SUDDIKSHANA KANNADA NEWS/ DAVANAGERE/ DATE:18-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗಬೇಕು ಎಂಬ ವಿಚಾರ ಕುರಿತಂತೆ ಚರ್ಚೆ ಮಾಡಲಾಗಿದೆ. ನಾನು ಕೂಡ ಬೆಂಬಲಿಸುತ್ತೇನೆ. ಈ ಕಾರಣಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದೇನೆ ಎಂದು ಮಾಜಿ ಸಚಿವ ಕರುಣಾಕರ ರೆಡ್ಡಿ ಪ್ರತಿಪಾದಿಸಿದರು.
ಮಹಾನಗರ ಪಾಲಿಕೆಯ ಮಾಜಿ ಮೇಯರ್ ಅಜಯ್ ಕುಮಾರ್ ನಿವಾಸದಲ್ಲಿ ನಡೆದ ಭಿನ್ನಮತೀಯರ ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ಸಿದ್ದೇಶ್ವರ ಜೊತೆ ನೀವು ಚೆನ್ನಾಗಿದ್ದೀರಲ್ವಾ ಎಂಬ ಪ್ರಶ್ನೆಗೆ ಹರಪನಹಳ್ಳಿಯಲ್ಲಿ ಎಷ್ಟು ಚೆನ್ನಾಗಿದ್ದೇವೆ ಎಂಬ ಬಗ್ಗೆ ನಿನ್ನೆ ಗೊತ್ತಾಗಿದೆ. ವರ್ತನೆಗೆ ತಕ್ಕಂತೆ ಪ್ರತಿಕ್ರಿಯೆ ಬಂದಿದೆ. ಪೊಲೀಸರನ್ನು ಕರೆಯಿಸಿ ನಿಷ್ಠಾವಂತ ಕಾರ್ಯಕರ್ತರನ್ನು ದೂರವಿಟ್ಟು ಕಾರ್ಯಕ್ರಮ ನಡೆಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಪೊಲೀಸರ ಭದ್ರತೆಯಲ್ಲಿ ಕಾರ್ಯಕ್ರಮ:
ನಾನು 20 ವರ್ಷಕ್ಕೂ ಹೆಚ್ಚು ಅವಧಿಯಿಂದಲೂ ಬಿಜೆಪಿಯಲ್ಲಿದ್ದೇನೆ. ಯಾವತ್ತಿಗೂ ಪೊಲೀಸರನ್ನು ಬಿಜೆಪಿ ಕಚೇರಿಗೆ ಕರೆಯಿಸಿರಲಿಲ್ಲ. 70ರಿಂದ 80 ಪೊಲೀಸ್ ಸಿಬ್ಬಂದಿ ಕರೆಯಿಸಿ ಬಾಗಿಲು ಹಾಕಿಕೊಂಡು ಕಾರ್ಯಕ್ರಮ ನಡೆಸಲಾಗಿದೆ. ನಮ್ಮ ಬೆಂಬಲಿಗರು ಅಂತಾ ಹೇಳಲ್ಲ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ಸಿಗಬೇಕಿತ್ತು. ಆದ್ರೆ, ಸಿಕ್ಕಿಲ್ಲ. ವಿರೋಧ ಪಕ್ಷದಲ್ಲಿ ಕೆಲಸ ಮಾಡಿದವರನ್ನು ಕರೆದುಕೊಂಡು ಬಂದು ಅಧ್ಯಕ್ಷ ಸ್ಥಾನ ನೀಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಕಾರ್ಯಕರ್ತರಿಗೆ ನೋವು:
ನಿಷ್ಠಾವಂತ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಗೆಲುವಿಗೆ ಪ್ರಯತ್ನಿಸಿಲ್ಲ, ರೇಣುಕಾಚಾರ್ಯ ಹಾಗೂ ಮಾಡಾಳ್ ಮಲ್ಲಿಕಾರ್ಜುನ್ ಅವರು ಸಭೆಗೆ ಆಹ್ವಾನಿಸಿದ್ದರು. ನಾನು ಎರಡು ಸಭೆಗೆ ಬರಲು ಆಗಿರಲಿಲ್ಲ. ಆದ್ರೆ, ಈಗ ಬಂದಿದ್ದೇನೆ. ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎಂಬ ದೃಢವಾದ ನಿರ್ಧಾರ ಬದಲಾವಣೆ ಆಗಲೇಬೇಕು ಎಂಬುದು ನಮ್ಮೆಲ್ಲರದ್ದು ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಬಿಜೆಪಿ ಪಕ್ಷ ನನಗೆ ಟಿಕೆಟ್ ನೀಡಿತ್ತು. ಸಂಚರಿಸಿ ಗೆಲುವಿಗೆ ಸಿದ್ದೇಶ್ವರ ಅವರು ಶ್ರಮಿಸಲಿಲ್ಲ. ಅದೇನೂ ಮಾಡಿದ್ದಾರೆ ಎಂಬುದು ಭಗವಂತನಿಗೆ ಹಾಗೂ ಕಾರ್ಯಕರ್ತರಿಗೆ ಗೊತ್ತು. ಅದರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಹರಪನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಇರಲಿಲ್ಲ. ಮುಖಂಡರು, ಕಾರ್ಯಕರ್ತರು, ನಿಷ್ಠಾವಂತರು ನನಗೆ ಕಾರ್ಯಕ್ರಮಕ್ಕೆ ಹೋಗುವುದು ಬೇಡ ಎಂದಿದ್ದರು. ಹಾಗಾಗಿ, ಸಿದ್ದೇಶ್ವರ ಅವರು ಬಂದಿದ್ದ ಕಾರ್ಯಕ್ರಮಕ್ಕೆ ತೆರಳಲಿಲ್ಲ. ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕು ಘಟಕ ರಚನೆ ಮಾಡಿ ಎಂದರೂ ಕೇಳಲಿಲ್ಲ. ಮೊದಲ ಬಾರಿ ಗೊಂದಲದ ಸಭೆ ನಡೆಸುತ್ತಿದ್ದೇವೆ ಎಂದರು.
ಬದಲಾವಣೆ ಆಗ್ಲೇಬೇಕು:
ಹರಪನಹಳ್ಳಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರ ಬದಲಾವಣೆ ಮಾಡಬೇಕು. ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ. ಸಭೆ ಸೇರಿ ಇನ್ನು ಮೂರ್ನಾಲ್ಕು ದಿನಗಳಲ್ಲಿ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.
ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್, ಮಾಜಿ ಶಾಸಕರಾದ ಕರುಣಾಕರ ರೆಡ್ಡಿ, ಗುರುಸಿದ್ದನಗೌಡರು, ಬಸವರಾಜ್ ನಾಯ್ಕ್, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್, ಲೋಕಿಕೆರೆ ನಾಗರಾಜ್ ಸೇರಿದಂತೆ ಇತರೆ ಮುಖಂಡರು ಸಭೆಯಲ್ಲಿ
ಪಾಲ್ಗೊಂಡಿದ್ದರು.