SUDDIKSHANA KANNADA NEWS/ DAVANAGERE/ DATE:21-11-2024
ದಾವಣಗೆರೆ: ಕಸ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಕಸದ ಗಾಡಿಗಳು ಬರುತ್ತಿಲ್ಲ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಪೌರಕಾರ್ಮಿಕರ ಕೊರತೆ ಇದೆ. ವಾರ್ಡ್ ಗಳಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಬೀದಿದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಧಿಕಾರಿಗಳಿಗೆ ಮೇಯರ್ ಹೇಳಿದರೂ ಕ್ರಮ ಜರುಗಿಸುತ್ತಿಲ್ಲ.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೆ ಹಳೆಯ ವಿಚಾರಗಳೇ ಹೆಚ್ಚು ಚರ್ಚಿತವಾದವು. ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯ ಆರಂಭದಲ್ಲಿ ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳ ಸಮಸ್ಯೆ ಪ್ರತಿಧ್ವನಿಸಿತು. ಪ್ರತಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಅವರು ಕಳೆದ ಸಭೆಯಲ್ಲಿ ರಸ್ತೆ ಗುಂಡಿ ವಿಚಾರ ಪ್ರಸ್ತಾಪಿಸಲಾಗಿತ್ತು. ಆಗ ರಸ್ತೆಗುಂಡಿ ಮುಚ್ಚಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಸಮರ್ಥನೆ ಮಾಡಿಕೊಂಡಿದ್ದರು. ಮಾಧ್ಯಮಗಳಲ್ಲಿ ಗುಂಡಿಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ವರದಿಯಾಗಿದೆ ಎಂದು ಹೇಳಿದರು.
ಇದಕ್ಕೆ ಕಾಂಗ್ರೆಸ್ ಸದಸ್ಯ ನಾಗರಾಜ್ ಹಾಗೂ ಇತರ ಕಾಂಗ್ರೆಸ್ ಸದಸ್ಯರು ಮಾತನಾಡಿ, ಈ ಬಾರಿ ಮಳೆ ಜಾಸ್ತಿ ಆಗಿದ್ದರಿಂದ ಗುಂಡಿ ಹೆಚ್ಚಾಗಿ ಬಿದ್ದಿವೆ ಎಂದರು. ಪಾಲಿಕೆ ಅಭಿಯಂತರರು ಪ್ರತಿಕ್ರಿಯಿಸಿ, ಗುಂಡಿ ರಸ್ತೆಗಳಲ್ಲಿ ಅನೇಕ ರಸ್ತೆಗಳು
ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಿಸಿದ್ದು ಅವರಿಗೆ ಲಿಖಿತವಾಗಿ ತಿಳಿಸಲಾಗಿದೆ ಎಂದರು.
ಮೇಯರ್ ಕೆ. ಚಮನ್ ಸಾಬ್ ಮಾತನಾಡಿ, ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾಗ ಮಳೆ ಬಂದು ಕೆಲಸ ಅರ್ಧಕ್ಕೆ ನಿಂತಿದೆ. ಈಗ ಗುಂಡಿ ಮುಚ್ಚುವ ಕಾರ್ಯ ಮುಂದುವರಿಸಲಾಗುವುದು ಎನ್ನುವ ಮೂಲಕ ಚರ್ಚೆಗೆ ತೆರೆ ಎಳೆದರು.
ಬೀದಿ ನಾಯಿಗಳ ಹಾವಳಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವ ಕುರಿತಂತೆ ಅಧಿಕಾರಿಗಳಿಗೆ ಸದಸ್ಯ ಎ.ನಾಗರಾಜ್ ಸೂಚನೆ ನೀಡಿದರು.ಈ ವೇಳೆ ಮೇಯರ್ ಕೆ. ಚಮನ್ ಸಾಬ್ ಮಾತನಾಡಿ ಬೀದಿ ನಾಯಿ ಸೇರಿದಂತೆ ಹಂದಿ ಮಾಲೀಕರು ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಕಾಂಗ್ರೆಸ್ ಸದಸ್ಯ ವಿನಾಯಕ್ ಪೈಲ್ವಾನ್ ಮಾತನಾಡಿ, ಏನ್ ಆಡಳಿತವೋ ಏನೋ. ನಮಗೆ ನಾಚಿಕೆಯಾಗಬೇಕು. ಮೇಯರ್, ಕಾರ್ಪೊರೇಟರ್ ಗಳು ಹೇಳಿದ ಸಮಸ್ಯೆಗಳನ್ನೇ ಅಧಿಕಾರಿಗಳು ಪರಿಹರಿಸುತ್ತಿಲ್ಲ. ಮೇಯರ್ ಹೋಗಿ ಬಂದು ಸೂಚನೆ
