ಕೆ.ಆರ್.ಪೇಟೆ (ಮಂಡ್ಯ): ಇಂದಿನ ರಾಜಕೀಯ ಕ್ಷೇತ್ರ ಸಾಕಷ್ಟು ಕಲುಷಿತಗೊಂಡಿರುವುದರಿಂದ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ್ದ ಖಾಸಗಿ ಸಮಾರಂಭವೊಂದರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವರುಣ ಕ್ಷೇತ್ರದ ಜನತೆ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದರೂ, ಇನ್ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು. “ಈ ಹಿಂದೆ ನಾವು ಚುನಾವಣೆಗೆ ನಿಂತಾಗ ಕ್ಷೇತ್ರದ ಜನರೇ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಾವೇ ಜನರಿಗೆ ದುಡ್ಡುಕೊಡಬೇಕಾದ ಕಾಲ ಬಂದಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲವಿಲ್ಲದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ಸುದೀರ್ಘ ರಾಜಕೀಯ ಪಯಣವನ್ನು ಸ್ಮರಿಸಿದ ಅವರು, “ಈಗ ನನಗೆ 79 ವರ್ಷ. ಸರ್ಕಾರದ ಅವಧಿ ಮುಗಿಯುವಷ್ಟರಲ್ಲಿ ನನಗೆ 81-82 ವರ್ಷವಾಗುತ್ತದೆ. ಆಗ ಈಗಿನಂತೆ ಆರೋಗ್ಯವೂ ಸದೃಢವಾಗಿರಲು ಸಾಧ್ಯವಿಲ್ಲ, ಉತ್ಸಾಹದಿಂದ ಕೆಲಸ ಮಾಡಲು ಆಗುವುದಿಲ್ಲ. 2028ರ ವೇಳೆಗೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳಲಿವೆ. 1978ರಲ್ಲಿ ತಾಲೂಕು ಮಂಡಳಿ ಸದಸ್ಯನಾಗಿ ರಾಜಕೀಯ ಆರಂಭಿಸಿದ್ದ ನಾನು ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಆದರೆ ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದಿಲ್ಲ, ಆತ್ಮಸಾಕ್ಷಿಗೆ ದ್ರೋಹ ಬಗೆದಿಲ್ಲ ಎನ್ನುವ ಸಂತೃಪ್ತಿ ನನಗಿದೆ” ಎಂದರು.
ಚುನಾವಣಾ ರಾಜಕೀಯದಿಂದ ದೂರವಿದ್ದರೂ ಸಕ್ರಿಯ ರಾಜಕಾರಣದಲ್ಲಿದ್ದು ಜನರ ಕಷ್ಟ-ಸುಖಗಳಿಗೆ ಧ್ವನಿಯಾಗಿ ನಿಲ್ಲುವುದಾಗಿ ಅವರು ಸ್ಪಷ್ಟಪಡಿಸಿದರು. “ಐದು ದಶಕಗಳ ಕಾಲ ರಾಜ್ಯದ ಜನತೆ ನನ್ನನ್ನು ತಮ್ಮಲ್ಲೊಬ್ಬ ಎಂಬಂತೆ ಪ್ರೀತಿಯಿಂದ ಸಲಹಿದ್ದಾರೆ. ಈ ಋಣಭಾರ ತೀರಿಸಲು ನನ್ನ ಮುಂದಿನ ಜೀವನ ಸಂಪೂರ್ಣವಾಗಿ ಜನಸೇವೆಗೆ ಮುಡಿಪಾಗಿರುತ್ತದೆ” ಎಂದು ಅವರು ನುಡಿದರು.
- 2028 ಕರ್ನಾಟಕ ಚುನಾವಣೆ
- Former CM Siddaramaiah
- Karnataka Political News
- Siddaramaiah
- Siddaramaiah 2028 elections
- Siddaramaiah 50 years in politics
- Siddaramaiah KR Pete speech
- Siddaramaiah political retirement
- Varuna constituency
- ಕರ್ನಾಟಕ ರಾಜಕೀಯ ಸುದ್ದಿ
- ಕೆಆರ್ ಪೇಟೆ ಸುದ್ದಿ
- ಮಾಜಿ ಸಿಎಂ ಸಿದ್ದರಾಮಯ್ಯ
- ವರುಣ ಕ್ಷೇತ್ರ
- ಸಿದ್ದರಾಮಯ್ಯ
- ಸಿದ್ದರಾಮಯ್ಯ 50 ವರ್ಷ ರಾಜಕಾರಣ
- ಸಿದ್ದರಾಮಯ್ಯ ಚುನಾವಣಾ ನಿವೃತ್ತಿ
- ಸಿದ್ದರಾಮಯ್ಯ ಭಾಷಣ ಕೆಆರ್ ಪೇಟೆ





Leave a comment