SUDDIKSHANA KANNADA NEWS/ DAVANAGERE/ DATE:20-01-2025
ದಾವಣಗೆರೆ: ಜಿಲ್ಲಾ ಕಸಾಪ ಹಾಗೂ ಸುವರ್ಣ ದೇಶ ಪಬ್ಲಿಕೇಷನ್ ಮತ್ತು ಎಲ್ ಆರ್ ಈವಂಟ್ ಮ್ಯಾನೇಜ್ಮೆಂಟ್ ಬೆಂಗಳೂರು ವತಿಯಿಂದ ನಗರದ ಸರ್ಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಫೆಬ್ರವರಿ 7, 8 ಹಾಗೂ 9ರಂದು ಮೂರು ದಿನಗಳ ಕಾಲ ಶಿಕ್ಷಣ-ಸಾಹಿತ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತ್ಯ, ಶಿಕ್ಷಣ ಮತ್ತು ಪುಸ್ತಕ ಈ ಮೂರಕ್ಕೂ ಇರುವ ಸಂಬಂಧವನ್ನು ಗಟ್ಟಿಗೊಳಿಸಿ ಜನರಲ್ಲಿ ಸಾಹಿತ್ಯದ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಬೇಕು ಎಂಬುದು ಮೇಳದ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರತಿ ಪೋಷಕರಿಗೂ ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅತೀವವಾದ ಕಾಳಜಿ ಇದ್ದೇ ಇರುತ್ತದೆ. ಎಂತಹ ಶಾಲೆ ಬೇಕು, ತಮ್ಮ ಮಕ್ಕಳಿಗೆ ಯಾವ ಕೋರ್ಸುಗಳು ಸೂಕ್ತ ಎಂಬ ಗೊಂದಲ ಇದ್ದೇ ಇರುತ್ತದೆ. ಪೋಷಕರ ಎಲ್ಲಾ ಗೊಂದಲಗಳನ್ನು ಬಗೆಹರಿಸಿ ತಮಗೆ ಸೂಕ್ತವಾದ ಶಾಲೆ ಅಥವಾ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಇದು ಒಂದು ಅದ್ಭುತ ಅವಕಾಶವಾಗಿದೆ ಎಂದು ತಿಳಿಸಿದರು.
ಖ್ಯಾತ ಚಲನಚಿತ್ರ ನಟ, ಸಾಹಿತಿ, ಹಿನ್ನೆಲೆ ಗಾಯಕರೂ ಆಗಿರುವ ಗುರುರಾಜ್ ಹೊಸಕೋಟೆ ಅವರು ಮಾತನಾಡಿ ಸಾಹಿತ್ಯ ಸಮಾಜವನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಸಾರಥಿ, ಈ ಮೇಳವನ್ನೂ ಸಹ ಸಮಾಜ ಉತ್ತಮ ಮಾರ್ಗದಲ್ಲಿರುವ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನೂ ನೀಡುವ ವಿಶಿಷ್ಟ ಮೇಳವಾಗಲಿದೆ ಎಂದರು.ಮೊಬೈಲ್ ಬಳಕೆಯ ದುಷ್ಪರಿಣಾಮಗಳು, ಪರಿಸರ ಜಾಗೃತಿ, ಪ್ಲಾಸ್ಟಿಕ್ ಬಳಕೆಯಿಂದಾಗುವ ವಿಪತ್ತುಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವುದರ
