SUDDIKSHANA KANNADA NEWS/ DAVANAGERE/ DATE:01-02-2024
ದಾವಣಗೆರೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್” ಮಾದರಿಯಲ್ಲಿ ಇದೆ. ಈ ಬಜೆಟ್ ನಲ್ಲಿ ದೇಶದ ಎಲ್ಲಾ ವರ್ಗದವರಿಗೂ ಆದ್ಯತೆ ನೀಡಲಾಗಿದೆ. ಇದೊಂದು ದೂರದೃಷ್ಟಿಯುಳ್ಳ, ಮಹಿಳಾಪರವಾದ ಆಯವ್ಯಯ ಎಂದು ಬಿಜೆಪಿ ಮುಖಂಡ ಕೆ. ಬಿ. ಕೊಟ್ರೇಶ್ ಹರ್ಷ ವಕ್ತಪಡಿಸಿದ್ದಾರೆ.
ಸರ್ವವ್ಯಾಪಿಯೂ ಆಗಿರುವ ಈ ಬಜೆಟ್ ಸರ್ವಸ್ಪರ್ಶಿಯೂ ಆಗಿದೆ. ಮಹಿಳೆಯರಿಗೆ ಹೆಚ್ಚಿನ ಬಂಪರ್ ಕೊಡುಗೆಗಳನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿದೆ. ಆತ್ಮನಿರ್ಭರ ಹಾಗೂ ವಿಕಸಿತ ಭಾರತಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಜೊತೆಗೆ ನಾರಿಶಕ್ತಿಯ ಸ್ವಾಭಿಮಾನದ ಸ್ವಾವಲಂಬನೆಗೆ ʻʻಲಖ್ಪತಿ ದೀದಿʼʼ ಯೋಜನೆ ಘೋಷಿಸಿರುವುದು ಅತ್ಯಂತ ಖುಷಿಯ ವಿಚಾರ ಎಂದು ತಿಳಿಸಿದ್ದಾರೆ.
ಯಾವುದೇ ತೆರಿಗೆಯನ್ನು ವಿಧಿಸದೇ, ಹೊಸ ತೆರಿಗೆ ಹೇರದೇ, ಬಂಡವಾಳ ಹೂಡಿಕೆ ಮತ್ತು ಹೊಸ ಉದ್ಯೋಗಗಳ ಸೃಷ್ಟಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಒಳ್ಳೆಯ ಬೆಳವಣಿಗೆ. ಭಾರತ ದೇಶವು ಅತ್ಯಂತ ಬಲಿಷ್ಠ ಹಾಗೂ ಭವ್ಯವಾದ ದೇಶ ನಿರ್ಮಾಣಕ್ಕೆ ಉಪಕಾರಿಯಾಗಿದೆ ಎಂದು ಕೊಟ್ರೇಶ್ ಹೇಳಿದ್ದಾರೆ.
ದೂರದೃಷ್ಟಿಯುಳ್ಳ, 2047ರಲ್ಲಿ ಭಾರತ ಇಡೀ ವಿಶ್ವದಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ಮೊದಲ ಸ್ಥಾನದಲ್ಲಿರಲಿದೆ. ಈ ನಿಟ್ಟಿನಲ್ಲಿ ಈ ಬಜೆಟ್ ಸಹಕಾರಿಯಾಗಿದೆ. ರೈತರು, ಬಡವರು, ಮಹಿಳೆಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಎಲ್ಲಾ ವರ್ಗದವರ ಹಿತ ಗಮನದಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್ ಇದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.