SUDDIKSHANA KANNADA NEWS/ DAVANAGERE/ DATE:15-01-2025
ದಾವಣಗೆರೆ: ಸಚಿವರು ಹಾಗೂ ಕಾಂಗ್ರೆಸ್ ನಡುವಿನ ಜಗಳ ತಾರಕಕ್ಕೇರಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಬದಲಾವಣೆ ಆಗಬೇಕು ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಬಹಿರಂಗವಾಗಿಯೇ ಆಗ್ರಹಿಸಿದ್ದರು. ಇದಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಸಚಿವ ಮಲ್ಲಿಕಾರ್ಜುನ್ ರೋಷಾಗ್ನಿ ಹೊರ ಹಾಕಿದ್ದರು. ಇದು ಬುಸುಗುಡುತ್ತಿದ್ದಂತೆ ಬೇರೆ ಜಿಲ್ಲೆಗಳಲ್ಲಿಯೂ ಇದೇ ಸ್ಥಿತಿ ಇದೆ.
ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಡುವಿನ ಸಂಘರ್ಷವೂ ಜೋರಾಗಿದೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಇದು ಭುಗಿಲೆದ್ದಿದೆ. ಮಾತ್ರವಲ್ಲ, ಡಿಸಿಎಂ ಡಿ. ಕೆ. ಶಿವಕುಮಾರ್ ನಡುವಿನ ಜಗಳವೂ ತಾರಕಕ್ಕೇರಿದೆ. ಇದು ಬಿಜೆಪಿಗೆ ಬ್ರಹ್ಮಾಸ್ತ್ರವಾಗಿದೆ.
ಇನ್ನು ಸಚಿವ ಸುಧಾಕರ್ ಹಾಗೂ ಗೋವಿಂದಪ್ಪ ನಡುವಿನ ಜಗಳವೂ ಬಹಿರಂಗವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನಡೆಗಳು ಶಾಸಕರಿಗೆ ಇಷ್ಟವಾಗುತ್ತಿಲ್ಲ. ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯ ಘಟಕವು ಸೋಷಿಯಲ್ ಮೀಡಿಯಾದಲ್ಲಿ ಸಖತ್ತಾಗಿಯೇ ಬಳಸಿಕೊಂಡಿದೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಆಂತರಿಕ ಕಲಹ ಈಗ ಜಿಲ್ಲಾ ಮಟ್ಟಕ್ಕೂ ವ್ಯಾಪಿಸಿದೆ!! ಜಿಲ್ಲಾ ಉಸ್ತುವಾರಿ ಸಚಿವರಿಗೂ ಹಾಗೂ ಕೈ ಶಾಸಕರ ಮಧ್ಯದ ಜಗಳ ಈಗ ಹಾದಿ-ಬೀದಿಯಲ್ಲಿ ನಡೆಯುತ್ತಿದೆ!! ದಾವಣಗೆರೆ,ಚಿತ್ರದುರ್ಗ, ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಾಂಗ್ರೆಸ್ ಒಡೆದ ಮನೆಯಾಗಿರುವುದು ಖಚಿತ-ನಿಶ್ಚಿತ-ಖಂಡಿತ! ಎಂದು ವ್ಯಂಗ್ಯವಾಡಿದೆ.