ಜೊತೆಗೆ ಪೋಷಕರು ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂದು ಹುಡುಕಲು ಸಮಯ ವ್ಯರ್ಥ ಮಾಡಿಕೊಳ್ಳುವುದರ ಬದಲಾಗಿ ಎಲ್ಲಾ ಶಾಲಾ ಕಾಲೇಜುಗಳನ್ನು ಒಂದೇ ವೇದಿಕೆಗೆ ತಂದು ಪ್ರತಿಯೊಬ್ಬರಿಗೂ ಅನುಕೂಲ ಮಾಡಿಕೊಡಬೇಕು ಎಂಬುದು ಈ ಮೇಳದ ಉದ್ದೇಶವಾಗಿದೆ ಎಂದರು.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ, ಮೇಳದಲ್ಲಿ ಸಾಹಿತ್ಯ ಸಮ್ಮೇಳನದ ಹೊಸ ಆಯಾಮವನ್ನು ಪರಿಚಯಿಸುವುದು ನಮ್ಮ ಉದ್ದೇಶವಾಗಿದೆ. ಸಾಹಿತ್ಯ ಸಮ್ಮೇಳನದ
ರೀತಿಯಲ್ಲಿಯೇ ಈ ಮೇಳ ನಡೆಯಲಿದ್ದರೂ ಮುಂದುವರಿದ ಭಾಗವಾಗಿ ನವ ಲೇಖಕರ ಮೇಳ ಹಮ್ಮಿಕೊಂಡಿದ್ದು ಹಿರಿಯ ಸಾಹಿತಿಗಳ ಜೊತೆಗೆ ನವಲೇಖಕರನ್ನು ಪರಿಚಯಿಸುವ ಹಾಗೂ ವೇದಿಕೆ ಹಂಚಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಕವಿ ಗೋಷ್ಟಿ, ವಿಚಾರ ಸಂಕಿರಣ, ಪುಸ್ತಕಗಳ ಬಿಡುಗಡೆ, ಪುಸ್ತಕ ಪರಿಚಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕವನ ವಾಚನ ಮಾಡಲಿರುವ ಕವಿಗಳ ಕವನಗಳನ್ನು ಸಂಕಲನ ಮಾಡಿ ಪುಸ್ತಕ ರೂಪದಲ್ಲಿಯೂ ಹೊರ ತರಲಾಗುವುದು. ಜೊತೆಗೆ 2001ರಿಂದ ಹೆಚ್ಚು ಪ್ರಚಲಿತರಾಗಿರುವ ಲೇಖಕರು, ಅವರ ಕೃತಿಗಳನ್ನು ಪರಿಚಯಿಸುವುದರ ಜೊತೆಗೆ ಹೊಸಬರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗುವುದು. ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ನಿರಂತರ ಕಾರ್ಯಕ್ರಮಗಳು ನಡೆಯಲಿದ್ದು ಅತ್ಯಂತ ಶೀಘ್ರದಲ್ಲಿ ಸರ್ವ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.ಮೇಳದ ಉಸ್ತುವಾರಿ ವಹಿಸಿಕೊಂಡಿರುವ ಹಾಗೂ ಪ್ರಕಾಶಕರಾದ ಆನಂದಗೌಡ ಮಾತನಾಡಿ ಪ್ರತಿದಿನವೂ ಒಂದೊಂದು ವಿಶಿಷ್ಟ ಮೇಳ ನಡೆಯಲಿದ್ದು ಫೆಬ್ರವರಿ 7ರಂದು ಸಾಹಿತ್ಯ ಮೇಳ, ಫೆಬ್ರವರಿ 8ರಂದು ಶಿಕ್ಷಣ ಮೇಳ, ಫೆಬ್ರವರಿ 9ರಂದು ಉದ್ಯೋಗ ಮೇಳ ನಡೆಯಲಿದೆ. ಈ ಮೇಳದಲ್ಲಿ ನಟ ರಮೇಶ್ ಅರವಿಂದ್, ಡಾ. ಗುರುರಾಜ್ ಕರ್ಜಗಿ, ಹುಲಿಕಲ್ ನಟರಾಜ್ ರಂತಹ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ರೇಖಾ ಓಂಕಾರಪ್ಪ, ಲೋಕೇಶ್, ಆನಂದ್ ಗೌಡ, ಸಿದ್ಧಲಿಂಗಮೂರ್ತಿ ಉಪಸ್ಥಿತರಿದ್ದರು.