SUDDIKSHANA KANNADA NEWS/ DAVANAGERE/ DATE:27-02-2024
ದಾವಣಗೆರೆ: 2024-25 ನೇ ಸಾಲಿನಲ್ಲಿ ಆಯವ್ಯಯ ಮಂಡನೆ ಮುಗಿಯುತ್ತಿದ್ದಂತೆ ಪಾಲಿಕೆಯ ಬಿಜೆಪಿ ಸದಸ್ಯರು ಖಾಲಿ ಡಬ್ಬ ಪ್ರದರ್ಶಿಸಿದರು. ಇದು ಖಾಲಿ ಡಬ್ಬದ ಆಯವ್ಯಯ ಎಂದು ಛೇಡಿಸಿದರು.
ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್. ಟಿ. ವೀರೇಶ್, ವೀಣಾ ನಂಜಪ್ಪ, ಕೆ. ಎಂ. ವೀರೇಶ್, ಶಿವಾನಂದ್ ಸೇರಿದಂತೆ ಕೆಲವರು ಖಾಲಿ ಡಬ್ಬಗಳನ್ನಿಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಮಂಡನೆ ಮಾಡಿರುವ ಬಜೆಟ್ ಗೆ ಕಣ್ಣು ಇಲ್ಲ, ಕಿವಿಯೂ ಇಲ್ಲ. ಇದೊಂದು ಖಾಲಿ ಡಬ್ಬದ ಬಜೆಟ್. ಹೆಚ್ಚು ಖರ್ಚು ಹಾಗೂ ಕಡಿಮೆ ಸಂಗ್ರಹದ ಗುರಿ ಹೊಂದಲಾಗಿದೆ. ಅನಿಶ್ಛಿತತೆಯಲ್ಲೇ ಯೋಜನೆಗಳನ್ನು ಘೋಷಿಸಲಾಗಿದೆ. ನಾವು ಅಧಿಕಾರದಲ್ಲಿದ್ದಾಗ ಘೋಷಿಸಿದ್ದ ಬಹುತೇಕ ಯೋಜನೆಗಳೇ ಇವೆ ಎಂದು ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಪ್ರತಿಕ್ರಿಯಿಸಿದರು.
ಬಜೆಟ್ ಮಂಡನೆ ಬಳಿಕ ಮಾತನಾಡಿದ ಅವರು, ಆಯವ್ಯಯದಲ್ಲಿನ ಅಂಶಗಳ ಬಗ್ಗೆ ಮಾತನಾಡಲು ಪಾಲಿಕೆಯ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸುತ್ತಿರುವುದನ್ನು ನೋಡಿದರೆ ಬಜೆಟ್ ನಲ್ಲಿ ಏನೂ ಇಲ್ಲ ಎಂಬುದು ಸಾಬೀತಾಗಿದೆ. ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿರುವುದು ಸರಿಯಲ್ಲ. 45 ನಿಮಿಷಗಳ ಅವಕಾಶ ನೀಡಿದರೂ ಆಗಾಗ್ಗೆ ಅಡ್ಡಿಪಡಿಸಿದ್ದು ಸರಿಯಲ್ಲ. ಇದು ಬೇಸರ ತಂದಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್, ಅಬ್ದುಲ್ ಲತೀಫ್ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಎಲ್ಲವನ್ನೂ ಖಾಲಿ ಮಾಡಿ ಆಗಿತ್ತು. ನಾವು ಡಬ್ಬ ತುಂಬಿಸುತ್ತಿದ್ದೇವೆ. ಬಿಜೆಪಿಯದ್ದು ಖಾಲಿ ಡಬ್ಬ, ನಮ್ಮದು ತುಂಬುತ್ತಿರುವ ಡಬ್ಬ ಎಂದು ಹೇಳಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ನಡುವೆ ಮಾತಿನ ಚಕಮಕಿ ನಡೆಯಿತು.
