SUDDIKSHANA KANNADA NEWS/ DAVANAGERE/ DATE:21-11-2024
ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಶ್ವಾಸಕೋಶ ಆರೋಗ್ಯದ ಕ್ಷೇತ್ರದ ಆಧುನಿಕ ವೈದ್ಯಕೀಯತೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಮಕ್ಕಳ ಸಾವಿಗೂ ಕಾರಣವಾಗುತ್ತಿದೆ. ಈ ಕಾರಣಕ್ಕಾಗಿ ಎಸ್. ಎಸ್. ಕನ್ವೆಷನ್ ಹಾಲ್ ನಲ್ಲಿ ನ.22ರಿಂದ 24ರವರೆಗೆ ಮಕ್ಕಳ ಶ್ವಾಸಕೋಶ ತಜ್ಞರ ಜಾಗತಿಕ ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ದೇಶ, ವಿದೇಶಗಳಿಂದ ಸುಮಾರು 120 ತರಬೇತುದಾರರು ಪಾಲ್ಗೊಳ್ಳಲಿದ್ದಾರೆ ಎಂದು ಸಮ್ಮೇಳನದ ಅಧ್ಯಕ್ಷ ಡಾ. ಎನ್. ಕೆ. ಕಾಳಪ್ಪನವರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಸ್ಪಿಕಾನ್ -2024 ರಾಷ್ಟ್ರೀಯ ಶ್ವಾಸಕೋಶದ ಅಧ್ಯಾಯದ 36ನೇ ವಾರ್ಷಿಕ ಸಮ್ಮೇಳನದಲ್ಲಿ, ಮಕ್ಕಳ ಶ್ವಾಸಕೋಶ ಆರೈಕೆಯಲ್ಲಿ ಇತ್ತೀಚಿನ ಪ್ರಗತಿ ಮತ್ತು ಸಾಧನೆಗಳನ್ನು ಚರ್ಚಿಸಲು ಜಾಗತಿಕ ತಜ್ಞರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಶ್ವಾಸಕೋಶ ಅಧ್ಯಾಯ ದಾವಣಗೆರೆ ನಗರ ಶಾಖೆ, ದಾವಣಗೆರೆ ಜಿಲ್ಲಾ ಶಾಖೆ, ಎಸ್. ಎಸ್. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಜೆ. ಜೆ. ಎಂ. ವೈದ್ಯಕೀಯ ಕಾಲೇಜು, ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ದಾವಣಗೆರೆ ಸಂಯುಕ್ತಾಶ್ರಯದಲ್ಲಿ ಈ ಸಮ್ಮೇಳನ ಜರುಗಲಿದೆ ಎಂದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಮಕ್ಕಳ ತಜ್ಞ ಡಾ. ಟಿ.ಎಸ್. ಸುರೇಶ್ ಬಾಬು ಅವರನ್ನು ಗೌರವಿಸಲಾಗುವುದು. ಜೀವಮಾನ ಸಾಧನೆಗಾಗಿ ಡಾ. ವರಿಂದರ್ ಸಿಂಗ್, ಮಕ್ಕಳ ಶ್ವಾಸಕೋಶದ ಕ್ಷೇತ್ರದಲ್ಲಿ ಮಾಡಿರುವ ಅಪಾರ ಕೊಡುಗೆ ಪರಿಗಣಿಸಿ ಜೀವನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ದೇಶದೆಲ್ಲೆಡೆಯಿಂದ 500 ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 120 ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಒಟ್ಟಾರೆ 8 ಕಾರ್ಯಾಗಾರಗಳು ನಡೆಯಲಿದೆ ಎಂದು ಹೇಳಿದರು.
ಕಾರ್ಯಗಾರಗಳು, ಪ್ಯಾನಲ್ ಚರ್ಚೆಗಳ ಸರಣಿ, ಸಂಶೋಧಕರಿಗೆ ತಮ್ಮ ನವೀನತೆಯ ಆವಿಷ್ಕಾರಗಳನ್ನು ಪ್ರಸ್ತುತಪಡಿಸಲು ವೇದಿಕೆ ಕಲ್ಪಿಸಿಕೊಡಲಾಗುವುದು. ಇದರಲ್ಲಿ ಅಸ್ತಮಾ ಸಂಶೋಧನೆ ಮತ್ತು ಚಿಕಿತ್ಸಾ ತಂತ್ರಗಳನ್ನು ಚರ್ಚಿಸಲು ಎಲ್ಲಾ ಪ್ರಮುಖ ತಜ್ಞರನ್ನು ಒಟ್ಟುಗೂಡಿಸಲಾಗುತ್ತದೆ. ಭಾಗಿಗಳ ಪ್ರಾಯೋಗಿಕ ಕೌಶಲ್ಯಗಳನ್ನು ಹೆಚ್ಚಿಸಲು ಪ್ರಮುಖವಾದ ಕಾರ್ಯಗಾರಗಳ ಸರಣಿಯನ್ನು ನಡೆಸಲಾಗುವುದು. ಅವುಗಳಲ್ಲಿ ಪ್ರಮುಖವಾಗಿ ಅಲರ್ಜಿ, ಅಸ್ತಮಾ ತರಬೇತಿ ಮಾದರಿ, ಬ್ರಾಂಕೋಸ್ಕೋಪಿ, ಶ್ವಾಸಕೋಶದ ಕಾಯಿಲೆಗಳಿಗೆ ಸಂಬಂಧಿಸಿದ ಪರೀಕ್ಷೆಗಳು, ನವೀಕರಿಸಿದ ಅಸ್ತಮಾ ತರಬೇತಿ ಮಾದರಿ, ನನ್ನ ಮನೆ, ನನ್ನ ಮಗು, ಸಂಶೋಧನಾ ವಿಧಾನಗಳ ಬಗ್ಗೆ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದು ವಿವರಿಸಿದರು.
