SUDDIKSHANA KANNADA NEWS/ DAVANAGERE/ DATE:25-01-2025
ಗೋರಖ್ ಪುರ: ಕುಡುಕ ಗಂಡನ ಕಾಟದಿಂದ ಬೇಸತ್ತ ಇಬ್ಬರು ಮಹಿಳೆಯರು ಮನೆ ತೊರೆದು ಮದುವೆಯಾದ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ.
ಕವಿತಾ ಮತ್ತು ಗುಂಜಾ ಅಲಿಯಾಸ್ ಬಬ್ಲು ಡಿಯೋರಿಯಾದ ಚೋಟಿ ಕಾಶಿ ಎಂದೂ ಕರೆಯಲ್ಪಡುವ ಶಿವ ದೇವಾಲಯದಲ್ಲಿ ವಿವಾಹ ಬಂಧನಕ್ಕೆ ಒಳಗಾದರು.
ಮೊದಲು ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದ್ದರು. ಬಳಿಕ ಮೊಬೈಲ್ ನಂಬರ್ ಎಕ್ಸ್ ಚೇಂಜ್ ಆಗಿದೆ. ಫೋನ್ ನಲ್ಲಿಯೇ ಕಷ್ಟಸುಖ ಮಾತನಾಡುತ್ತಿದ್ದರು. ಇದು ಸ್ನೇಹಕ್ಕೆ ತಿರುಗಿತ್ತು.
ಇಬ್ಬರೂ ತಮ್ಮ ಮದ್ಯವ್ಯಸನಿ ಗಂಡನಿಂದ ಹಿಂಸೆ ಅನುಭವಿಸಿದ್ದರು. ಇಬ್ಬರಿಗೂ ಇದೇ ರೀತಿಯ ಅನುಭವವಾಗಿತ್ತು. ಕೌಟುಂಬಿಕ ಹಿಂಸೆಯನ್ನು ಆರಂಭದಲ್ಲಿ ಸಹಿಸಿಕೊಂಡಿದ್ದರು. ಬರಬರುತ್ತಾ ಕುಡುಕ ಗಂಡನ ಕಾಟ ವಿಪರೀತವಾಗತೊಡಗಿತು. ಕವಿತಾ ಮತ್ತು ಗುಂಜಾ ಅಲಿಯಾಸ್ ಬಬ್ಲು ಇಬ್ಬರಿಗೆ ಇದೇ ಅನುಭವ ಆದ ಕಾರಣ ಮನೆ ತೊರೆದು ವಿವಾಹವಾಗಿದ್ದಾರೆ.
ದೇವಸ್ಥಾನದಲ್ಲಿ, ಗುಂಜ ವರನ ಪಾತ್ರ ವಹಿಸಿಕೊಂಡರೆ, ಕವಿತಾಗೆ ಸಿಂಧೂರವನ್ನು ಇಟ್ಟು ಹೂವಿನ ಹಾರ ವಿನಿಮಯ ಮಾಡಿಕೊಂಡರು. ಸಪ್ತಪದಿಯನ್ನೂ ತುಳಿದರು.
“ನಮ್ಮ ಗಂಡನ ಕುಡಿತ ಮತ್ತು ನಿಂದನೀಯ ವರ್ತನೆಯಿಂದ ನಾವು ಪೀಡಿಸಲ್ಪಟ್ಟಿದ್ದೇವೆ. ಇದು ಶಾಂತಿ ಮತ್ತು ಪ್ರೀತಿಯ ಜೀವನವನ್ನು ಆಯ್ಕೆ ಮಾಡಲು ಪ್ರೇರೇಪಿಸಿತು. ನಾವು ಗೋರಖ್ಪುರದಲ್ಲಿ ದಂಪತಿಗಳಾಗಿ ವಾಸಿಸಲು ನಿರ್ಧರಿಸಿರುವುದಾಗಿ ಗುಂಜಾ ಹೇಳಿದರು.
ಇಬ್ಬರೂ ಈಗ ಒಂದು ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡು ವಿವಾಹಿತ ಜೋಡಿಯಾಗಿ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ದೇವಸ್ಥಾನದ ಅರ್ಚಕ ಉಮಾಶಂಕರ್ ಪಾಂಡೆ ಮಾತನಾಡಿ, ಮಹಿಳೆಯರು ಹೂಮಾಲೆ ಮತ್ತು ಸಿಂಧೂರವನ್ನು ಖರೀದಿಸಿ, ಧಾರ್ಮಿಕ ವಿಧಿಗಳನ್ನು ನೆರವೇರಿಸಿ, ಸದ್ದಿಲ್ಲದೆ ತೆರಳಿದರು ಎಂದು ಹೇಳಿದರು.