ಕೆ. ಚಮನ್ ಸಾಬ್ ಮಾತನಾಡಿ 2024-25 ನೇ ಸಾಲಿಗೆ ಬಜೆಟ್ ಅತ್ಯುತ್ತಮ. ಜಾಸ್ತಿ ತೋರಿಸಿ ಕಡಿಮೆ ವಸೂಲಿ ಮಾಡುವುದಿಲ್ಲ. ಇದು ಬಿಜೆಪಿ ಮಾಡಿದ್ದ ರೀತಿ. ಪಾಲಿಕೆ ಶಕ್ತಿ ಏನಿದೆ, ಆದಾಯ ಎಷ್ಟು ಬರುತ್ತದೆ ಎಂಬ ಆಧಾರದಲ್ಲಿ ಆಯವ್ಯಯ ಮಂಡನೆ ಮಾಡಲಾಗಿದೆ. ಜಾಸ್ತಿ ತೋರಿಸಿ ಜನರಿಗೆ ಮೋಸ ಮಾಡುವುದು ಕಾಂಗ್ರೆಸ್ ಜಾಯಮಾನವಲ್ಲ. ಕಳೆದ ಐದು ವರ್ಷ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಗೆ ಬಂದಿರಲಿಲ್ಲ. ದಾವಣಗೆರೆಯವರೂ ಮಂತ್ರಿ ಆಗಲಿಲ್ಲ. ಈಗ ದಕ್ಷ ಮಂತ್ರಿ
ಇದ್ದಾರೆ. ಹೆಚ್ಚಿನ ಅನುದಾನ ತರುತ್ತಾರೆ. ಅಭಿವೃದ್ಧಿಯೂ ಆಗುತ್ತದೆ ಎಂದರು.
ಪ್ರಸನ್ನ ಕುಮಾರ್, ಎಸ್. ಟಿ. ವೀರೇಶ್ ಮಾತನಾಡಿ, ಬಜೆಟ್ ಬಗ್ಗೆ ಮಾತನಾಡಲು ಅವಕಾಶ ನೀಡಬೇಕು. ಪದೇ ಪದೇ ಅಡ್ಡಿಪಡಿಸಿದರೆ ಹೇಗೆ? ಎಂದು ಪ್ರಶ್ನಿಸಿದರು. ಆಡಳಿತ ಪಕ್ಷದ ನಾಗರಾಜ್, ಗಡಿಗುಡಾಳ್ ಮಂಜುನಾಥ್, ಚಮನ್ ಸಾಬ್ ಅವರು ಬಜೆಟ್ ನಲ್ಲಿನ ವಿಚಾರಗಳ ಬಗ್ಗೆ ಮಾತ್ರ ಮಾತನಾಡಿ. ಬೇರೆ ವಿಚಾರಗಳ ಬಗ್ಗೆ ಮಾತನಾಡಬೇಡಿ ಎಂದು ತಿರುಗೇಟು ನೀಡಿದರು.
ಪ್ರಸನ್ನಕುಮಾರ್ ಅವರು ಮಾತನಾಡಿ, ಖಾಲಿ ಡಬ್ಬದ ಬಜೆಟ್ ನಲ್ಲಿ ಜನರ ದಾರಿ ತಪ್ಪಿಸುವ ಕೆಲಸ. ಸಂಗ್ರಹದ ಗುರಿ ಕಡಿಮೆ ಇದೆ. ರಾಜಸ್ವ ಸಂಗ್ರಹದ ಗುರಿಯೂ ಕಡಿಮೆ ಇದೆ. 54 ಕೋಟಿ ರೂಪಾಯಿ ಆರಂಭಿಕ ಶಿಲ್ಕು ತೋರಿಸಿದ್ದೀರಾ. ನಾವಿದ್ದಾಗ 67 ಕೋಟಿ ರೂಪಾಯಿ ಇತ್ತು. 133 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವರ್ಷ ಮಾಡ್ತೀರಾ ಎಂಬುದನ್ನು ತಿಳಿಸಿಲ್ಲ. ಹಿಂದಿನ ಸಾಲಿನಲ್ಲಿ ಸೇರಿದ ಅನುಮೋದನೆಗೊಂಡ ಯೋಜನೆಗಳೇ ಇವೆ. ಈ ಅನುದಾನದಲ್ಲಿ ಹೊಸದಾಗಿ ಎಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂಬ ಖಚಿತತೆ ಇಲ್ಲ. ರಸ್ತೆ, ಚರಂಡಿ, ಕುಡಿಯುವ ನೀರು, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಇತರೆ ಯೋಜನೆಗಳು ಈ ವರ್ಷವೇ ಪೂರ್ಣಗೊಳ್ಳುತ್ತವೋ ಅಥವಾ ಮುಂದಿನ ವರ್ಷಕ್ಕೂ ಮುಂದುವರಿಯುತ್ತದೆಯೋ ಎಂಬುದನ್ನು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.
