SUDDIKSHANA KANNADA NEWS/ DAVANAGERE/ DATE:27-02-2024
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ 2024-25ನೇ ಸಾಲಿನ ಆಯವ್ಯಯ ಮಂಡನೆ ಮಾಡಲಾಗಿದ್ದು, ಒಟ್ಟು ನಗದು ಉಳಿತಾಯ 17.65 ಕೋಟಿ ರೂಪಾಯಿ ಉಳಿತಾಯ ಬಜೆಟ್ ಮಂಡಿಸಲಾಗಿದೆ.
ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್ ಅವರು ಬಜೆಟ್ ಓದುವ ಮೂಲಕ ಮಂಡನೆ ಮಾಡಿದರು.
5402.29 ಲಕ್ಷ ರೂ. ಆರಂಭಿಕ ಶಿಲ್ಕು, 15567.40 ಲಕ್ಷ ರೂ. ಒಟ್ಟು ರಾಜಸ್ವ ಜಮೆಗಳು, 13,993.60 ಲಕ್ಷ ರೂ. ಒಟ್ಟು ರಾಜಸ್ವ ಪಾವತಿಗಳು, 18224.75 ಲಕ್ಷ ರೂ. ಒಟ್ಟು ಬಂಡವಾಳ ಜಮೆಗಳು, 22834.50 ಲಕ್ಷ ರೂ. ಒಟ್ಟು ಬಂಡವಾಳ ಪಾವತಿಗಳು, 18,951 ಲಕ್ಷ ರೂ. ಒಟ್ಟು ಅಸಾಮಾನ್ಯ ಜಮೆಗಳು, 19552 ಲಕ್ಷ ರೂ ಒಟ್ಟು ಅಸಾಮಾನ್ಯ ಪಾವತಿಗಳು ಆಗಿದ್ದು, ಒಟ್ಟು 1765.74 ಉಳಿತಾಯ ಬಜೆಟ್ ಮಂಡನೆ ಆಯಿತು. ಬಳಿಕ ಬಿಸಿ ಬಿಸಿ ಚರ್ಚೆಗೂ ಕಾರಣವಾಯಿತು.
ಆಸ್ತಿ ತೆರಿಗೆ ಹೆಚ್ಚಳದ ಸುಳಿವು..?
ಸ್ವಂತ ಆದಾಯ ಮೂಲಗಳಲ್ಲಿ ಆಸ್ತಿ ತೆರಿಗೆ ಪ್ರಮುಖ ಆದಾಯ ಮೂಲ. ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿತವಾದ ಬಡಾವಣೆಯಾದ ಜೆ. ಹೆಚ್. ಪಟೇಲ್ ಬಡಾವಣೆಯನ್ನು ಪಾಲಿಕೆಗೆ ಹಸ್ತಾಂತರಿಸಿಕೊಂಡು
ಆಸ್ತಿ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಒಟ್ಟಾರೆಯಾಗಿ ಅಂದಾಜು 35 ಕೋಟಿ ರೂಪಾಯಿ ಆಸ್ತಿ ತೆರಿಗೆ ನಿರೀಕ್ಷೆ ಮಾಡಲಾಗಿದೆ. 24 ಗಂಟೆ ಕುಡಿಯುವ ನೀರಿನ ಸರಬರಾಜು ಯೋಜನೆಯು ಮುಂದಿನ ವರ್ಷ ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಂಡು ನಗರದ ಜನತೆಗೆ ನಿರಂತರ ನೀರು ಸರಬರಾಜು ಮಾಡುವ ಮೂಲಕ ಹಾಗೂ ವೈಜ್ಞಾನಿಕವಾಗಿ ದರ ನಿಗದಿಪಡಿಸಿ ಅನವಶ್ಯಕ ಹೊರೆಯನ್ನು ತಪ್ಪಿಸಲಾಗುವುದು.
ಬಾಕಿ ಉಳಿದಿರುವ ನೀರಿನ ಕಂದಾಯ ತ್ವರಿತ ಹಾಗೂ ದಕ್ಷ ವಸೂಲಾತಿಗೆ ಕ್ರಮ ವಹಿಸಲಾಗುವುದು. ಒಟ್ಟಾರೆ ಆರು ಕೋಟಿ ರೂಪಾಯಿ ಕಂದಾಯ ವಸೂಲಾತಿಯ ಗುರಿ ಹೊಂದಲಾಗಿದೆ ಎಂದು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಪ್ರಸನ್ನಕುಮಾರ್ ಅವರು, ಆಸ್ತಿ ತೆರಿಗೆ ಹೆಚ್ಚಳದ ಸುಳಿವು ನೀಡಿದ್ದೀರಾ. ನೀರಿನ ಶುಲ್ಕ ಹೆಚ್ಚಳದ ಬಗ್ಗೆಯೂ ಪ್ರಸ್ತಾಪ ಪರೋಕ್ಷವಾಗಿ ಆಗಿದೆ. ಹಾಗಾಗಿ, ಜನರಿಗೆ ದುಬಾರಿಯಾಗದಂತೆ ಹೆಚ್ಚಳ ಮಾಡಿ ಎಂದು
ಸಲಹೆ ನೀಡಿದರು.