ಭಾಗವಹಿಸುವವರು ಹೆಚ್ಚಿನ ರೀತಿಯಲ್ಲಿ ಪ್ರಾಯೋಗಿ ಕೌಶಲ್ಯವನ್ನು ಕಲಿತು ಮೇಲಿನ ಶ್ವಾಸಕೋಶದ ಸ್ಥಿತಿಗಳನ್ನು ನಿರ್ವಹಿಸುವಲ್ಲಿ, ನಿರ್ಣಾಯಕ ಹಂತ ತಲುಪುವಲ್ಲಿ ಇತ್ತೀಚಿನ ಸಂಶೋಧನಾ ವಿಧಾನಗಳು ಅಳವಡಿಸಿಕೊಂಡು ಚಿಕಿತ್ಸಾ ತೀರ್ಮಾನವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ ಎಂದು ಮಾಹಿತಿ ನೀಡಿದರು.
ಶ್ವಾಸಕೋಶ ತುರ್ತುಪರಿಸ್ಥಿತಿಗಳ ಸಿಂಫೋಸಿಯಾ, ಶ್ವಾಸಕೋಶದ ತೊಂದರೆಗಳು, ಉಬ್ಬಸ, ಉಸಿರಾಟದ ಸಮಸ್ಯೆಗಳು, ನ್ಯುಮೋನಿಯಾ, ಕ್ಷಯರೋಗ, ಶ್ವಾಸಕೋಶ ರೋಗಗಳು, ಜಿನಾ ಮಾರ್ಗಸೂಚಿಗಳು ಶ್ವಾಸಕೋಶದ ಇಮೇಜಿಂಗ್ ಮತ್ತು ಇತ್ತೀಚಿನ ನವೀಕರಣಗಳು. ಕ್ಲಿನಿಕಲ್ ಪ್ರಾಕ್ಟಿಸ್ ಕಛೇರಿ ಅಭ್ಯಾಸಗಳು, ಅಲರ್ಜಿ, ಇಮ್ಯುನೋ ಚಿಕಿತ್ಸೆಗಳು ಹಾಗೂ ಹೊಸ ಲಸಿಕೆಗಳ ಬಗ್ಗೆ ವಿಚಾರ ವಿನಿಮಯಗಳ ಕುರಿತಂತೆ ಚರ್ಚೆಗಳನ್ನು ನಡೆಸಲಾಗುವುದು. ಮಕ್ಕಳ ಶ್ವಾಸಕೋಶ ಆರೈಕೆಯನ್ನು
ಮುಂದುವರಿಸಲು ಮೀಸಲಾಗಿರುವ ಪ್ರಸಿದ್ಧ ಸಂಸ್ಥೆಗಳ ಒಕ್ಕೂಟವು ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ನ. 22ರ ಸಂಜೆ 4.30ಕ್ಕೆ ನಡೆಯುವ ಮೊದಲ ದಿನದ ಕಾರ್ಯಕ್ರಮ ಉದ್ಘಾಟಿಸುವರು. ನ. 23ರಂದು ನಡೆಯುವ ಕಾರ್ಯಕ್ರಮಕ್ಕೆ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ ಚಾಲನೆ ನೀಡುವರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಈ ಸಮ್ಮೇಳನದ ರಾಷ್ಟ್ರೀಯ ಐ.ಎ.ಪಿ ಶ್ವಾಸಕೋಶದ ಅಧ್ಯಾಯದ ಅಧ್ಯಕ್ಷ ಡಾ. ಕಾಳಪ್ಪನವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಎಸ್. ಎಸ್. ಆಸ್ಪತ್ರೆ ಪ್ರಾಂಶುಪಾಲ ಡಾ.ಬಿ.ಎಸ್. ಪ್ರಸಾದ್, ಜೆ. ಜೆ. ಎಂ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ. ಶುಕ್ಲಾ ಶೆಟ್ಟಿ, ಕಾರ್ಯದರ್ಶಿ ಡಾ. ಸಂಜೀವ ರಾವತ್ ಭಾಗವಹಿಸುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಡಾ.ಮೂಗನಗೌಡ ಪಾಟೀಲ್, ಡಾ. ಬಿ. ಎಸ್ ಪ್ರಸಾದ್, ಡಾ. ಜಿ. ಗುರುಪ್ರಸಾದ್, ಡಾ. ಜಿ. ಎಸ್. ಲತಾ, ಡಾ. ಮಧು ಪೂಜಾರ್, ಡಾ.ವಿನಯ್ ಕುಮಾರ್ ಮತ್ತಿತರರು ಹಾಜರಿದ್ದರು.