SUDDIKSHANA KANNADA NEWS/ DAVANAGERE/ DATE:16-11-2024
ದಾವಣಗೆರೆ: ವಕ್ಫ್ ಆಸ್ತಿ ವಿರುದ್ಧ ಪಾದಯಾತ್ರೆ ಹೊರಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅವರ ಹಿಂಬಾಲಕರನ್ನು ತಡೆಯಬೇಕು. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದು, ಮಧ್ಯ ಪ್ರವೇಶಿಸಿ ಯತ್ನಾಳ್ ಅವರ ಪಾದಯಾತ್ರೆ ನಿಲ್ಲಿಸಬೇಕು. ಇಲ್ಲದಿದ್ದರೆ ನಾವೂ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರರ ಬಳಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸಭೆ ನಡೆಸಿ, ವರಿಷ್ಠರಿಗೆ ನಾವೂ ದೂರು ನೀಡುತ್ತೇವೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾದರೂ ಕೇಂದ್ರ ಸರ್ಕಾರಕ್ಕೆ ಅವರು ಮುಖ್ಯಸ್ಥರು. ಪಕ್ಷದ ವಿಚಾರಕ್ಕೆ ಬಂದರೆ ಜೆ. ಪಿ. ನಡ್ಡಾ ಅವರೇ ಸುಪ್ರೀಂ. ದೇಶದಲ್ಲಿ ರಾಷ್ಟ್ರಾಧ್ಯಕ್ಷರು ಹಾಗೂ
ರಾಜ್ಯದಲ್ಲಿ ರಾಜ್ಯಾಧ್ಯಕ್ಷರ ನಿರ್ದೇಶನದ ಮೇರೆಗೆ ನಾವೆಲ್ಲರೂ ಕೆಲಸ ಮಾಡಬೇಕು. ಜಿಲ್ಲೆಯ ವಿಚಾರಕ್ಕೆ ಬಂದರೆ ಜಿಲ್ಲಾಧ್ಯಕ್ಷರ ನಿರ್ಣಯವೇ ಅಂತಿಮ. ನಾವು ವಿರೋಧಿಸಲು ಹೋಗಬಾರದು. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಸುಮ್ಮನಿರಲು ಹೇಳಿದ್ದಾರೆ. ಹಾಗಾಗಿ ಮಾತನಾಡುತ್ತಿಲ್ಲ. ನಮಗೂ ಮಾತನಾಡಲು ಬರುತ್ತದೆ. ಸುಮ್ಮನೆ ಕೂರುವವರಲ್ಲ ಎಂದು ಹೇಳಿದರು.
ಬಿ. ವೈ. ವಿಜಯೇಂದ್ರರ ರಾಜಕೀಯ ಏಳಿಗೆ ಸಹಿಸದ ಕೆಲವು ಪಕ್ಷ ವಿರೋಧಿಗಳು ಅಧಿಕಾರ ಸೇರಿದಂತೆ ಎಲ್ಲವನ್ನೂ ಅನುಭವಿಸಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ನಡೆಸಲು ಮುಂದಾಗಿರುವ ಜನಜಾಗೃತಿ ಎಂಬ ಹಗಲುವೇಷದ ನಾಟಕದಲ್ಲಿ