ಬಜೆಟ್ ನ ಪ್ರಮುಖ ಅಂಶಗಳು:
- ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಾಕಿಯುಳಿದ ಬಾಡಿಗೆ ಮೊತ್ತ ವಸೂಲಿ ಮಾಡಿರುವುದಲ್ಲದೇ, ಹರಾಜಿನಲ್ಲಿ ಹೊಸ ದರ ವಿಧಿಸಲಾಗಿದೆ. ಮುಂದಿನ ವರ್ಷ ರೂ. 125 ಲಕ್ಷ ಆದಾಯ ನಿರೀಕ್ಷೆ
-
ಸರ್ಕಾರದ ರಾಸಜ್ವ ಅನುದಾನ 9138 ಲಕ್ಷ ರೂ. ಆದಾಯದ ಗುರಿ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿಶೇಷ ಅನುದಾನಗಳು ಹಾಗೂ ಯೋಜನೆಗಳಿಗೆ ಸಂಬಂಧಿಸಿದಂತೆ 103 ಕೋಟಿ 75 ಲಕ್ಷ ರೂಪಾಯಿ ಅನುದಾನದ
ಅಂದಾಜು - ರಾಜ್ಯ ಸರ್ಕಾರದ ಶಾಸಕರ ವಿಶೇಷನುದಾನದ ಮೂಲಕ 50 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ
2024-25 ನೇ ಸಾಲಿನ ಉದ್ದೇಶಿತ ಯೋಜನೆಗಳು:
- ನಗರ ಧೂಳು ಮುಕ್ತವಾಗಿಸಲು ನ್ಯಾಷನಲ್ ಕ್ಲೀನ್ ಏರ್ ಪ್ರೋಗ್ರಾಮ್ ಅಡಿ ಈಗಾಗಲೇ 7 ಕೋಟಿ ರೂಪಾಯಿ ಬಂದಿದ್ದು, ಪ್ರಸಕ್ತ ವರ್ಷ 10 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ರಸ್ತೆಗಳಲ್ಲಿ ನವೀನ ರೀತಿಯ ಪೇವರ್ಸ್ ಅಳವಡಿಕೆ.
- ಮರಗಿಡಗಳನ್ನು ಬೆಳೆಸಿ ಮಾಲಿನ್ಯ ಕಡಿಮೆಗೆ ಕ್ರಮ
- 25 ಕೋಟಿ ರೂ. ವೆಚ್ಚದಲ್ಲಿ ಕುಂದುವಾಡ ಗ್ರಾಮದ ಹಿಂಭಾಗ ಹಾಲಿ ಇರುವ ಕೊಳಚೆ ನೀರು ಶುದ್ಧೀಕರಣ ಉನ್ನತೀಕರಣ ಇಲ್ಲವೇ ಪುನರ್ ನಿರ್ಮಿಸಲು ಅನುದಾನ ಹಂಚಿಕೆಯಾಗಿದದ್ದು, ಆಯವ್ಯಯ ವರ್ಷದಲ್ಲಿ ಜಾರಿ
- ಜರ್ಮನ್ ಬ್ಯಾಂಕ್ ನೆರವಿನಡಿ 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು.
- ನಗರದ ಪ್ರಮುಖ ಸ್ಥಳ ಇಲ್ಲವೇ ಬಡಾವಣೆಗಳಲ್ಲಿ ಪಿಪಿಪಿ ಮಾದರಿಯಡಿ ಶಾಪಿಂಗ್ ಮಾಲ್ ನಿರ್ಮಾಣ
- 10 ಕೋಟಿ ರೂ. ವೆಚ್ಚದಲ್ಲಿ ಸ್ಕೈ ವಾಕ್ ನಿರ್ಮಾಣ, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ 5 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನಗಳ ಅಭಿವೃದ್ಧಿ.
