SUDDIKSHANA KANNADA NEWS/ DAVANAGERE/ DATE:16-11-2024
ದಾವಣಗೆರೆ: ಕರ್ನಾಟಕದಲ್ಲಿ ನಿಜವಾಗಿಯೂ ಕಾನೂನುಬದ್ದ ಸರ್ಕಾರ ಇದೆಯೇ ಇಲ್ಲವೇ? ತಾಲಿಬಾನ್ ಆಡಳಿತ ನಡೆಯುತ್ತಿದೆಯೇ? ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಮೂಲಕ ಇನ್ನು ಮುಂದೆ ರೈತರಿಗೆ ಯಾವುದೇ ರೀತಿಯ ನೋಟಿಸ್ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಮೂವರು ಸಚಿವರು ಹೇಳಿದ ಮಾತಿಗೆ ಕವಡೆ ಕಾಸಿನ ಕಿಮ್ಮಿತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಅತ್ಯಂತ ಖಂಡನೀಯ. ತನ್ನ ಓಲೈಕೆ ರಾಜಕಾರಣಕ್ಕೆ ರೈತರನ್ನು ಬಲಿಕೊಡಲು ಮುಂದಾಗಿದೆ ಕಟುಕ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಎಂ. ಪಿ. ರೇಣುಕಾಚಾರ್ಯ ಸಿಟ್ಟು ಹೊರಹಾಕಿದರು.
ಸಿಎಂ ಸಿದ್ದರಾಮಯ್ಯನವರೇ, ರೈತರ ಜಮೀನಿನ ಮೇಲೆ ಕಬ್ಜಾ ಮಾಡುವುದೇ ಅಲ್ಲದೆ, ಅವರ ಮೇಲೆ ಲಾಠಿ ಚಾರ್ಜ್ ಮಾಡಿ, ಟ್ರ್ಯಾಕ್ಟರ್ ವಶಕ್ಕೆ ಪಡೆದು ರೈತರ ವಿರುದ್ಧ ದೂರು ದಾಖಲಿಸಿಕೊಂಡಿದ್ದೀರಲ್ಲ, ನಿಮಗೆ ನಾಡಿನ ರೈತರಿಗಿಂತ ಓಲೈಕೆ ರಾಜಕಾರಣವೇ ಹೆಚ್ಚಾಯ್ತ? ಅನ್ನ ಹಾಕುವ ಕೈಗಳಿಗೆ ಕೋಳ ತೊಡಿಸುವ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಅನ್ನದಾತರ ಶಾಪ ಈ ಸರ್ಕಾರವನ್ನು ಸುಡುವ ದಿನ ದೂರವಿಲ್ಲ ಎಂದು ಹೇಳಿದರು.
ರೈತರ ಮೇಲೆ ಲಾಠಿಚಾರ್ಜ್ ನಡೆಸಿರುವ ಪೊಲೀಸರನ್ನು ಸೇವೆಯಿಂದ ಅಮಾನತುಪಡಿಸಿ ನ್ಯಾಯ ಒದಗಿಸಿಕೊಡಬೇಕು. ಇನ್ನು ಮುಂದೆ ವಕ್ಫ್ ಆಸ್ತಿ ಎಂದು ಯಾರಾದರೂ ರೈತರ ಜಮೀನು ಇಲ್ಲವೇ ಅವರಿಗೆ ಸೇರಿದ ಟ್ರ್ಯಾಕ್ಟರ್ ಮತ್ತಿತರ ಉಪಕರಣಗಳನ್ನು ವಶಪಡಿಸಿಕೊಳ್ಳಲು ಮುಂದಾದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ನೀವೇನೊ ಅಧಿಕಾರದಲ್ಲಿ ಶಾಶ್ವತವಾಗಿ ಇರುವುದಿಲ್ಲ. ಕಾಲಚಕ್ರ ಉರುಳಲೇಬೇಕು. ಉಪಚುನಾವಣೆಯ ಫಲಿತಾಂಶವೇ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಮುನ್ನುಡಿ ಬರೆಯಲಿದೆ ಎಂದು ಭವಿಷ್ಯ ನುಡಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಜು, ಧರ್ಮರಾಜ್, ಪ್ರವೀಣ್ ಜಾಧವ್, ಜಯಣ್ಣ ಮತ್ತಿತರರು ಹಾಜರಿದ್ದರು.