SUDDIKSHANA KANNADA NEWS/ DAVANAGERE/ DATE:26-01-2025
ದಾವಣಗೆರೆ: ದಾವಣಗೆರೆಯ ಶಿರಮಗೊಂಡನಹಳ್ಳಿಯಲ್ಲಿರುವ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಧುರೀಣ ಎಸ್. ಎ. ರವೀಂದ್ರನಾಥ್ ಅವರ ನಿವಾಸಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಭೇಟಿ ನೀಡಿದರು.
ಎಸ್. ಎ. ರವೀಂದ್ರನಾಥ್ ಅವರು ಬೆಂಗಳೂರಿನಲ್ಲಿ ಆಪರೇಷನ್ ಗೆ ಒಳಗಾಗಿದ್ದರು. ಆರೋಗ್ಯ ವಿಚಾರಿಸುವ ಸಲುವಾಗಿ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಶಿರಮಗೊಂಡನಹಳ್ಳಿಯಲ್ಲಿನ ರವೀಂದ್ರನಾಥ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ರವೀಂದ್ರನಾಥ್ ಅವರ ಜೊತೆ ಮೊದಲಿನಿಂದಲೂ ಉತ್ತಮ ಒಡನಾಟ ಹೊಂದಿರುವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ನಿವಾಸಕ್ಕೆ ಬರುತ್ತಿದ್ದಂತೆ ಕುಟುಂಬ ಸದಸ್ಯರು ಬರಮಾಡಿಕೊಂಡರು. ರವೀಂದ್ರನಾಥ್ ಅವರ ಆರೋಗ್ಯ ವಿಚಾರಿಸಿದ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರು ರವೀಂದ್ರನಾಥ್ ಅವರ ಜೊತೆ ಚರ್ಚೆ ನಡೆಸಿದರು.
ಈ ವೇಳೆ ರವೀಂದ್ರನಾಥ್ ಅವರು ಮಾತನಾಡಿ ಮನೆಗೆ ಬಂದಿದ್ದು ಖುಷಿಯಾಯಿತು. ಆಪರೇಷನ್ ಆದ ಬಳಿಕ ಕೆಲ ದಿನಗಳ ಕಾಲ ಬೆಂಗಳೂರಿನಲ್ಲಿಯೇ ವಿಶ್ರಾಂತಿ ಪಡೆದೆ. ಈಗ ಆರಾಮಾಗಿದ್ದೇನೆ. ಆರೋಗ್ಯವೂ ಸುಧಾರಿಸುತ್ತಿದೆ ಎಂದು ತಿಳಿಸಿದರು.
ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರು ರವೀಂದ್ರನಾಥ್ ಅವರ ಕುಟುಂಬದವರ ಜೊತೆ ಮಾತುಕತೆ ನಡೆಸಿದರು. ರವೀಂದ್ರನಾಥ್ ಅವರ ಆರೋಗ್ಯ ಉತ್ತಮವಾಗಲಿ, ನೂರು ಕಾಲ ಬಾಳಲಿ ಎಂದು ದೇವರಲ್ಲಿ
ಪ್ರಾರ್ಥಿಸುವುದಾಗಿ ಹೇಳಿದರು.