ಬಾತಿ ಕೆರೆ ಪಾಲಿಕೆ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ ತಿಳಿಸಿ. ಬರದೇ ಇದ್ದರೆ ಕೈ ಬಿಡಬೇಕು. 103 ಕೋಟಿ ರೂಪಾಯಿ ಕೇಂದ್ರ ಹಣಕಾಸು ಆಯೋಗದಿಂದ, 50 ಕೋಟಿ ರೂಪಾಯಿ ಶಾಸಕರ ನಿಧಿಯಲ್ಲಿ ಕೆಲ ಕಾಮಗಾರಿ ನಡೆಸಲಾಗುವುದು
ಎಂದು ಪ್ರಸ್ತಾಪಿಸಲಾಗಿದೆ. ಶಾಸಕರ ನಿಧಿಯಲ್ಲಿ ಬರುವ ಅನುದಾನದಿಂ ಲೋಕೋಪಯೋಿ ಸೇರಿದಂತೆ ಇತರೆ ಕಾರ್ಯಗಳಿಗೆ ಬಳಸಬಹುದು. ಇದು ಪಾಲಿಕೆ ವ್ಯಾಪ್ತಿಯಲ್ಲಿನ ಯೋಜನೆಗಳಿಗೆ ಖರ್ಚು ಮಾಡಲಾಗುತ್ತದೆಯೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದರು.
ದುಡ್ಡೇ ಇಲ್ಲ. ಬಜೆಟ್ ಮಂಡನೆ ಮಾಡಲಾಗಿದೆ. ದಾರಿ ತಪ್ಪಿಸುವ ಹಲವು ಅಂಶಗಳಿವೆ. ಬಜೆಟ್ ಎಂದರೆ ಎಷ್ಟು ಹಣ ನಮ್ಮ ಬಳಿ ಇದೆ. ಎಷ್ಟು ಖರ್ಚು ಮಾಡಲಾಗುತ್ತದೆ. ತೆರಿಗೆ ಸಂಗ್ರಹ ಹೇಗೆ ಮಾಡಲಾಗುತ್ತದೆ. ರಾಜಸ್ವ ಸಂಗ್ರಹ ಸೇರಿದಂತೆ ಹೇಗೆ ಹಣ ಹೊಂದಿಸಲಾಗುತ್ತದೆ ಎಂಬ ಕುರಿತಂತೆ ಸ್ಪಷ್ಟತೆ ಇಲ್ಲ. ನಮ್ಮ ಹತ್ತಿರ ದುಡ್ಡಿಲ್ಲ ಸಾಲ ಮಾಡ್ತೀವಿ ಅಂತಾದ್ರೂ ಹೇಳಿ. ನಾವು ಮಾಡಿದ್ದ ಯೋಜನೆಗಳೇ ಬಹುತೇಕ ಇವೆ. ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರರ ಹಣ ಪಾವತಿಯಾಗಿಲ್ಲ. ಹಂತ ಹಂತವಾಗಿ ನೀಡುತ್ತೇವೆ ಎಂದರೆ ಹೇಗೆ? ಮೊದಲೆಲ್ಲಾ ಹೀಗೆ ಇರಲಿಲ್ಲ. ಮಹಾನಗರ ಪಾಲಿಕೆಯ ವಾಹನ ಚಾಲಕರಿಗೆ ಸಂಬಳನೇ ಆಗಿಲ್ಲ. ಪ್ರತಿಭಟನೆ ನಡೆಸಿದ್ದಾರೆ ಎಂದು ಪ್ರಸನ್ನಕುಮಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಯರ್ ವಿನಾಯಕ್ ಪೈಲ್ವಾನ್ ಹಣ ಪಾವತಿಸಿದ್ದೇವೆ ಎಂದ್ರು. ಆಯುಕ್ತೆ ಟೆಂಡರ್ ಪಡೆದವರು ನೀಡಿಲ್ಲ. ನಮ್ಮ ಕಡೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.