ಪಕ್ಷದ ಹಿತಕ್ಕಿಂತ ಸ್ವಹಿತಸಕ್ತಿಯೇ ಮುಖ್ಯವಾದಂತೆ ಕಾಣುತ್ತದೆ. ಬಿಜೆಪಿ ನಿಯಮದಂತೆ ರಾಜ್ಯಧ್ಯಕ್ಷರು ,ಕೇಂದ್ರ ಸಚಿವರುವಿಧಾನಮಂಡಲದ ಉಭಯಸದನಗಳ ಪ್ರತಿಪಕ್ಷದ ನಾಯಕರ ನೇತೃತ್ವದಲ್ಲಿ ನಡೆಯುವ ಯಾವುದೇ ಹೋರಾಟಕ್ಕೆ ಕಾರ್ಯಕರ್ತರ ಸದಾ ಬೆಂಬಲವಿರುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡ ಬಂದಿರುವ ಸಂಪ್ರದಾಯ. ಪಕ್ಷದ ಚಿಹ್ನೆ, ರಾಜ್ಯಾಧ್ಯಕ್ಷರು, ಪ್ರಮುಖರನ್ನು ಹೊರಗಿಟ್ಟು, ತಾನೇ ಮಹಾನಾಯಕ ಎಂಬಂತೆ ಬಿಂಬಿಸಿಕೊಂಡು, ಯಾರ ಅನುಮತಿಯನ್ನೂ ಪಡೆಯದೇ ನಡೆಸುವ ಅಭಿಯಾನಕ್ಕೆ ಕಾರ್ಯಕರ್ತರು ಕೈ ಜೋಡಿಸುವುದಿಲ್ಲ ಎಂಬುದನ್ನು ಸ್ವಯಂಘೋಷಿತ ಹುಲಿಗಳು ಎನಿಸಿಕೊಂಡವರು ಅರ್ಥಮಾಡಿಕೊಳ್ಳಬೇಕು ಎಂದು ಯತ್ನಾಳ್ ವಿರುದ್ಧ ಗುಟುರು ಹಾಕಿದರು.
ಈಗಾಗಲೇ ಬಿಜೆಪಿ ರಾಜ್ಯಧ್ಯಕ್ಷರಾದ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ವಾಲ್ಮೀಕಿ, ಮುಡಾ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ನೀತಿಗಳ ವಿರುದ್ಧ ನಡೆಸಿದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡುಯ್ಯಲಾಗಿದೆ. ಮುಡಾ ಪ್ರಕರಣದಲ್ಲಿ ಬೆಂಗಳೂರಿನಿಂದ- ಮೈಸೂರಿನವರೆಗೆ ಬಿಜೆಪಿ- ಜೆಡಿಎಸ್ ನಡೆಸಿದ ಜಂಟಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳದೆ ದೂರ ಉಳಿದು, ಸರ್ಕಾರದ ಜೊತೆ ಕೈ ಜೋಡಿಸಿದವರೇ ಈಗ ಜನಜಾಗೃತಿ ಅಭಿಯಾನದ ಮೂಲಕ ಅಬ್ಬರಿಸಲು ಹೊರಟಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತದೆ. ಕೆಲವರು ತಾವಿನ್ನು ರಾಜಕೀಯದಲ್ಲಿ ಇದ್ದೇವೆ ಎಂಬುದನ್ನು ಬಿಂಬಿಸಿಕೊಳ್ಳಲು ನಡೆಸುತ್ತಿರುವ ಅರ್ಥವಿಲ್ಲದ, ಗೊತ್ತು ,ಗುರಿ ಇಲ್ಲದ ಅಭಿಯಾನದ ಉದ್ದೇಶವಾದರೂ ಏನೆಂಬುದನ್ನು ಮೊದಲು ತಿಳಿಸಲಿ ಎಂದು ಸವಾಲು ಹಾಕಿದರು.
ರಾಜ್ಯಾಧ್ಯಕ್ಷರು ಇಲ್ಲವೇ ಕೇಂದ್ರ ನಾಯಕರ ಒಪ್ಪಿಗೆ ಪಡೆಯದೆ ತಮ್ಮ ಅನುಕೂಲಕ್ಕಾಗಿ ನಡೆಸುತ್ತಿರುವ ಈ ಅಭಿಯಾನದಲ್ಲಿ ನಿಜವಾದ ಬಿಜೆಪಿಯಕಾರ್ಯಕರ್ತರು ಭಾಗಿಯಾಗಬೇಕೇ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ರೇಣುಕಾಚಾರ್ಯ ಕಿಡಿಕಾರಿದರು.