- ನಗರದಲ್ಲಿ ವಾಹನ ದಟ್ಟಣೆ ವಿಪರೀತ ಹೆಚ್ಚಾಗಿದ್ದು, ಟ್ರಾಫಿಕ್ ಜಾಮ್, ಅಪಘಾತಗಳ ಪ್ರಮಾಣ ತಗ್ಗಿಸಲು ಈರುಳ್ಳಿ ಮಾರ್ಕಟ್ ನಿಂದ ವಿನೋಬನಗರದ 4ನೇ ಮೇಲ್ ವರೆಗೆ ಮೇಲು ಸೇತುವೆ ನಿರ್ಮಾಣದ ಉದ್ದೇಶ.
- ಬಾತಿ ಕೆರೆ, ಆವರಗೆರೆ ಕೆರೆ ಅಭಿವೃದ್ಧಿ, 2.50 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಉಳಿತಾಯದ ಎಲ್. ಇ. ಡಿ. ದೀಪ ಇಲ್ಲವೇ ಸೋಲಾರ್ ವಿದ್ಯುತ್ ದೀಪಗಳ ಅಳವಡಿಕೆ, ಮೂಲಭೂತ ಸೌಕರ್ಯ ಕಾಮಗಾರಿಗಳು.
- ವಾಚನಾಲಯ ಅಥವಾ ಕಿರು ಗ್ರಂಥಾಲಯ ಸ್ಥಾಪನೆ, ಬಿಡಾಡಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂತಾನ ಹರಣ ಚಿಕಿತ್ಸೆಗೆ 50 ಲಕ್ಷ ರೂ., ಅವೈಜ್ಞಾನಿಕ ರಸ್ತೆ ಉಬ್ಬು ಹಾಗೂ ಸರ್ವೀಸ್ ಗ್ಯಾಪ್ ಸರಿಪಡಿಸುವಿಕೆಗೆ 2 ಕೋಟಿ ರೂಪಾಯಿ ಮೀಸಲು.
- ಪಾಲಿಕೆ ಆಸ್ತಿಗಳ ಸಂರಕ್ಷಣೆಗೆ ಕ್ರಮ, ಅಂತರ್ಜಲ ಮರುಪೂರಣಸ ಸಮಗ್ರ ಘನ ತ್ಯಾಜ್ಯ ನಿರ್ವಹಣೆ, ಹಸಿ ಕಸ ಹಾಗೂ ಒಣ ಕಸ ಬೇರ್ಪಡಿಸಲು ಪ್ಲಾಸ್ಟಿಕ್ ಬುಟ್ಟಿಗಳ ವಿತರಣೆ, 6 ಕೋಟಿ ರೂ. ವೆಚ್ಚದಲ್ಲಿ ಸುಸಸ್ಜಿತವಾಗಿ ಕಸಾಯಿಖಾನೆ ನಿರ್ಮಾಣ.
- ಗರಡಿ ಮನೆಗಳ ನವೀಕರಣ, ಶವಸಂಸ್ಕಾರಕ್ಕೆ ಸಹಾಯ, ಒಳಾಂಗಣ ಕ್ರೀಡಾಂಗಣ ನಿರ್ಮಾಣ.
- ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಝೋನ್ ನಿರ್ಮಾಣ, ಪಾಲಿಕೆಯ ಅಧಿಕಾರಿ ಹಾಗೂ ನೌಕರರ ವಸತಿ ಗೃಹ ನಿರ್ಮಾಣ.
- ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ 65 ಲಕ್ಷ ರೂ.
ಬಜೆಟ್ ಮಂಡನೆ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಅವರು, ಈ ಬಜೆಟ್ ನಲ್ಲಿ ಏನೂ ಇಲ್ಲ. ಬಿಜೆಪಿ ಆಡಳಿತದಲ್ಲಿದ್ದಾಗ ಇದ್ದಾಗ ಘೋಷಿಸಿದ ಬಹುತೇಕ ಯೋಜನೆಗಳನ್ನೇ ಮುಂದುವರಿಸಲಾಗಿದೆ. ನಾಲ್ಕೈದು ಕಾರ್ಯಕ್ರಮಗಳನ್ನು ಬಿಟ್ಟರೆ ಹೊಸದೇನೂ ಇಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಉಪಮೇಯರ್ ಯಶೋಧಾ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಉದಯ್ ಕುಮಾರ್, ಮೀನಾಕ್ಷಿ ಜಗದೀಶ್ ಸೇರಿದಂತೆ ಪಾಲಿಕೆ ಸದಸ್ಯರು ಹಾಜರಿದ್ದರು.