ದುಬೈ: ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 72 ರನ್‌ಗಳ ಭವ್ಯ ಗೆಲುವು ಸಾಧಿಸಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ 8ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸಲು ಭಾರತ ನಿರಾಕರಿಸಿದ್ದರಿಂದ ದುಬೈ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಟ್ರೋಫಿ ಹೈಡ್ರಾಮಾ ನಡೆದಿದೆ.
ಪಂದ್ಯ ಮುಗಿದ ಬಳಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾರತ ತಂಡ ಭಾಗವಹಿಸಲಿಲ್ಲ. ಪಾಕ್ ಸಚಿವ ನಖ್ವಿ ಮೈದಾನದಿಂದ ಹೊರನಡೆಯುತ್ತಿದ್ದಂತೆ, ಗ್ಯಾಲರಿಯಲ್ಲಿದ್ದ ಭಾರತೀಯ ಅಭಿಮಾನಿಗಳು “ಟ್ರೋಫಿ ಚೋರ್ ನಖ್ವಿ” (Trophy Chor Naqvi) ಎಂದು ಗಟ್ಟಿಯಾಗಿ ಘೋಷಣೆ ಕೂಗಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬಿಸಿಸಿಐ ನಿರ್ಧಾರ ಹಾಗೂ ವಿಫಲವಾದ ಪರ್ಯಾಯಗಳು:
ಭಾರತ ತಂಡದ ಮುಖ್ಯ ತರಬೇತುದಾರ ಅಮೋಲ್ ಮುಜುಂದಾರ್ ಮಾತನಾಡಿ, “ಇದು ಬಿಸಿಸಿಐ ತಳೆದ ನಿಲುವು, ನಾವು ಅದಕ್ಕೆ ಬದ್ಧರಾಗಿದ್ದೇವೆ. ನಮಗೆ ನಾವೇ ಚಾಂಪಿಯನ್ ಎಂಬುದು ಗೊತ್ತಿದೆ, ಟೂರ್ನಿ ಮುಗಿದಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ, “ನಾವು ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದು ಮೊದಲೇ ತಿಳಿಸಿದ್ದೆವು. ಇದರ ಬದಲಾಗಿ ಎಸಿಸಿ ಉಪಾಧ್ಯಕ್ಷ ಖಾಲಿದ್ ಅಲ್ ಝರೋನಿ ಅವರಿಂದ ಅಥವಾ ಚಾಂಪಿಯನ್ ಆದ ಮಂಡಳಿಯ ಪ್ರತಿನಿಧಿಯಿಂದ ಟ್ರೋಫಿ ಹಸ್ತಾಂತರಿಸುವಂತೆ ಎರಡು ಪರ್ಯಾಯ ಪ್ರಸ್ತಾಪಗಳನ್ನು ಇಟ್ಟಿದ್ದೆವು. ಆದರೆ ನಖ್ವಿ ಇದಕ್ಕೆ ಒಪ್ಪದೆ ಮೊಂಡುತನ ಪ್ರದರ್ಶಿಸಿದರು. ಹೀಗಾಗಿ ನಾವು ಟ್ರೋಫಿ ಸ್ವೀಕರಿಸದೆ ಹೊರನಡೆದೆವು” ಎಂದಿದ್ದಾರೆ.
ಕಳೆದ ವರ್ಷ (2025) ನಡೆದ ಪುರುಷರ ಏಷ್ಯಾ ಕಪ್ ಫೈನಲ್‌ನಲ್ಲೂ ಭಾರತೀಯ ಪುರುಷರ ತಂಡ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿ, ಪ್ರಶಸ್ತಿ ಇಲ್ಲದೆಯೇ ಸಂಭ್ರಮಿಸಿ ಮರಳಿತ್ತು. ಈಗ ಮಹಿಳಾ ತಂಡವೂ ಅದೇ ಹಾದಿ ತುಳಿದು ದೇಶದ ನಿಲುವನ್ನು ಎತ್ತಿಹಿಡಿದಿದೆ.





Leave a comment