ನೀಡಿದರೂ ಯಾವುದೇ ಕೆಲಸಗಳು ಆಗುತ್ತಿಲ್ಲ. ನೀವು ಹೋಗುವುದಕ್ಕಿಂತ ಸುಮ್ಮನೆ ಇರಿ. ಮರ್ಯಾದೆಯಾದರೂ ಉಳಿಯುತ್ತದೆ. ನಾನು ಮೇಯರ್ ಆಗಿದ್ದಾಗ 45 ವಾರ್ಡ್ ಗಳಿಗೂ ಭೇಟಿ ನೀಡಿದ್ದೇನೆ. ಆದಷ್ಟು ಕೆಲಸ ಮಾಡಿದ್ದೇವೆ, ಕೆಲವೊಮ್ಮೆ ಕೆಲಸವಾಗಿಲ್ಲ. ಅಧಿಕಾರದಲ್ಲಿ ಇದ್ದೇವೆ ಎಂಬುದೇ ನಾಚಿಕೆಯೇ ವಿಚಾರ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಚಮನ್ ಸಾಬ್, ನಾನು ಜನರ ಸಮಸ್ಯೆಗೆ ಸ್ಪಂದಿಸುವ, ದಪ್ಪ ಚರ್ಮದ ಅಧಿಕಾರಿಗಳಿಗೆ ಪಾಲಿಕೆ ಸದಸ್ಯರು, ಜನರು ಯಾವ ರೀತಿಯ ಕಷ್ಟ ಅನುಭವಿಸುತ್ತಿದ್ದಾರೆ ಎಂಬುದರ ದರ್ಶನ ಮಾಡಿಸಲು ಹೋಗುತ್ತಿದ್ದೇನೆ. ಆದಷ್ಟು ಸಮಸ್ಯೆ ಪರಿಹರಿಸಲು ಕ್ರಮ ಜರುಗಿಸುತ್ತೇವೆ ಎಂದರು. 45 ವಾರ್ಡ್ ಗಳಲ್ಲಿಯೂ ಕಸ, ತ್ಯಾಜ್ಯ ಸಂಗ್ರಹ, ಬೀದಿ ನಾಯಿಗಳ ಹಾವಳಿ, ಬೀದಿ ದೀಪಗಳ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳು ಇವೆ. ತುರ್ತು ಮೂಲಭೂತ ಕಾಮಗಾರಿ ಕೈಗೆತ್ತಿಕೊಳ್ಳಲು ಟೆಂಡರ್ ಕರೆಯಲು ಹಣ ಮೀಸಲಿಡಲು ತೀರ್ಮಾನಿಸೋಣ. ಎಷ್ಟು ಸಾಧ್ಯವಾಗುತ್ತೋ ಅಷ್ಟು ಕಾಮಗಾರಿ ನಡೆಸೋಣ ಎಂದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಪಾಲಿಕೆಯಲ್ಲಿ 840 ಪೌರಕಾರ್ಮಿಕರ ಅವಶ್ಯಕತೆ ಇದೆ. ಆದ್ರೆ, ಇರುವುದು ಕೇವಲ 419 ಪೌರಕಾರ್ಮಿಕರು ಮಾತ್ರ. ಸರ್ಕಾರಕ್ಕೂ ಪೌರ ಕಾರ್ಮಿಕರ ನೇಮಕಕ್ಕೆ ಅನುಮತಿ ಕೇಳಲಾಗಿದೆ. ಸರ್ಕಾರವು ಸೂಕ್ತವಾಗಿ ಸ್ಪಂದಿಸುತ್ತದೆ ಎಂಬ ವಿಶ್ವಾಸ ಇದೆ. ಪೌರಕಾರ್ಮಿಕರ ಕೊರತೆ ಇರುವ ಕಾರಣಕ್ಕೆ ಸಾಧ್ಯವಾಗುತ್ತಿಲ್ಲ. ಶೇಕಡಾ 10ರಿಂದ 145ರಷ್ಟು ಪೌರಕಾರ್ಮಿಕರು ಒಂದಲ್ಲಾ ಒಂದು ಕಾರಣದಿಂದ ಕೆಲಸಕ್ಕೆ ಬರುತ್ತಿಲ್ಲ. ಅನಾರೋಗ್ಯದ ಸಮಸ್ಯೆ, ಕೆಲವರಿಗೆ ಕೆಲಸ ಮಾಡುವ ಶಕ್ತಿಯೇ ಇಲ್ಲ. ಆಧಾರ್ ಕಾರ್ಡ್, ಜನ್ಮದಿನಾಂಕವು ಕೈಬರಹದಲ್ಲಿದ್ದು, ಖಾಯಂ ಆಗುವಾಗ ಆ ದಾಖಲಾತಿ ನೀಡಿದ್ದಾರೆ. ಹಾಗಾಗಿ ಸಮಸ್ಯೆಯಾಗಿದೆ. ಇನ್ನು ಕೆಲಸಕ್ಕೆ ಬಾರದವರಿಗೆ ನೊಟೀಸ್ ಸಹ ನೀಡಲಾಗುತ್ತದೆ ಎಂದು ತಿಳಿಸಿದರು.
ಇನ್ನುಳಿದಂತೆ ಇ-ಖಾತಾ, ಇ-ಆಸ್ತಿ ಸೇರಿದಂತೆ ಬೇರೆ ಬೇರೆ ವಿಚಾರಗಳ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಉಪಮೇಯರ್ ಸೋಗಿ ಶಾಂತಕುಮಾರ್, ಆಡಳಿತ ಪಕ್ಷದ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಪಾಮೇನಹಳ್ಳಿ ನಾಗರಾಜ್, ಅಬ್ದುಲ್ ಲತೀಫ್, ಸವಿತಾ ಹುಲ್ಮುಮನಿ ಗಣೇಶ್, ಶಿವಾನಂದ್, ಕೆ. ಎಂ. ವೀರೇಶ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.