಂದ್ರನಾಥ್ ಅವರು ರಚಿಸಿರುವ ಇಂಗ್ಲಿಷ್ ಕೃತಿಯ ಕನ್ನಡ ಅನುವಾದವಾದ “ಕಾರ್ಗಿಲ್ ಯುದ್ಧ: ನಿರ್ಣಾಯಕ ತಿರುವು” ಪುಸ್ತಕವನ್ನು ನನ್ನ ಸಂಸದರ ವೇತನದಿಂದ ಖರೀದಿಸಿದ್ದೇನೆ.

ಈ ಕೃತಿಯನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಕಾಲೇಜುಗಳ ಗ್ರಂಥಾಲಯಗಳಿಗೆ ವಿತರಿಸಲಾಗುವುದು. ಈ ಪುಸ್ತಕಗಳ ಖರೀದಿಯಿಂದ ಲಭಿಸುವ ಸಂಪೂರ್ಣ ಮೊತ್ತ ಸೈನಿಕರ ಕಲ್ಯಾಣ ನಿಧಿಗೆ ಸೇರುವುದರಿಂದ, ಇದು ನಮ್ಮ ವೀರ ಯೋಧರಿಗೆ ಸಲ್ಲಿಸುವ ಗೌರವದ ನಮನವಾಗಿದೆ.

– ಪ್ರಭಾ ಮಲ್ಲಿಕಾರ್ಜುನ್, ಸಂಸದೆ

ಈ ಪುಸ್ತಕದ ಮೂಲಕ ನಮ್ಮ ವಿದ್ಯಾರ್ಥಿಗಳು ಕಾರ್ಗಿಲ್ ವಿಜಯಗಾಥೆಯನ್ನು ಅರಿತು, ದೇಶಭಕ್ತಿ, ತ್ಯಾಗ, ಶೌರ್ಯ ಹಾಗೂ ರಾಷ್ಟ್ರಸೇವೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ದೊರೆಯಲಿದೆ ಎಂಬ ವಿಶ್ವಾಸ ನನ್ನದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *