ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭಿವಂಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಸಾರ್ವಜನಿಕರು ಮನೆಯಿಂದ ಹೊರಬರಲು ಪರದಾಡುವಂತಾಗಿದೆ. ರಸ್ತೆಯಲ್ಲಿದ್ದ ಪ್ರಾಣಾಂತಿಕ ಗುಂಡಿಗಳು ನೀರಿನಿಂದ ಸಂಪೂರ್ಣವಾಗಿ ಮರೆಯಾಗಿದ್ದು, ವಾಹನ ಸವಾರರು ಬ್ಯಾಲೆನ್ಸ್ ತಪ್ಪಿ ಬೀಳುತ್ತಿದ್ದಾರೆ.
ಇಂತಹ ಸಂಕಷ್ಟದ ಸಮಯದಲ್ಲಿ ಸ್ಥಳೀಯ ನಿವಾಸಿ ಶಾದಾಬ್ ಮೊಮಿನ್ ಎಂಬ ಯುವಕ ಸಾರ್ವಜನಿಕರ ನೆರವಿಗೆ ಧಾವಿಸಿದ್ದಾನೆ. ವಿಶೇಷವೆಂದರೆ, ಈತ ‘ಸ್ಪೈಡರ್‌ಮ್ಯಾನ್’ ವೇಷ ಧರಿಸಿ ಪ್ರವಾಹ ಪೀಡಿತ ರಸ್ತೆಗಳಲ್ಲಿ ಜನರಿಗೆ ದಾರಿ ತೋರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಸ್ಥಳೀಯರು ಈತನನ್ನು ಪ್ರೀತಿಯಿಂದ ಭಿವಂಡಿಯ ‘ಸ್ಪೈಡರ್‌ಮ್ಯಾನ್’ ಎಂದು ಕರೆಯುತ್ತಿದ್ದಾರೆ.
ಅಪಾಯಕಾರಿ ನೀರಿನಲ್ಲಿ ಸಿಲುಕಿದ್ದ ವಾಹನ ಸವಾರರು ಮತ್ತು ಪ್ರಯಾಣಿಕರನ್ನು ಶಾದಾಬ್ ಸುರಕ್ಷಿತವಾಗಿ ದಾಟಲು ಸಹಾಯ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಪ್ರವಾಹದಿಂದ ಹೆದರಿದ್ದ ಸಣ್ಣ ಮಕ್ಕಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ರಸ್ತೆ ದಾಟಿಸುವ ಮೂಲಕ ಅವರಿಗೆ ಮನರಂಜನೆ ನೀಡಿದ್ದಾನೆ.
ಪಾಲ್ಘರ್‌ನಲ್ಲಿ ಮುಳುಗಿದ ಕಾರು: ರೋಗಿಯ ಸಾಹಸಮಯ ರಕ್ಷಣೆ
ಮಹಾರಾಷ್ಟ್ರದಾದ್ಯಂತ ಮುಂಗಾರು ಮಳೆ ತೀವ್ರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪಾಲ್ಘರ್‌ನಲ್ಲಿ ರೋಗಿಯೊಬ್ಬರು ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದ ಕಾರು ಹಠಾತ್ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಪ್ರಾಣದ ಹಂಗು ತೊರೆದು ಹಗ್ಗಗಳ ಸಹಾಯದಿಂದ ಕಾರನ್ನು ಸುರಕ್ಷಿತವಾಗಿ ಎಳೆದು ತಂದಿದ್ದಾರೆ. ಬಳಿಕ ರೋಗಿಯನ್ನು ಪರ್ಯಾಯ ಮಾರ್ಗದ ಮೂಲಕ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ.





Leave a comment