ನಾಗರಕರ್ನೂಲ್ (ತೆಲಂಗಾಣ): ಅಕ್ರಮ ಸಂಬಂಧ ಹಾಗೂ ಆಸ್ತಿ ವ್ಯಾಜ್ಯದ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮಿಯೊಬ್ಬರನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ನಾಗರಕರ್ನೂಲ್‌ನಲ್ಲಿ ನಡೆದಿದೆ.
ರಾಮನಗರ ಕಾಲೋನಿ ನಿವಾಸಿ ಮಹಮ್ಮದ್ ಕರೀಮ್ (43) ಕೊಲೆಯಾದ ಹೋಟೆಲ್ ಉದ್ಯಮಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೀಮ್ ಪತ್ನಿ ಸಲೀಮಾ ಬೇಗಂ (36) ಹಾಗೂ ಆಕೆಯ ಪ್ರಿಯಕರ ಎಂಡಿ ಗೌಸ್ ಪಾಷಾ (29) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಪೋಲಿಸರ ಮಾಹಿತಿ ಪ್ರಕಾರ, ಸಲೀಮಾ ಹಾಗೂ ಗೌಸ್ ಪಾಷಾ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದ ಕರೀಮ್, ಪತ್ನಿಯ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಇದರಿಂದಾಗಿ ದಂಪತಿ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು.
ಈ ಮಧ್ಯೆ, ಕರೀಮ್ ತಮ್ಮ ಆಸ್ತಿಯನ್ನು ಪತ್ನಿ ಸಲೀಮಾ ಹೆಸರಿಗೆ ವರ್ಗಾಯಿಸಿದ್ದರು. ಕರೀಮ್‌ನನ್ನು ಕೊಲೆ ಮಾಡಿದರೆ ಆಸ್ತಿ ಸಂಪೂರ್ಣವಾಗಿ ತಮಗೆ ಸಿಗುತ್ತದೆ ಎಂದು ಭಾವಿಸಿದ ಆರೋಪಿಗಳು ಹತ್ಯೆಗೆ ಸಂಚು ರೂಪಿಸಿದ್ದರು.
ಸೆಪ್ಟೆಂಬರ್ 7ರಂದು ಸಲೀಮಾ ನೆಲ್ಲೂರಿನ ದರ್ಗಾಕ್ಕೆ ತೆರಳಿದ್ದಾಗ, ವಾಟ್ಸಾಪ್ ಕಾಲ್ ಮೂಲಕ ಗೌಸ್ ಪಾಷಾಗೆ ಕೊಲೆ ಮಾಡಲು ಸೂಚಿಸಿದ್ದಳು. ಅದರಂತೆ ಮಧ್ಯರಾತ್ರಿ ಕರೀಮ್ ಮನೆಗೆ ತೆರಳಿದ ಗೌಸ್, ಕರೀಮ್ ಗಂಟಲು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ. ಕರೀಮ್ ಸಹೋದರ ಹುಸೇನ್ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.





Leave a comment